Home ಜಿಲ್ಲೆ ಕಲಬುರಗಿ ಕಲಬುರಗಿ-ಬಳ್ಳಾರಿ ಸೈಕಲ್ ಜಾಗೃತಿ ಯಾತ್ರೆಗೆ ಜೇವರ್ಗಿಯಲ್ಲಿ ಅದ್ದೂರಿ ಸ್ವಾಗತ

ಕಲಬುರಗಿ-ಬಳ್ಳಾರಿ ಸೈಕಲ್ ಜಾಗೃತಿ ಯಾತ್ರೆಗೆ ಜೇವರ್ಗಿಯಲ್ಲಿ ಅದ್ದೂರಿ ಸ್ವಾಗತ

ಜೇವರ್ಗಿ : ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿ ಹಾಗೂ ಸಂವಿಧಾನದ 371ಜೆ ಕಲಂನ ಸಮರ್ಪಕ ಅನುಷ್ಠಾನದ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಕಲ್ಯಾಣ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಕಲಬುರಗಿ-ಬಳ್ಳಾರಿ ಸೈಕಲ್ ಜಾಗೃತಿ ಯಾತ್ರೆಗೆ ಜೇವರ್ಗಿ ಪಟ್ಟಣದಲ್ಲಿ ಅದ್ದೂರಿ ಸ್ವಾಗತ ದೊರೆಯಿತು.

ಸಂಘದ ರಾಜ್ಯಾಧ್ಯಕ್ಷ ಹಾಗೂ ಸಂಪಾದಕ ಮಲ್ಲಿಕಾರ್ಜುನ ಪಗಡೆ ಅವರ ಸಾರಥ್ಯದಲ್ಲಿ ಸಾಗುತ್ತಿರುವ ಯಾತ್ರೆಯು ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತಕ್ಕೆ ಆಗಮಿಸಿದ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ರೈತ ಮುಖಂಡರು ಹಾಗೂ ಸಾರ್ವಜನಿಕರು ಹೂಮಳೆಗೈದು ಆತ್ಮೀಯವಾಗಿ ಬರಮಾಡಿಕೊಂಡರು.

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ, ಯುವಜನರಿಗೆ ಉದ್ಯೋಗ ಅವಕಾಶಗಳು, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳ ಸುಧಾರಣೆ ಹಾಗೂ 371ಜೆ ಕಲಂನ ಪರಿಣಾಮಕಾರಿ ಅನುಷ್ಠಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಈ ಯಾತ್ರೆಯ ಪ್ರಮುಖ ಉದ್ದೇಶವಾಗಿದೆ. ಈ ಭಾಗದ ಹಕ್ಕುಗಳು ಮತ್ತು ಅಭಿವೃದ್ಧಿಯ ಪ್ರಶ್ನೆಗಳನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಯಾತ್ರೆ ಮಹತ್ವದ ಹೆಜ್ಜೆಯಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟರು.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಪತ್ರಕರ್ತರು ಕೈಗೊಂಡಿರುವ ಈ ಜಾಗೃತಿ ಅಭಿಯಾನಕ್ಕೆ ವಿವಿಧ ಸಂಘಟನೆಗಳ ಮುಖಂಡರು ಮತ್ತು ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದ್ದು, ಈ ಭಾಗದ ಸಮಗ್ರ ಪ್ರಗತಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕೆಂಬ ಆಶಯ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಸಂಪಾದಕ ಚಂದ್ರಶೇಖರ ಗೌಡ ಮಾಲಿಪಾಟೀಲ್, ರೈತ ಮುಖಂಡ ಪ್ರಶಾಂತ ಗೌಡ ಮಾಲಿಪಾಟೀಲ್, ಶಾಂತಲಿಂಗ ಪಾಟೀಲ್ ಕೋಳಕೂರು, ಶಿವಸೇನೆ ಪಕ್ಷದ ತಾಲೂಕು ಅಧ್ಯಕ್ಷ ಮಲ್ಕಣ್ಣ ಹಿರೇಪೂಜಾರಿ, ಕಸಾಪ ಅಧ್ಯಕ್ಷ ಎಸ್.ಕೆ. ಬಿರಾದಾರ, ಜಯ ಕರ್ನಾಟಕ ಸಂಘಟನೆಯ ತಾಲೂಕ ಅಧ್ಯಕ್ಷ ಭೀಮಾಶಂಕರ ಬಿಲ್ಲಾಡ, ಪರಮೇಶ ನಾಯಕ, ರವಿಕುಮಾರ ತಳವಾರ, ರಾಜಶೇಖರ ಮಾತೋಳ್ಳಿ, ಚೆನ್ನಪ್ಪ ಇಂಚಿಗೇರಿ, ಉಮೇಶ ಅಚಲೇರಿ, ರವಿ ಬಡಿಗೇರ, ವಿಠಲ ಪೂಜಾರಿ, ಮಹೇಶ, ಮಂಜುನಾಥ ಹಾಗೂ ಭೀಮಾಶಂಕರ ಈಜೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.