
ಸೈದಾಪುರ:ಜೂ.೧೭:ಕನಕದಾಸರ ಚಿಂತನೆಗಳು ಇಂದಿನ ಸಮಾಜಕ್ಕೆ ಪ್ರಸ್ತುತವಾಗಿದ್ದೂ, ವಿದ್ಯಾರ್ಥಿಗಳು ಅವರ ಸಾಹಿತ್ಯ, ತತ್ವ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಅಭಿಪ್ರಾಯಪಟ್ಟರು.
ಪಟ್ಟಣದ ಮಲ್ಹಾರ ಕಾರಡ್ಡಿ ಬಸವಂತರಾಯ ಮತ್ತು ಸಿದ್ದಪ್ಪ ಸ್ಮಾರಕ ವಿದ್ಯಾವರ್ಧಕ ಕಲಾ ಪದವಿ ಪೂರ್ವ ಕಾಲೇಜಿನಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕಲಾನಿಕೇತನ ಟ್ರಸ್ಟ್ ಸಗರ ಸಹಯೋಗದಲ್ಲಿ ಹಮ್ಮಿಕೊಂಡ ಕನಕ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕನಕದಾಸರ ಮೌಲ್ಯಯುತ ಕೃತಿಗಳು ಓದಿ ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಡಿ.ಎಲ್.ಇಡಿ ಕಾಲೇಜಿನ ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಕನಕದಾಸರ ನಿಲುವುಗಳು ಕೇವಲ ಭಕ್ತಿಯ ಆಚರಣೆಗೆ ಸೀಮಿತವಾಗಿರದೆ. ಸಾಮಾಜಿಕ ಅಸಮಾನತೆ ಮೌಡ್ಯ ಮತ್ತು ಕಂದಾಚಾರಗಳ ವಿರುದ್ಧ ತಾರ್ಕಿಕ ಬಂಡಾಯದ ಧ್ವನಿಯಾಗಿದ್ದವು. ಕುರುಡ ನಂಬಿಕೆಯನ್ನು ಒಪ್ಪದೇ ತರ್ಕಕ್ಕೆ ಇಳಿದು ಸತ್ಯಾ ಸತ್ಯತೆ ತಿಳಿಯುವುದರ ಜೊತೆಗೆ ಕೀರ್ತನೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಸಮಾಜವನ್ನು ಸುಧಾರಣೆ ಮಾಡಿದರು. ಅವರ ವಿಚಾರಧಾರೆಗಳು ಉತ್ತಮ ವ್ಯಕ್ತಿತ್ವವನ್ನು ನಿರ್ಮಾಣ ಮಾಡುತ್ತವೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಜಿ.ಎಂ.ಗುರುಪ್ರಸಾದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಹಂಪಣ್ಣ ಸಜ್ಜನಶೆಟ್ಟಿ, ಉಪನ್ಯಾಸಕರಾದ ದೇವಿಂದ್ರ ಪೀರಾ, ಬಸವರಾಜ ಭರಮಶೆಟ್ಟಿ, ಶಾಂತಲ.ಎನ್, ಅನುರಾಧ, ಇಂದಿರ.ಆರ್.ತೂರೆ, ಸದಾಶಿವ, ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು. ಸಗರದ ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ ಪ್ರಾಸ್ತಾವಿಕ ಮಾತನಾಡಿದರು. ದೈಹಿಕ ಉಪನ್ಯಾಸಕ ರಾಜಶೇಖರ ಪಾಟೀಲ್ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಚಂದ್ರಶೇಖರ ಡೊಣ್ಣೆಗೌಡ ನಿರೂಪಿಸಿದರು.


























