Home ಜಿಲ್ಲೆ ಕಲಬುರಗಿ ಬೆಳೆ ವಿಮೆ ಅನ್ಯಾಯ ಖಂಡಿಸಿ ಕಾಳಗಿ ತಾಲೂಕು ಬಂದ್

ಬೆಳೆ ವಿಮೆ ಅನ್ಯಾಯ ಖಂಡಿಸಿ ಕಾಳಗಿ ತಾಲೂಕು ಬಂದ್

ಕಾಳಗಿ: ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ 2025-26ನೇ ಸಾಲಿನಲ್ಲಿ ಬೆಳೆ ವಿಮೆ ಮಾಡಿಸಿರುವ ತಾಲೂಕಿನ ರೈತರಿಗೆ ಸಮರ್ಪಕ ಪರಿಹಾರ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ, ರೈತರಿಗೆ ನ್ಯಾಯ ಒದಗಿಸಬೇಕು ಹಾಗೂ ಕಾಳಗಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ಮಂಗಳವಾರ ಕಾಳಗಿ ತಾಲೂಕು ಬಂದ್ ನಡೆಸಲಾಯಿತು.

ತಾಲೂಕಿನ ಬಹುತೇಕ ರೈತರು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ್ದಾರೆ. ಆದರೆ ಅತಿವೃಷ್ಟಿ ಹಾಗೂ ಪ್ರತಿಕೂಲ ಹವಾಮಾನದಿಂದ ಬೆಳೆಗಳು ಹಾನಿಗೊಳಗಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಬೆಳೆ ವಿಮೆ ಪರಿಹಾರ ನೀಡುವುದಾಗಿ ಘೋಷಿಸಿದ್ದರೂ, ಕಾಳಗಿ ತಾಲೂಕಿನ ಬೆಳೆ ಕಟಾವು ಅಧಿಕಾರಿಗಳು ಹಾಗೂ ವಿಮಾ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ವರದಿ ಸಲ್ಲಿಸದೆ ತಪ್ಪು ಅಥವಾ ಅಪೂರ್ಣ ಮಾಹಿತಿ ನೀಡಿರುವುದರಿಂದ ರೈತರಿಗೆ ಅನ್ಯಾಯವಾಗಿದೆ ಎಂದು ರೈತ ಮುಖಂಡರು ಆರೋಪಿಸಿದರು.

ಬೆಳೆ ವಿಮೆ ಪರಿಹಾರ ಸಮರ್ಪಕವಾಗಿ ದೊರೆಯದ ಕಾರಣ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ. ಕೆಲ ರೈತರು ಸಾಲದ ಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿರುವುದು ದುರಂತವಾಗಿದ್ದು, ಸರ್ಕಾರ ಕಾಳಗಿ ತಾಲೂಕಿನ ರೈತರ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಸಕ್ತ ವರ್ಷವೂ ಸಮರ್ಪಕವಾಗಿ ಮಳೆಯಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಎರಡು-ಮೂರು ಬಾರಿ ಬಿತ್ತನೆ ಮಾಡಿ ಹಣ ಖರ್ಚು ಮಾಡಿರುವ ರೈತರು ಸಾಲದ ಭಾರ ಹೆಚ್ಚಿಸಿಕೊಂಡಿದ್ದಾರೆ. ಹೀಗಾಗಿ ಸರ್ಕಾರ ಕೂಡಲೇ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಧರಣಿ ನಿರತ ರೈತರ ಮನವಿಗೆ ಸೇಡಂ ಡಿಡಿ ಅನುಸೂಯಾ ಹೂಗಾರ ಹಾಗೂ ಚಿತ್ತಾಪುರ-ಚಿಂಚೋಳಿ ಎಡಿ ಅಧಿಕಾರಿಗಳು ಆಗಮಿಸಿ ರೈತರೊಂದಿಗೆ ಮಾತುಕತೆ ನಡೆಸಿದರು. ಆದರೆ ರೈತರು ತಮ್ಮ ಬೇಡಿಕೆ ಈಡೇರುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದರು.

