
ಭಾಲ್ಕಿ: ಎಲ್ಲಾ ಭಾಷೆಗಳಲ್ಲಿಯೂ ಕನ್ನಡ ಭಾಷೆ ಸುಲಲಿತ, ಸುಂದರ ಭಾಷೆಯಾಗಿದೆ. ಸ್ವತಂತ್ರ ಲಿಪಿ ಹೊಂದಿರುವ ಉತ್ತಮ ಭಾಷೆ ಕನ್ನಡ, ಸುಂದರ ಲಿಪಿಗಳನ್ನು ಹೊಂದಿರುವ ಕನ್ನಡಕ್ಕೆ ಲಿಪಿಗಳ ರಾಣಿಯೆಂದು ಕರೆಯುತ್ತಾರೆ ಎಂದು ಹಿರಿಯ ಸಾಹಿತಿ, ಖ್ಯಾತವೈದ್ಯೆ ಡಾ| ವಿಜಯಲಕ್ಷ್ಮಿ ಬಾಳೆಕುಂದ್ರೆ ಹೇಳಿದರು.
ಪಟ್ಟಣದ ಕಾರಂಜಾ ರೈತ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗು ಕಸಾಪ ತಾಲೂಕು ಘಟಕದ ವತಿಯಿಂದ ಮಂಗಳವಾರ ನಡೆದ ಜಿಲ್ಲಾ ಮಟ್ಟದ 3ನೇ ಮಹಿಳಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಮುಟ್ಟಿದ ಸಾಹಿತ್ಯಗಳಿಲ್ಲ, ಆದರೆ ಇದುವರೆಗೂ ಒಬ್ಬ ಮಹಿಳೆಗೂ ಜ್ಞಾನಪೀಠ ಪ್ರಶಸ್ತಿ ದೊರೆತಿಲ್ಲ, ನೂರು ವರ್ಷಗಳಲ್ಲಿ ಒಬ್ಬ ಮಹಿಳೆಯೂ ಪ್ರತಿಷ್ಠಿತ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿಲ್ಲ. ಇದು ನಾವು ವಿಚಾರ ಮಾಡುವ ಸಂಗತಿಯಾಗಿದೆ. ಹನ್ನೆರಡನೇ ಶತಮಾನದಿಂದಲೂ ಬಸವಣ್ಣನವರು, ಅಲ್ಲಮಪ್ರಭುಗಳು ಬಿಟ್ಟರೇ ಅತಿ ಹೆಚ್ಚು ವಚನಗಳನ್ನು ರಚಿಸಿದವರು ಅಕ್ಕ ನಾಗಮ್ಮನವರಾಗಿದ್ದಾರೆ. ಅಕ್ಕಮಹಾದೇವಿ ಆತ್ಮೋಧಾರ ಮಾಡಿಕೊಂಡರೆ, ಅಕ್ಕನಾಗಮ್ಮ ಲೋಕೋಧಾರ ಮಾಡಿದ್ದಾರೆ. ನಮ್ಮ ಹೆಣ್ಣುಮಕ್ಕಳು ಅಕ್ಕನಾಗಮ್ಮನಂತಾಗಬೇಕು. ಕನ್ನಡದ ಪ್ರಥಮ ಮಹಿಳಾ ಪತ್ರಕರ್ತೆ ಚಿ.ನಾ.ಮಂಗಳಾ ಅವರು ಮಹಿಳೆಯರಿಗೆ ಶಕ್ತಿ ಶರಧಿ ಎಂದು ಕರೆದಿದ್ದಾರೆ. ಶಕ್ತಿ ಶರಧಿಯಂದರೆ ಮಹಿಳೆಯರು ಸಮುದ್ರದಂತೆ ಶಕ್ತಿಯುತವಾಗಿದ್ದಾರೆ ಎಂದರ್ಥ, ಮಹಿಳೆಯರು ತೀಕ್ಷ್ಣವಾಗಿ ಬರೆಯುವ ಸಾಹಿತ್ಯಕಾರರಾಗಬೇಕು ಎಂದು ಹೇಳಿದರು. ಜಿಲ್ಲಾಮಟ್ಟದ 2ನೇ ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ನೀಲಾ.ಕೆ ರವರು ಪರಿಷತ್ತಿನ ಧ್ವಜ ಹಸ್ತಾಂತರಿಸಿ ಮಾತನಾಡಿದರು. ಹಿರಿಯ ಸಾಹಿತಿ ಮಲ್ಲಮ್ಮಾ.ಆರ್.ಪಾಟೀಲ ಸಮ್ಮೇಳನಾಧ್ಯಕ್ಷರ ನುಡಿ ನುಡಿದರು. ಅಖಿಲ ಭಾರತ ಶರಣ ಸಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ| ಸಿ.