
ಯಾದಗಿರಿ: ಸಂವಿಧಾನ ಆಧಾರಿತ ಪ್ರಬುದ್ಧ ಭಾರತ ನಿರ್ಮಾಣದ ಉದ್ದೇಶದಿಂದ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಬೌದ್ಧ ಧಮ್ಮದ ಸಂಕಲ್ಪವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆ ಆಯೋಜಿಸಲಾಗಿದೆ ಎಂದು ನಗರಸಭೆ ಮಾಜಿ ಸದಸ್ಯ ಹಾಗೂ ಡಿಎಸ್ಎಸ್ ಮುಖಂಡ ಮರೆಪ್ಪ ಚಟ್ಟೆರಕರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತರಾಷ್ಟ್ರೀಯ ಬೌದ್ಧ ಯುವ ಸಂಘಟನೆ ಇಂಡಿಯಾ, ಗ್ಲೋಬಲ್ ಡಾ. ಅಂಬೇಡ್ಕರ್ ಬೌದ್ಧ ಮಿಷನ್, ಯುಎಸ್ಎ, ಅಖಿಲ ಭಾರತ ಡಾ. ಅಂಬೇಡ್ಕರ್ ಭಿಕ್ಕು ಸಂಘ ಹಾಗೂ ಬೌದ್ಧ ಮಹಾಸ್ತೂಪ ಅಭಿವೃದ್ಧಿ ಮತ್ತು ಸಂರಕ್ಷಣಾ ಸಂಸ್ಥೆ, ಸನ್ನತಿ (ಕನಗನಹಳ್ಳಿ) ಇವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆ-2026 ಹಮ್ಮಿಕೊಳ್ಳಲಾಗಿದೆ ಎಂದರು.
ಕಲಬುರಗಿ ನಗರದ ಜಗತ್ ವೃತ್ತದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಯಿಂದ ಅ.5ರಂದು ಬೆಳಿಗ್ಗೆ 10.30ಕ್ಕೆ ಯಾತ್ರೆಗೆ ಚಾಲನೆ ನೀಡಲಾಗುವುದು. ವಿವಿಧ ಜಿಲ್ಲೆಗಳ ಮೂಲಕ ಸಾಗುವ ಯಾತ್ರೆ ನ.1ರಂದು ಬೆಳಿಗ್ಗೆ 11 ಗಂಟೆಗೆ ಸನ್ನತಿಯ ಪ್ರಾಚೀನ ಸಾಮ್ರಾಟ್ ಅಶೋಕ ಸ್ತೂಪದ ಆವರಣದಲ್ಲಿ ಸಮಾರೋಪಗೊಳ್ಳಲಿದೆ ಎಂದು ತಿಳಿಸಿದರು.
ನ.1ರಂದು ಸನ್ನತಿಯಲ್ಲಿ ನಡೆಯಲಿರುವ ಬೃಹತ್ ಸಮಾರಂಭದಲ್ಲಿ ಸುಮಾರು 5 ಲಕ್ಷ ಉಪಾಸಕ-ಉಪಾಸಿಕೆಯರು ಬೌದ್ಧ ಧಮ್ಮ ದೀಕ್ಷೆ ಸ್ವೀಕರಿಸುವ ಉದ್ದೇಶ ಹೊಂದಲಾಗಿದೆ. ಇದು ಬೌದ್ಧ ಧಮ್ಮದ ಇತಿಹಾಸದಲ್ಲಿ ಮಹತ್ವದ ಕಾರ್ಯಕ್ರಮವಾಗಲಿದೆ ಎಂದು ಅವರು ಹೇಳಿದರು.
ಭಾರತ ಸಂವಿಧಾನವನ್ನು ಅಂಗೀಕರಿಸಿ 76 ವರ್ಷಗಳು ಪೂರ್ಣಗೊಂಡಿದ್ದು, ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಬಂಧುತ್ವದಂತಹ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ. ಇದೇ ಮೌಲ್ಯಗಳನ್ನು ಸಮಾಜದಲ್ಲಿ ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಮರೆಪ್ಪ ಚಟ್ಟೆರಕರ್ ಹೇಳಿದರು.
