
ಬೆಂಗಳೂರು:ನ. ೨೯- ಕ್ಷೇತ್ರ ಮರು ವಿಂಗಡಣೆ ಜೊತೆಗಿನ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾದರೆ ದಕ್ಷಿಣ ಭಾರತದ ರಾಜ್ಯಗಳಿಗೆ ಯಾವುದೇ ಅನ್ಯಾಯವಾಗುವುದಿಲ್ಲ. ಬದಲಿಗೆ ಲಾಭವಾಗಲಿವೆ. ಈಗಾಗಲೇ ಇರುವ ಲೋಕಸಭಾ ಸ್ಥಾನಗಳ ಜೊತೆಗೆ ಶೇ ೫೦ ರಷ್ಟು ಸ್ಥಾನಗಳು ಹೆಚ್ಚಳವಾಗಲಿವೆ ಎಂದು ಕೇಂದ್ರ ಸಚಿವೆ ಕು.ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ.
ಮಲ್ಲೇಶ್ವರದ ಬಾವುರಾವ್ ದೇಶಪಾಂಡೆ ಭವನದಲ್ಲಿ ಇಂದು ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಜನಗಣತಿ ಪ್ರಕಾರ ಕ್ಷೇತ್ರ ಮರುವಿಂಗಡಣೆ ಮಾಡಿದರೆ ದಕ್ಷಿಣ ಭಾರತದ ರಾಜ್ಯಗಳಿಗೆ ಲೋಕಸಭಾ ಸ್ಥಾನಗಳು ಕಡಿಮೆ ಆಗುತ್ತದೆ ಎಂಬ ಆತಂಕ ಉಂಟಾಗಿತ್ತು. ಆದರೆ ಈಗ ಶೇಕಡಾ ೫೦ ಸ್ಥಾನ ಹೆಚ್ಚಳಕ್ಕೆ ಮುಂದಾಗಿರುವ ಕಾರಣ ದಕ್ಷಿಣದ ರಾಜ್ಯಗಳು ಆತಂಕ ಪಡಬೇಕಾಗಿಲ್ಲ ಎಂದು ಹೇಳಿದರು.
ಕರ್ನಾಟಕದಲ್ಲಿ ಕ್ಷೇತ್ರ ವಿಂಗಡಣೆ ಜೊತೆಗೆ ಮಹಿಳಾ ಮೀಸಲಾತಿ ಬಂದರೆ ೨೮ ಲೋಕಸಭಾ ಸೀಟುಗಳು ಪುರುಷರಿಗೆ ಉಳಿಯಲಿವೆ. ಇನ್ನು ೧೪ ಸ್ಥಾನ ಮಹಿಳೆಯರಿಗೆ ಸಿಗಲಿವೆ. ಇದರಿಂದ ಪುರುಷ ಅಭ್ಯರ್ಥಿಗಳು ಆತಂಕ ಪಡಬೇಕಿಲ್ಲ. ಈ ಬಾರಿಯ ಮಸೂದೆಗೆ ಬೆಂಬಲ ಸಿಗಲಿದೆ ಎಂಬ ವಿಶ್ವಾಸವಿದೆ. ನರೇಂದ್ರ ಮೋದಿ ಅವರು ಉದಾತ್ತ ಧ್ಯೇಯದೊಂದಿಗೆ ಈ ಮಸೂದೆಯನ್ನು ಯಶಸ್ವಿಗೊಳಿಸಲು ಪ್ರಯತ್ನಿಸಿದ್ದಾರೆ. ಇದರಲ್ಲಿ ಯಶಸ್ಸು ಸಿಗಲಿದೆ ಎಂಬ ಆತ್ಮವಿಶ್ವಾಸ ಇದೆ ಎಂದು ಹೇಳಿದರು.
ಮಹಿಳಾ ಮೀಸಲಾತಿ ವಿಧೇಯಕ ಕಳೆದ ಮೂವತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಬೇರೆ ಬೇರೆ ವರ್ಷಗಳಲ್ಲಿ ಹಲವು ಬಾರಿ ಸಂಸತ್ತಿನಲ್ಲಿ ತರುವ ಪ್ರಯತ್ನ ಆಗಿತ್ತು. ಆದರೆ ರಾಜಕೀಯ ಇಚ್ಛಾಶಕ್ತಿ ಕೊರತೆ ಮತ್ತು ಬೇರೆ ಬೇರೆ ಪಕ್ಷಗಳ ವಿರೋಧದಿಂದ ಅಂಗೀಕಾರವಾಗಿರಲಿಲ್ಲ ಎಂದು ವಿವರಿಸಿದರು.
