
ಸಂಜೆ ವಾಣಿ ವಾರ್ತೆ,
ಜಮಖಂಡಿ, ಜು.೧: ತಾಲೂಕಿನ ಬುದ್ನಿ ಗ್ರಾಮದಲ್ಲಿ ಆಗಿಹುಣ್ಣಿಮೆ ಅಂಗವಾಗಿ ಕರಿಸಿದ್ದೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿAದ ಜರುಗಿತು.
ಬುದ್ನಿ ಗ್ರಾಮಕ್ಕೆ ಪ್ರತಿವರ್ಷ ಆಗಿಹುಣ್ಣಿಮೆಯ ಸಂದರ್ಭದಲ್ಲಿ ಕರಿಸಿದ್ದೇಶ್ವರ ಅಡವ್ಯಾಗ ಆಗಮಿಸುವುದು ಗ್ರಾಮಸ್ಥರ ಭಕ್ತಿಯ ಸಂಕೇತವಾಗಿದೆ ಎಂದು ಮುಖಂಡ ಬಸವರಾಜ ಯರನಾಳ ಹೇಳಿದರು.
ಅವರು ಮಾತನಾಡಿ, ಪ್ರತಿವರ್ಷ ಕರಿಸಿದ್ದೇಶ್ವರರು ಬುದ್ನಿ ಗ್ರಾಮಕ್ಕೆ ಆಗಮಿಸಿ ಸುಮಾರು ಒಂದು ತಿಂಗಳ ಕಾಲ ಬುದ್ನಿ ಹಾಗೂ ಪಕ್ಕದ ಗ್ರಾಮಗಳಾದ ಲಿಂಗನೂರ, ಕೊನ್ನೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಂಚರಿಸಿ ಭಕ್ತರ ಮನೆಗಳಿಗೆ ಭೇಟಿ ನೀಡುತ್ತಾರೆ. ಈ ವೇಳೆ ಭಕ್ತರ ಕೋರಿಕೆಗಳನ್ನು ಆಲಿಸಿ ಅವುಗಳನ್ನು ಈಡೇರಿಸುವ ಕಾರ್ಯ ಮಾಡುತ್ತಾರೆ ಎಂದು ತಿಳಿಸಿದರು.
ಕರಿಸಿದ್ದೇಶ್ವರರು ಗ್ರಾಮಕ್ಕೆ ಆಗಮಿಸುವುದರಿಂದ ಗ್ರಾಮಸ್ಥರಿಗೆ ಬಹಳ ಅನುಕೂಲವಾಗಿದ್ದು, ದೇವರು ಭೇಟಿ ನೀಡಿದ ಮನೆಗಳಲ್ಲಿ ಸುಖ, ಶಾಂತಿ ಹಾಗೂ ಸಮೃದ್ಧಿ ನೆಲೆಸುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಪ್ರತಿವರ್ಷ ಆಗಿಹುಣ್ಣಿಮೆಯ ಕೊನೆಯ ದಿನ ಕರಿಸಿದ್ದೇಶ್ವರರು ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಕೊನ್ನೂರ ಗ್ರಾಮಕ್ಕೆ ಮರಳುತ್ತಾರೆ. ಈ ಸಂದರ್ಭದಲ್ಲಿ ಗ್ರಾಮ ಮಹಿಳೆಯರು ಹಾಗೂ ಮುತ್ತೈದಿಯರು ಕುಂಭಾರತಿ ನೆರವೇರಿಸಿ ಭಕ್ತಿಭಾವದಿಂದ ಬೀಳ್ಕೊಡುತ್ತಾರೆ ಎಂದರು.
ಆಗಿಹುಣ್ಣಿಮೆ ಅಂಗವಾಗಿ ನಡೆದ ಕರಿಸಿದ್ದೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ ವಿವಿಧ ವಾದ್ಯಮೇಳಗಳೊಂದಿಗೆ ವಿಜೃಂಭಣೆಯಿAದ ಸಾಗಿತು. ನೂರಾರು ಮುತ್ತೈದಿಯರು ಆರತಿ ಹಾಗೂ ಕುಂಭ ಹೊತ್ತು ಮೆರವಣಿಗೆಗೆ ಮೆರಗು ತಂದರು. ಭಕ್ತರು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಖ್ಯಾತ ಜಾನಪದ ಗಾಯಕ ವೀರು ಜಮಖಂಡಿ ಜಾನಪದ ಗೀತೆಗಳನ್ನು ಹಾಡುವ ಮೂಲಕ ನೆರೆದಿದ್ದ ಭಕ್ತರ ಮನಸೂರೆಗೊಂಡರು. ಅವರ ಗಾಯನ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.
ಪಲ್ಲಕ್ಕಿ ಮೆರವಣಿಗೆಯು ಬುದ್ನಿ ಗ್ರಾಮದ ಬಸವೇಶ್ವರ ದೇವಸ್ಥಾನದಿಂದ ಆರಂಭವಾಗಿ, ಹನುಮಾನ್ ಮಂದಿರ, ದುರ್ಗಾದೇವಿ ಮಂದಿರ, ಬೀರೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ, ನಂತರ ಕೊನ್ನೂರ ಗ್ರಾಮಕ್ಕೆ ತೆರಳಿತು.
ಇದೇ ಸಂದರ್ಭದಲ್ಲಿ ಪೂಜ್ಯರಾದ ಸಿದ್ದು ಎಣ್ಣಿ, ನಿಂಗಪ್ಪ ಎಣ್ಣಿ, ಸುರೇಶ್ ಪಡಕಿಮನಿ, ಸೋಮರಾಯ ಗಾಡದ ಸೇರಿದಂತೆ ಇತರ ಪೂಜ್ಯರು ಭಕ್ತಿಗೀತೆಗಳಿಗೆ ಹೆಜ್ಜೆ ಹಾಕಿ ಭಕ್ತರ ಗಮನ ಸೆಳೆದರು.
ಮೆರವಣಿಗೆಯಲ್ಲಿ ಗ್ರಾಮಸ್ಥರು, ಭಕ್ತರು ಹಾಗೂ ವಿವಿಧ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.
ಒಟ್ಟಾರೆಯಾಗಿ ಕರಿಸಿದ್ದೇಶ್ವರರು ಗ್ರಾಮಕ್ಕೆ ಆಗಮಿಸುವುದರಿಂದ ಮಳೆ, ಬೆಳೆ ಹಾಗೂ ಸುಖ-ಸಂಪತ್ತು ಲಭಿಸುತ್ತಿದ್ದು, ಗ್ರಾಮದಲ್ಲಿ ಸಮೃದ್ಧಿ ನೆಲೆಸಿದೆ ಎಂದು ಬಸವರಾಜ ಯರನಾಳ ಅಭಿಪ್ರಾಯಪಟ್ಟರು.































