Home ಜಿಲ್ಲೆ ಕಲಬುರಗಿ 56 ಕೋಟಿ ರೂಪಾಯಿ ಮೊತ್ತದ ಏತನೀರಾವರಿ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ: ಕುಡಕಿ ಸ್ವಾಗತ

56 ಕೋಟಿ ರೂಪಾಯಿ ಮೊತ್ತದ ಏತನೀರಾವರಿ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ: ಕುಡಕಿ ಸ್ವಾಗತ

ಕಲಬುರಗಿ,ಸೆ.5-ಆಳಂದ ತಾಲೂಕಿನ 12 ಕೆರೆಗಳಿಗೆ ನೀರು ತುಂಬಿಸುವ 56 ಕೋಟಿ ರೂಪಾಯಿ ಮೊತ್ತದ ಏತ ನೀರಾವರಿ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದಕ್ಕೆ ಅಖಿಲ ಕರ್ನಾಟಕ ದಲಿತ ಸೇನೆ ರಾಜ್ಯ ಅಧ್ಯಕ್ಷ ದತ್ತಾತ್ರೇಯ ಕುಡಕಿ ಸ್ವಾಗತಿಸಿದ್ದಾರೆ. ಅಲ್ಲದೆ ಆರ್.ಕೆ. ಪಾಟೀಲರವರ ನೇತೃತ್ವದ ಪ್ರತಿಭಟನೆಗೆ ಅವರು ಬೆಂಬಲ ಸೂಚಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಅವರು, ಆಳಂದ ತಾಲೂಕಿನ 12 ಕೆರೆಗಳಿಗೆ ನೀರು ತುಂಬಿಸುವ 56 ಕೋಟಿ ರೂಪಾಯಿ ಮೊತ್ತದ ಏತ ನೀರಾವರಿ ಯೋಜನೆಗೆ ಸಚಿವ ಸಂಪುಟ ಅನುಮೋದನೀಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಕರ್ನಾಟಕ ದಲಿತ ಸೇನೆ ಅಭಿನಂದನೆ ಸಲ್ಲಿಸುತ್ತದೆ. 28.94 ಎಂಸಿಎಫ್‍ಟಿ ನೀರನ್ನು 12 ಕೆರೆಗಳಿಗೆ ಬೋರಿ ನದಿಯಿಂದ ನೀರೆತ್ತಲು ಪಂಪಿಂಗ್ ವ್ಯವಸ್ಥೆ ಮತ್ತು ಪಂಪ್ ಹೌಸ್ ವಿದ್ಯುತ್ ಉಪಕೇಂದ್ರ ಪೈಪಲೈನ್ ಹಾಗೂ ವಿತರಣಾ ಜಾಲವನ್ನು ನಿರ್ಮಿಸಲಿಕ್ಕೆ ನಿನ್ನೆ ನಡೆದ ಸಚಿವ ಸಂಪುಟದಲ್ಲಿ ಪ್ರಿಯಾಂಕ್ ಖರ್ಗೆಯವರ ಸತತ ಪ್ರಯತ್ನದಿಂದ ಅನುಮೋದನೆ ದೊರೆತಿರುವುದು ಅಖಿಲ ಕರ್ನಾಟಕ ದಲಿತ ಸೇನೆ ಸ್ವಾಗತ ಬಯಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಆಳಂದ ತಾಲೂಕಿನ ಅಮರ್ಜಾ ಆಣೆಕಟ್ಟಿಗೆ ಬೋರಿ ನದಿಯಿಂದ ನೀರು ತುಂಬಿಸುವ ಯೋಜನೆಯ ಮುಖ್ಯ ಪೈಪಲೈನ್ ಕಡಿತಗೊಳಿಸಿದ ಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರು ಮತ್ತು ಕಲಬುರಗಿ, ಬೀದರ, ಯಾದಗಿರಿ ಸಹಕಾರಿ ಹಾಲು ಮಾರಾಟ ಒಕ್ಕೂಟದ ಅಧ್ಯಕ್ಷರಾದ ಆರ್.ಕೆ. ಪಾಟೀಲ ನೇತೃತ್ವದಲ್ಲಿ ನಡೆಯುತ್ತಿರುವ ನಿರಂತರ ಪ್ರತಿಭಟನೆ ಶ್ಲಾಘನೀಯವಾದದ್ದು ಎಂದು ಅವರು ತಿಳಿಸಿದ್ದಾರೆ.