ಈಗ ದೇಶದಲ್ಲಿನ ಜನಸಂಖ್ಯೆ ಸಾಕಷ್ಟು ಏರಿದೆ. ಅದಕ್ಕೆ ಪೂರಕವಾಗಿ ಲೋಕಸಭಾ ಸ್ಥಾನಗಳನ್ನೂ ಹೆಚ್ಚಳ ಮಾಡಬೇಕು ಎಂಬುದು ಈ ಮಸೂದೆ ಉದ್ದೇಶ. ೧೯೭೧ ರಲ್ಲಿ ದೇಶದ ಜನಸಂಖ್ಯೆ ಆಧಾರದ ೫೫೦ ಸೀಟು ನಿಗದಿ ಮಾಡಲಾಗಿತ್ತು. ಆಗ ದೇಶದ ಜನಸಂಖ್ಯೆ ೫೪ ಕೋಟಿ ಇತ್ತು. ಈಗ ಭಾರತದ ಜನಸಂಖ್ಯೆ ೧೪೦ ಕೋಟಿ. ಅಂದರೆ ಮೂರುಪಟ್ಟು ಜಾಸ್ತಿ ಆಗಿದೆ. ಕೆಲವೊಂದು ಲೋಕಸಭಾ ಕ್ಷೇತ್ರದಲ್ಲಿ ೩೦ ಲಕ್ಷದವರೆಗೆ ಮತದಾರರು ಇದ್ದಾರೆ. ಇಷ್ಟು ಸಂಖ್ಯೆಗೆ ಒಬ್ಬರು ಸಂಸದರು ಇದ್ದರೆ ನಿಭಾಯಿಸುವುದು ಕಷ್ಟ. ಈ ಎಲ್ಲಾ ಸಮಸ್ಯೆಗಳಿಗೆ ಕ್ಷೇತ್ರ ಮರುವಿಂಗಡಣೆ ಪರಿಹಾರ ಒದಗಿಸಲಿದೆ ಎಂದು ಹೇಳಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಯೋಚಿಸಿದಂತೆ ನರೇಂದ್ರ ಮೋದಿ ಅವರು ಹೊಸ ಚಿಂತನೆ ಹೊಂದಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರ ವಿಂಗಡಣೆ ಕೂಡ ಆಗಬೇಕು ಎಂಬುದು ಅವರ ಅಪೇಕ್ಷೆ. ಈ ವರ್ಷದ ಏಪ್ರಿಲ್ ನಲ್ಲಿ ಮಸೂದೆ ಮಂಡಿಸಿದಾಗ ದಕ್ಷಿಣ ಭಾರತದಲ್ಲಿ ಮರುವಿಂಗಡಣೆಯಿಂದ ಅನ್ಯಾಯವಾಗಲಿದೆ ಎಂಬ ಕಾರಣದಿಂದ ಸಂಸತ್ತಿನಲ್ಲಿ ಗೊಂದಲ ಆಯಿತು. ಇಂಡಿ ಒಕ್ಕೂಟದ ವಿರೋಧದಿಂದ ಅಂಗೀಕಾರ ಆಗಲಿಲ್ಲ. ಸಂವಿಧಾನ ತಿದ್ದುಪಡಿ ಮಸೂದೆ ಆದ ಕಾರಣ ಮೂರನೇ ಎರಡರಷ್ಟು ಬಹುಮತ ಬೇಕಿತ್ತು. ಆದ್ದರಿಂದ ಮಸೂದೆ ಅಂಗೀಕಾರ ಆಗಲಿಲ್ಲ. ಆಗಲೂ ಎಲ್ಲ ರಾಜ್ಯಗಳಿಗೆ ಅನ್ಯಾಯವಾಗುವುದಿಲ್ಲ ಹೆಚ್ಚುವರಿ ಸ್ಥಾನ ಸಿಗುತ್ತೆ ಎಂದು ಅಮಿತ್ ಶಾ ಅವರು ಹೇಳಿದ್ದರು ಎಂದು ತಿಳಿಸಿದರು.
ದೇಶದ ಲೋಕಸಭಾ ಸ್ಥಾನಗಳ ಸಂಖ್ಯೆ ೮೫೦ ಕ್ಕೆ ಹೆಚ್ಚಾಗಲಿವೆ. ಮೂರನೇ ಒಂದಷ್ಟು ಮಹಿಳೆಯರಿಗೆ ಮೀಸಲಾತಿ ಸಿಗಲಿದೆ. ಅದರಲ್ಲಿ ಎಸ್ಸಿ/ಎಸ್ಟಿ ಮಹಿಳೆಯೆರಿಗೆ ಮೀಸಲಾತಿ ಸಿಗಲಿದೆ ಎಂಬುದು ಮಸೂದೆಯ ಪ್ರಮುಖಾಂಶ. ವಿಧಾನಸಭೆಯಲ್ಲಿ ಕೂಡ ಸ್ಥಾನಗಳ ಹೆಚ್ಚಳ ಆಗುತ್ತದೆ. ಆಗ ಪುರುಷರು ಆತಂಕ ಪಡಬೇಕಾಗಿಲ್ಲ ಎಂದರು.
ದಕ್ಷಿಣ ಭಾರತದಲ್ಲಿನ ಜನಸಂಖ್ಯೆ ಉತ್ತರ ಭಾರತಕ್ಕಿಂತ ಕಡಿಮೆ ಇದೆ. ಇಂಡಿ ಮೈತ್ರಿಕೂಟ ಸಂಸತ್ತಿನ ಒಳಗೆ ಮತ್ತು ಹೊರಗೆ ಗೊಂದಲ ಸೃಷ್ಟಿಸಿತು. ವಿಶೇಷವಾಗಿ ರಾಹುಲ್ ಗಾಂಧಿ ಅವರು ಪ್ರಬಲವಾಗಿ ವಿರೋಧಿಸಿದರು. ಮಸೂದೆ ಅಂಗೀಕಾರ ಆಗದ ರೀತಿ ನೋಡಿದರು. ಆದರೆ ಈ ಬಾರಿ ಅಂತಹ ಗೊಂದಲ ಮತ್ತು ವಿರೋಧ ಆಗುವುದಿಲ್ಲ. ಮಸೂದೆ ಯಶಸ್ವಿಯಾಗಿ ಅಂಗೀಕಾರವಾಗಲಿದೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು.





