ಸೋಮಶೇಖರ ಧನ್ಯಜೀವನ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದರು. ಕಸಾಪ ಜಿಲ್ಲಾದ್ಯಕ್ಷ ಸುರೇಶ ಚನಶೆಟ್ಟಿ ಆಶಯನುಡಿ ನುಡಿದರು. ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಪ್ರಾಸ್ತಾವಿಕ ಮಾತನಾಡಿದರು. ನಾಡೋಜ ಡಾ| ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು, ಡಾ| ಶಿವಾನಂದ ಮಹಾಸ್ವಾಮಿಗಳು ಹುಲಸೂರು ದಿವ್ಯ ನೇತೃತ್ವ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರೇಮಠದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಸ್ವಾಗತಿ ಸಮಿತಿ ಅಧ್ಯಕ್ಷೆ ಡಾ| ಗೀತಾ ಈಶ್ವರಖಂಡ್ರೆ, ಚಂದ್ರಕಾಂತ ಗಂಗಶೆಟ್ಟಿ, ಸೋಮಶೇಖರ ಬಿರಾದಾರ ಚಿದ್ರಿ, ಶಕುಂತಲಾ ಬೆಲ್ದಾಳೆ, ಡಾ| ಗೌರಮ್ಮ ಸಿದ್ದಾರೆಡ್ಡಿ, ಡಾ| ವಿಜಯಕುಮಾರ ಪಾಟೀಲ, ಪ್ರೊ| ಓಂಪ್ರಕಾಶ ಧಡ್ಡೆ, ಶಿವಕುಮಾರ ಕೋಸಮ, ಡಾ| ಪ್ರಭು.ಎಸ್, ಶಿವಶಂಕರ ಬಾಮಂಡಿ, ಬಸವರಾಜ ದನ್ನೂರ, ಡಾ| ವಿದ್ಯಾವತಿ ಬಲ್ಲೂರ, ಸುನಿತಾ ದಾಡಗೆ, ಪ್ರೊ| ಮಂಗಲಾ ಪಾಟೀಲ, ರಮೇಶ ಚಿದ್ರಿ, ಕಾಶಿನಾಥ ಲದ್ದೆ, ಅಶೋಕ ಬಾವುಗೆ, ಮಲ್ಲಿಕಾರ್ಜುನ ಕುಂಚಗೆ, ಸಂತೋಷ ಬಿಜಿಪಾಟೀಲ, ಮಲ್ಲಿಕಾರ್ಜನ ಹಲಮಂಡಗೆ ಉಪಸ್ಥಿತರಿದ್ದರು. ಮಧುಪ್ರಿಯಾ ಅರಳಿ ತಂಡದವರು ಜಾನಪದ ಗೀತೆ ಮತ್ತು ನಾಡಗೀತೆ ಪ್ರಸ್ತುತ ಪಡಿಸಿದರು. ಸದ್ಗುರು ವಿದ್ಯಾಲಯದ ವಿದ್ಯಾರ್ಥಿಗಳು ವಚನ ನೃತ್ಯ ನಡೆಸಿಕೊಟ್ಟರು. ನಾಗಭೂಷಣ ಮಾಮಡಿ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಿಸಿದರು. ಸಂತೋಷ ಪಾಟೀಲ ವಂದಿಸಿದರು.
ಮಹಿಳೆಯರು ಮನಸ್ಸುಮಾಡಿದರೆ ಎಲ್ಲವೂ ಸಾಧ್ಯ. ಒತ್ತಡದ ಮಧ್ಯ ಬದುಕು ಸಾಗಿಸುವ ಮಹಿಳೆಯರಿಗೆ ಗೌರವ ಕೊಡುವ ಕಾರ್ಯವಾಗಬೇಕು. – ಸುರೇಶ ಚನಶೆಟ್ಟಿ, ಜಿಲ್ಲಾಧ್ಯಕ್ಷರು, ಕಸಾಪ ಬೀದರ.






























