
ಬೆಂಗಳೂರು,ನ.೨೯-ಡಿಸೆಂಬರ್ ಆರಂಭದ ವರೆಗೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿಯುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ನವೆಂಬರ್ ೨೯ರಿಂದ ಡಿಸೆಂಬರ್ ೧ರ ವರೆಗೆ ರಾಜ್ಯದ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಭಾಗಗಳಲ್ಲಿ ಯಾವುದೇ ಮಳೆಯ ಮುನ್ಸೂಚನೆಯಿಲ್ಲ.
ಮುಂದಿನ ಮೂರು ದಿನಗಳ ಕಾಲ ರಾಜ್ಯದಲ್ಲಿ ಗುಡುಗು ಸಹಿತ ಮಳೆಯ ಎಚ್ಚರಿಕೆಗಳಿಲ್ಲ. ಅಲ್ಲದೆ, ಕನಿಷ್ಠ ತಾಪಮಾನದಲ್ಲೂ ಯಾವುದೇ ಗಮನಾರ್ಹ ಬದಲಾವಣೆಗಳು ಕಂಡುಬರುವ ಸಾಧ್ಯತೆಯಿಲ್ಲ. ಆದರೆ, ಕೆಲವು ಜಿಲ್ಲೆಗಳಲ್ಲಿ ಮುಂಜಾನೆ ವೇಳೆ ಮಂಜು ಹಾಗೂ ರಾತ್ರಿಯ ಸಮಯದಲ್ಲಿ ಚಳಿಯ ವಾತಾವರಣ ಇರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಡಿಸೆಂಬರ್ ೧ರ ವರೆಗೆ ಒಣಹವೆ ಇರಲಿದೆ. ಮಳೆಯ ಆತಂಕವಿಲ್ಲದ ಕಾರಣ ಕರಾವಳಿ ಭಾಗದ ಜನರು ಮೀನುಗಾರಿಕೆ, ಕೃಷಿ ಸೇರಿದಂತೆ ತಮ್ಮ ದೈನಂದಿನ ಹಾಗೂ ಹೊರಾಂಗಣ ಚಟುವಟಿಕೆಗಳನ್ನು ನಿರಾತಂಕವಾಗಿ ಮುಂದುವರಿಸಬಹುದಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆಯ ಸಾಧ್ಯತೆ ತೀರಾ ಕಡಿಮೆಯಿದ್ದು, ಸ್ವಚ್ಛ ಅಥವಾ ಭಾಗಶಃ ಮೋಡ ಕವಿದ ಆಕಾಶದೊಂದಿಗೆ ಒಣಹವೆ ಕಂಡುಬರಲಿದೆ. ಬೆಂಗಳೂರು ಮತ್ತು ದಕ್ಷಿಣ ಒಳನಾಡಿನಲ್ಲಿ ಹಗಲಿನ ವೇಳೆ ೨೭ ರಿಂದ ೨೮ ಡಿಗ್ರಿ ಸೆಲ್ಸಿಯಸ್ನಷ್ಟು ಆಹ್ಲಾದಕರ ತಾಪಮಾನವಿರಲಿದ್ದು, ರಾತ್ರಿ ಮತ್ತು ಮುಂಜಾನೆ ವೇಳೆ ತಾಪಮಾನವು ೧೫ ರಿಂದ ೧೭ ಡಿಗ್ರಿ ಸೆಲ್ಸಿಯಸ್ಗೆ ಇಳಿಕೆಯಾಗಿ ತಂಪಾದ ವಾತಾವರಣ ಇರಲಿದೆ.
?ಒಣಹವೆ ಮುಂದುವರಿಯಲಿರುವ ಪ್ರಮುಖ ಜಿಲ್ಲೆಗಳು:
ಹವಾಮಾನ ಇಲಾಖೆಯ ವರದಿಯಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಡಿಸೆಂಬರ್ ೧ರ ವರೆಗೂ ಇದೇ ರೀತಿಯ ಒಣಹವೆಯ ವಾತಾವರಣ ಮುಂದುವರಿಯಲಿದೆ.





















