
ಕಲಬುರಗಿ: ಇಲ್ಲಿನ ಸಂತ್ರಾಸವಾಡಿಯ ಕೆಬಿಎನ್ ಟರ್ಫ್ ಮೈದಾನದಲ್ಲಿ ಶನಿವಾರ ನಡೆದ ‘ಕೆಬಿಎನ್ ಗೋಲ್ಡ್ ಕಪ್ 2026’ ಕ್ರಿಕೆಟ್ ಟೂರ್ನಿಯ ರೋಚಕ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಸೋಶಿಯಲ್ಸ್ ಕ್ರಿಕೆಟರ್ಸ್ ತಂಡವನ್ನು 21 ರನ್ಗಳಿಂದ ಮಣಿಸಿದ ಪ್ರೆಸಿಡೆಂಟ್ ಇಲೆವೆನ್ ತಂಡವು ಫೈನಲ್ಗೆ ಪ್ರವೇಶಿಸಿದೆ.
ಪಂದ್ಯಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಲಬುರಗಿ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರು ಟಾಸ್ ಪ್ರಕ್ರಿಯೆ ನೆರವೇರಿಸಿದರು.ವಿಕೆಟ್ ಕೀಪರ್-ಬ್ಯಾಟರ್ ಹಸ್ನೈನ್ ನಿಹಾನ್ ಅವರ ಜವಾಬ್ದಾರಿಯುತ ಅರ್ಧಶತಕ ಹಾಗೂ ತಂಡದ ಅತ್ಯುತ್ತಮ ಕ್ಷೇತ್ರರಕ್ಷಣೆಯ ಬಲದಿಂದ 50 ಓವರ್ಗಳ ಈ ಪಂದ್ಯದಲ್ಲಿ ಪ್ರೆಸಿಡೆಂಟ್ ಇಲೆವೆನ್ ಗೆಲುವಿನ ನಗೆ ಬೀರಿತು. 191 ರನ್ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಸೋಶಿಯಲ್ಸ್ ಕ್ರಿಕೆಟರ್ಸ್, ಪ್ರೆಸಿಡೆಂಟ್ ಇಲೆವೆನ್ ತಂಡದ ಶಿಸ್ತುಬದ್ಧ ಬೌಲಿಂಗ್ ಮತ್ತು ನಾಲ್ಕು ನಿರ್ಣಾಯಕ ರನ್-ಔಟ್ಗಳಿಗೆ ಬಲಿಯಾಗಿ 43.5 ಓವರ್ಗಳಲ್ಲಿ 170 ರನ್ಗಳಿಗೆ ಸರ್ವಪತನ ಕಂಡಿತು.
ಮೊದಲು ಬ್ಯಾಟಿಂಗ್ ಆರಂಭಿಸಿದ ಪ್ರೆಸಿಡೆಂಟ್ ಇಲೆವೆನ್ ಆರಂಭದಲ್ಲೇ ವಿವಾನ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿತು. ನಾಯಕ ಸೈಯದ್ ಮುಹಮ್ಮದ್ ಸೈಯದ್ ಹುಸೇನಿ 26 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ 22 ರನ್ ಗಳಿಸಿ ಉತ್ತಮ ಆರಂಭ ನೀಡಿದರಾದರೂ, ಪವರ್ಪ್ಲೇನಲ್ಲಿ ವಿವಾನ್ ಮೂರು ವಿಕೆಟ್ (ವಲಿ ಹುಸೇನಿ ಗೋಲ್ಡನ್ ಡಕ್ ಸೇರಿ) ಕಬಳಿಸಿದರು. ಇದರಿಂದ 11.1 ಓವರ್ಗಳಲ್ಲಿ 59 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿತು.
ಈ ಹಂತದಲ್ಲಿ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿದ ಹಸ್ನೈನ್ ನಿಹಾನ್, ಉಸ್ಮಾನ್ ಘನಿ (17 ರನ್, 46 ಎಸೆತ) ಅವರೊಂದಿಗೆ ಐದನೇ ವಿಕೆಟ್ಗೆ 46 ರನ್ಗಳ ಜೊತೆಯಾಟವಾಡಿ ಇನ್ನಿಂಗ್ಸ್ ಸ್ಥಿರಗೊಳಿಸಿದರು. ಘನಿ ವಿಕೆಟ್ ಪತನದ ಬಳಿಕ ಆಕ್ರಮಣಕಾರಿ ಆಟವಾಡಿದ ನಿಹಾನ್, 8 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್ ಸಹಿತ 80 ಎಸೆತಗಳಲ್ಲಿ 64 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ನಿಹಾನ್ ಔಟಾದ ನಂತರ ಹಶ್ಮತ್ (34 ರನ್, 62 ಎಸೆತ) ಮತ್ತು ಸೈಯದ್ ಅಯಾನ್ ಫಾರೀಸ್ (15 ರನ್) ಉಪಯುಕ್ತ ಕಾಣಿಕೆ ನೀಡಿದರು. ಅಂತಿಮವಾಗಿ ಪ್ರೆಸಿಡೆಂಟ್ ಇಲೆವೆನ್ 47.5 ಓವರ್ಗಳಲ್ಲಿ 191 ರನ್ಗಳಿಗೆ ಆಲೌಟ್ ಆಯಿತು. ವಿವಾನ್ 28 ರನ್ ನೀಡಿ 4 ವಿಕೆಟ್ ಹಾಗೂ ಶ್ವೇತಾಂಶ್ ಆರ್.ಕೆ 2 ವಿಕೆಟ್ ಪಡೆದರು.