ನಂತರ ಕಲಬುರಗಿ ಸಹಾಯಕ ಆಯುಕ್ತೆ ಸಾಹಿತ್ಯ ಆಲಾದಕಟ್ಟಿ ಅವರು ಸ್ಥಳಕ್ಕೆ ಆಗಮಿಸಿ ರೈತರ ಮನವಿ ಪತ್ರ ಸ್ವೀಕರಿಸಿದರು. ರೈತರ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು, ಬೆಳೆ ವಿಮೆ ಪ್ರಕರಣಗಳಲ್ಲಿನ ಲೋಪದೋಷಗಳನ್ನು ಪರಿಶೀಲಿಸಿ ಸರಿಪಡಿಸಲಾಗುವುದು. ಯಾವುದೇ ರೀತಿಯಲ್ಲೂ ರೈತರಿಗೆ ಅನ್ಯಾಯವಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಉಮೇಶ ಜಾಧವ, ಜಿ.ಪಂ ಮಾಜಿ ಸದಸ್ಯ ರಾಜೇಶ ಗುತ್ತೇದಾರ, ಶಿವರಾಜ ಪಾಟೀಲ ಗೊಣಗಿ, ರೈತ ಸೇನೆ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ, ಶರಣಪ್ಪ ಮಮಶೆಟ್ಟಿ, ಮಾದಿಗ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ಸುಂದರ ಡಿ ಸಾಗರ, ಸಾಮಾಜಿಕ ಹೋರಾಟಗಾರ ಮೋಹನ ಚಿನ್ನ, ಪ್ರಶಾಂತ ಕದಂ, ರಾಘವೇಂದ್ರ ಗುತ್ತೇದಾರ, ರಮೇಶ ಕಿಟ್ಟದ, ಪುರುಷೋತ್ತಮ ಗುತ್ತೇದಾರ, ಶ್ರೀನಿವಾಸ ಗೋಗಿ, ರೇವಣಸಿದ್ಧ ಕಲಶೆಟ್ಟಿ, ಕಾಳಪ್ಪ ಕರೆಮನೋರ, ಜಗದೀಶ ಪಾಟೀಲ, ಚಂದ್ರಶೇಖರ ಮಾನಶೆಟ್ಟಿ, ಗೌರಿಶಂಕರ ನವದಾಗಿ, ರಾಯಪ್ಪಗೌಡ ಬೆನಕನಳ್ಳಿ, ಮಲ್ಲಿಕಾರ್ಜುನ ರುದನ್ನೂರ್, ಸೇಡಂ ಡಿಡಿ ಅನುಸೂಯಾ ಹೂಗಾರ, ತಹಶೀಲ್ದಾರ್ ಪೃಥ್ವಿರಾಜ್ ಪಾಟೀಲ್, ಶಹಾಬಾದ್ ಡಿವೈಎಸ್ಪಿ ಶಂಕರ್‍ಗೌಡ ಪಾಟೀಲ್, ಸಿಪಿಐ ಜಗದೇವಪ್ಪ ಪಾಳಾ, ಪಿಎಸ್‍ಐ ತಿಮ್ಮಯ್ಯ ಬಿ.ಕೆ. ಸೇರಿದಂತೆ ಪೆÇಲೀಸ್ ಸಿಬ್ಬಂದಿ ಉಪಸ್ಥಿತರಿದ್ದು, ಬಂದ್ ಸಂದರ್ಭದಲ್ಲಿ ಸೂಕ್ತ ಪೆÇಲೀಸ್ ಬಂದೋಬಸ್ತ್ ಕಲ್ಪಿಸಿದ್ದರು.


ರೈತರ ಪ್ರಮುಖ ಬೇಡಿಕೆಗಳು

  • 2025-26ನೇ ಸಾಲಿನ ಬೆಳೆ ವಿಮೆ ಪರಿಹಾರವನ್ನು ಅರ್ಹ ಎಲ್ಲ ರೈತರ ಖಾತೆಗಳಿಗೆ ಕೂಡಲೇ ಜಮಾ ಮಾಡಬೇಕು.
  • ತಾಲೂಕಿನ ರೈತರ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ ಬೆಳೆ ಸಾಲವನ್ನು ಮನ್ನಾ ಮಾಡಬೇಕು.
  • ಕಾಳಗಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು.
  • ಬರ ಹಾಗೂ ಬೆಳೆ ಹಾನಿಗೆ ಪ್ರತಿ ಎಕರೆಗೆ ?25 ಸಾವಿರ ಪರಿಹಾರ ನೀಡಬೇಕು.
  • ಬೆಳೆ ಕಟಾವು ಹಾಗೂ ವಿಮೆ ವರದಿಗಳಲ್ಲಿನ ಲೋಪಗಳನ್ನು ಪರಿಶೀಲಿಸಿ ರೈತರಿಗೆ ನ್ಯಾಯ ಒದಗಿಸಬೇಕು.

“ರೈತರ ಬೆಳೆ ವಿಮೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಿ, ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಅಧಿಕಾರಿಗಳು ಹಾಗೂ ವಿಮಾ ಕಂಪನಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ.”

ಡಾ ಅವಿನಾಶ ಜಾಧವ
ಶಾಸಕರು ಚಿಂಚೋಳಿ