ಅಫಜಲಪೂರ ತಾಲೂಕಿನ ಅರ್ಜುಣಗಿ-ಬಡದಾಳ ಗ್ರಾಮಗಳ ನಡುವಿನ ಸುಮಾರು 500 ಮೀಟರ ಉದ್ದದ ಮುಖ್ಯ ಪೈಪ್‍ಲೈನ್ ಕಡಿತಗೊಂಡಿರುತ್ತದೆ. ಚೆನ್ನೈ-ಸೂರತ್ ಎಕ್ಸಪ್ರೆಸ್‍ವೇ ಹೆದ್ದಾರ ನಿರ್ಮಾಣ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಪೈಪಲೈನ್ ಕಡಿತಗೊಳಿಸಿದ ಅಧಿಕಾರಿಗಳು ಮರು ಜೋಡಣೆಗೆ ವಿಳಂಬ ಮಾಡಿರುವುದನ್ನು ಅಖಿಲ ಕರ್ನಾಟಕ ದಲಿತ ಸೇನೆ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಅಫಜಲಪೂರ ತಾಲೂಕಿನ 10 ಹಾಗೂ ಆಳಂದ ತಾಲೂಕಿನ 03 ಕೆರೆಗಳು ಮತ್ತು ಅಮರ್ಜಾ ಆಣೆಕಟ್ಟಿಗೆ ಬೋರಿ ನದಿಯಿಂದ ನೀರು ಪೂರೈಸುವ ಉದ್ದೇಶದ ಯೋಜನೆಗೆ 2017ರಲ್ಲಿ ಶಾಸಕರಾದ ಬಿ.ಆರ್. ಪಾಟೀಲ ಅವರ ವಿಶೇಷ ಕಾಳಜಿ ವಹಿಸಿ ಮಂಜೂರು ಮಾಡಿಸಿದ್ದರು. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಈ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. 2023ರಲ್ಲಿ ಶಾಸಕರಾಗಿ ಆಯ್ಕೆಯಾದ ಬಿ.ಆರ್. ಪಾಟೀಲ ಅವರು ಪ್ರಯತ್ನದಿಂದ ಮತ್ತೆ 450 ಕೋಟಿ ರೂ. ವೆಚ್ಚದ ಯೋಜನೆಗೆ ಚಾಲನೆ ದೊರೆತಿದೆ. ಅವರ ಪ್ರಯತ್ನ ಆಳಂದ ತಾಲೂಕಿನ ಜನರಲ್ಲಿ ಸಂತಸ ಮೂಡಿಸಿದೆ. ಆರ್.ಕೆ. ಪಾಟೀಲ ಅವರು ಆಗಸ್ಟ್ 27 ರಿಂದ ಪಾದಯಾತ್ರೆ ಮೂಲಕ ಧರಣಿ ಆರಂಭಿಸಿದ ನಂತರ ಎನ್‍ಹೆಚ್‍ಎಐ ಅಧಿಕಾರಿಗಳು ಪೈಪಲೈನ್ ಮರು ಜೋಡಣೆ ಕಾಮಗಾರಿ ಆರಂಭಿಸಿರುವುದು ಆರ್.ಕೆ. ಪಾಟೀಲ ಅವರ ಪ್ರಯತ್ನದಿಂದ ಅನ್ನುವುದನ್ನು ತಾಲೂಕಿನ ಜನತೆ ಮರೆಯಲಾರದು ಎಂದು ಅವರು ತಿಳಿಸಿದ್ದಾರೆ.