192 ರನ್ಗಳ ಗುರಿ ಬೆನ್ನಟ್ಟಿದ ಸೋಶಿಯಲ್ಸ್ ಕ್ರಿಕೆಟರ್ಸ್ಗೆ ಆರಂಭಿಕರಾದ ಪ್ರಭಾವ್ ಪೈಡಾ (28) ಮತ್ತು ನಾಯಕ ರಯಾನ್ ತೋಮರ್ (35) ಮೊದಲ ವಿಕೆಟ್ಗೆ 54 ರನ್ ಸೇರಿಸಿ ಭದ್ರ ಬುನಾದಿ ಹಾಕಿದರು. ಆದರೆ ಪ್ರೆಶಿಯಸ್ (42ಕ್ಕೆ 2) ಈ ಇಬ್ಬರೂ ಸೆಟ್ ಬ್ಯಾಟರ್ಗಳನ್ನು ಔಟ್ ಮಾಡಿ ಪಂದ್ಯಕ್ಕೆ ತಿರುವು ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಹೃತಿಕ್ ಪೋಲಿನ್ (24) ಮತ್ತು ವಾಸ್ತವಿಕ್ (27) ಹೋರಾಟ ನಡೆಸಿದರಾದರೂ, ವಿಕೆಟ್ಗಳ ನಡುವಿನ ಕಳಪೆ ಓಟದಿಂದಾಗಿ ಸೋಶಿಯಲ್ಸ್ ತಂಡವು ವಾಸ್ತವಿಕ್, ಯಶ್ಮಿತ್ ಸಾಯಿ, ಶ್ವೇತಾಂಶ್ ಆರ್.ಕೆ ಹಾಗೂ ವಿವಾನ್ ಅವರನ್ನು ರನ್-ಔಟ್ ರೂಪದಲ್ಲಿ ಕಳೆದುಕೊಂಡು ಭಾರಿ ಬೆಲೆ ತೆತ್ತಿತು. ಕೊನೆಯಲ್ಲಿ ಧ್ರುವ್ (ಅಜೇಯ 23) ಹೋರಾಟ ನಡೆಸಿದರೂ, ಅನಿಕೇತ್ (39ಕ್ಕೆ 2) ವಿಕೆಟ್ ಕಬಳಿಸಿ ಗೆಲುವನ್ನು ಖಚಿತಪಡಿಸಿದರು. ಪ್ರೆಸಿಡೆಂಟ್ ಇಲೆವೆನ್ ತಂಡದ ಪ್ರೆಶಿಯಸ ಮತ್ತು ಹಸನೈನ್ ನಿಹಾನ್ ‘ಪಂದ್ಯಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು.
ಪ್ರಶಸ್ತಿ ಪ್ರಧಾನ್ ಸಮಾರಂಭದ ಮುಖ್ಯ ಅತಿಥಿ ಕೆಬಿಎನ ವಿವಿ ಕ್ಯಾಂಪಸ್ ನಿರ್ದೇಶಕರಾದ್ ಡಾ ಮುಸ್ತಫಾ ಅಲ್ ಹುಸ್ಸೇನಿ ಮತ್ತು ಕಾಂಗ್ರೆಸ್ ನಾಯಕ ಸಯ್ಯದ್ ಮಾಜರ ಹುಸೇನ ಪ್ರಶಸ್ತಿ ಪ್ರಧಾನ್ ಮಾಡಿದರು. ಇಂದು ಫೈನಲ್ ಪಂದ್ಯವು ಅಲ್ ಬರಕತ್ ಮತ್ತು ಪ್ರೆಸಿಡೆಂಟ್ ಥi ನಡುವೆ ನಡೆಯಲಿದೆ.




