ತಥಾಗತ ಭಗವಾನ್ ಬುದ್ಧರ ಕಾಲದಿಂದ ಸಾಮ್ರಾಟ್ ಅಶೋಕ ಸೇರಿದಂತೆ ಹಲವು ಬೌದ್ಧ ರಾಜರು ಧಮ್ಮದ ಮಾನವೀಯ ತತ್ವಗಳ ಆಧಾರದ ಮೇಲೆ ಆಡಳಿತ ನಡೆಸಿದ್ದಾರೆ. ಸಮಾನತೆ, ನ್ಯಾಯ ಮತ್ತು ಕರುಣೆಯ ಮೌಲ್ಯಗಳನ್ನು ಸಮಾಜದಲ್ಲಿ ಪುನಃ ಸ್ಥಾಪಿಸುವ ಉದ್ದೇಶದಿಂದ ಧಮ್ಮ ಜನಜಾಗೃತಿ ಯಾತ್ರೆ ನಡೆಸಲಾಗುತ್ತಿದೆ ಎಂದರು.
1956ರ ಅ.14ರಂದು ನಾಗಪುರದ ದೀಕ್ಷಾಭೂಮಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧಮ್ಮವನ್ನು ಸ್ವೀಕರಿಸಿ, ಪ್ರಬುದ್ಧ ಭಾರತದ ನಿರ್ಮಾಣದ ಮಹತ್ವದ ಸಂದೇಶವನ್ನು ನೀಡಿದ್ದರು. ಆ ಸಂಕಲ್ಪವನ್ನು ಮುಂದುವರಿಸುವ ನಿಟ್ಟಿನಲ್ಲಿ ಕರ್ನಾಟಕದಾದ್ಯಂತ ಧಮ್ಮ ಜನಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಐತಿಹಾಸಿಕ ಸನ್ನತಿ-ಕನಗನಹಳ್ಳಿ ಪ್ರದೇಶವು ಕರ್ನಾಟಕ ಮಾತ್ರವಲ್ಲದೆ ದೇಶದ ಅಮೂಲ್ಯ ಬೌದ್ಧ ಪರಂಪರೆಯ ಪ್ರಮುಖ ತಾಣವಾಗಿದೆ. ಇಲ್ಲಿನ ಬೌದ್ಧ ಸ್ಮಾರಕಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ಅಂಬೇಡ್ಕರ್ವಾದಿಗಳು, ಬೌದ್ಧ ಅನುಯಾಯಿಗಳು, ಭಿಕ್ಕು ಸಂಘ, ಉಪಾಸಕ-ಉಪಾಸಿಕಾ ಸಂಘಗಳು, ಸಾಮಾಜಿಕ ಮತ್ತು ರಾಜಕೀಯ ಮುಖಂಡರು, ಪರಿಶಿಷ್ಟ ಜಾತಿ-ಪಂಗಡಗಳು, ಇತರೆ ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲ ಬಹುಜನ ಸಂಘಟನೆಗಳು ಈ ಐತಿಹಾಸಿಕ ಅಭಿಯಾನಕ್ಕೆ ಸಹಕಾರ ನೀಡಬೇಕು. ತಮ್ಮ ಕೈಲಾದ ರೀತಿಯಲ್ಲಿ ಸಹಾಯ ಮಾಡಿ, ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಶರಣು ನಟೆಕಾರ್, ಗೋಪಾಲ್ ತಳಿಗೇರಿ, ಭಗವಾನ್ ಅನವಾರ್, ಬಾಬಾರಾವ್ ಕಾಡ್ಲೂರು, ಸೈದಪ್ಪ ಕುಲೂರಕರ್, ಕಾಶೀನಾಥ್ ನಟೆಕಾರ್, ತಿಪ್ಪಣ್ಣ ಲಿಂಗನಕರ್, ನಿಂಗಪ್ಪ ಬಿರ್ನಾಳ, ಹೊನಪ್ಪ ನಟೆಕಾರ್, ಸರ್ವೋದಯ ಶಿವಪುತ್ರ, ಭೀಮಪ್ಪ ಕಾಗೆ, ಚಂದ್ರಕಾಂತ್ ಚಲವಾದಿ, ಶಂಕರ್ ಕೊಂಡೆ ಹಾಗೂ ಭೀಮರಾಯ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.






















