
ನಾಳೆ ಸಂಜೆ ಸಿಎಲ್‌ಬಿ ಸಭೆ
ಬೆಂಗಳೂರು, ಜೂ. ೧೫- ವಿಧಾನ ಪರಿಷತ್ತಿನ ೭ ಸ್ಥಾನಗಳಿಗೆ ಜೂ. ೧೮ ಗುರುವಾರದಂದು ನಡೆಯುವ ಚುನಾವಣೆಯಲ್ಲಿ ಯಾವುದೇ ಅಡ್ಡ ಮತದಾನಕ್ಕೆ ಅವಕಾಶ ಇಲ್ಲದಂತೆ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಸುಗಮವಾಗುವಂತೆ ನೋಡಿಕೊಳ್ಳಲು ಎಲ್ಲ ಕಾಂಗ್ರೆಸ್ ಶಾಸಕರನ್ನು ನಾಳೆ ರೆಸಾರ್ಟ್‌ಗೆ ಕರೆದೊಯ್ಯಲಾಗುತ್ತಿದೆ.
ವಿಧಾನ ಪರಿಷತ್ತಿನ ಚುನಾವಣೆ ಹಿನ್ನೆಲೆಯಲ್ಲಿ ನಾಳೆ ಸಂಜೆ ೬ ಗಂಟೆಗೆ ಬಿಡದಿ ಬಳಿಯ ಖಾಸಗಿ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಪಾಲ್ಗೊಳ್ಳುವ ಕಾಂಗ್ರೆಸ್ ಶಾಸಕರು ಮಂಗಳವಾರ ಮತ್ತು ಬುಧವಾರ ಎರಡು ದಿನ ರೆಸಾರ್ಟ್‌ನಲ್ಲೇ ವಾಸ್ತವ್ಯ ಹೂಡಿ ಗುರುವಾರ ಅಲ್ಲಿಂದಲೇ ನೇರವಾಗಿ ವಿಧಾನಸೌಧಕ್ಕೆ ಮತ ಹಾಕಲು ಬರುವರು.
ವಿಧಾನ ಪರಿಷತ್ತಿನ ೭ ಸ್ಥಾನಗಳಿಗೆ ೮ ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಕಾಂಗ್ರೆಸ್ ಪಕ್ಷ ತನ್ನ ಐವರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ರಣತಂತ್ರ ರೂಪಿಸಿದ್ದು, ಅದರಂತೆ ಕಾಂಗ್ರೆಸ್ ಶಾಸಕರ ಮತಗಳು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮಾತ್ರ ಚಲಾಯಿಸಲು ಏನೆಲ್ಲಾ ಮಾಡಬೇಕೋ ಅದನ್ನೆಲ್ಲಾ ಈಗಾಗಲೇ ಮಾಡಲಾಗಿದೆ.
ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ನಂತರ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ನ ಮೊದಲ ಶಾಸಕಾಂಗ ಪಕ್ಷದ ಸಭೆ ನಾಳೆ ನಡೆಯುತ್ತಿದ್ದು, ಈ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುಗಳು ಹಾಗೂ ಪಕ್ಷದ ಎಲ್ಲಾ ಕಾರ್ಯಾಧ್ಯಕ್ಷರು ಪಾಲ್ಗೊಳ್ಳಲಿದ್ದು, ಈ ಸಭೆಗೆ ಬರುವಂತೆ ಕಾಂಗ್ರೆಸ್‌ನ ಎಲ್ಲಾ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಸದಸ್ಯರುಗಳಿಗೆ ಸೂಚನೆಯನ್ನು ರವಾನಿಸಲಾಗಿದೆ.
ನಾಳಿನ ಸಭೆಯಲ್ಲಿ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಯಾವ ರೀತಿ ಮತ ಚಲಾಯಿಸಬೇಕು, ಯಾವ ಶಾಸಕರು ಕಾಂಗ್ರೆಸ್‌ನ ಯಾವ ಅಭ್ಯರ್ಥಿಗೆ ಮತ ಹಾಕಬೇಕು ಎಂಬೆಲ್ಲಾ ಬಗ್ಗೆ ಶಾಸಕರುಗಳಿಗೆ ಸೂಚನೆ ನೀಡಲಾಗುತ್ತದೆ.
ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಮೊದಲ ಮತ್ತು ದ್ವಿತೀಯ ಪ್ರಾಶಸ್ತ್ಯದ ಮತ ಚಲಾಯಿಸಲು ಅವಕಾಶವಿದ್ದು, ಮೊದಲ ಪ್ರಾಶಸ್ತ್ಯದ ಮತವನ್ನು ಪಕ್ಷ ಸೂಚಿಸಿದ ಅಭ್ಯರ್ಥಿಗಳಿಗೆ ಹಾಕುವ ಶಾಸಕರುಗಳು ಎರಡನೇ ಪ್ರಾಶಸ್ತ್ಯದ ಮತವನ್ನು ಯಾವ ಕಾಂಗ್ರೆಸ್ ಅಭ್ಯರ್ಥಿಗೆ ಹಾಕಬೇಕು ಎಂಬುದನ್ನು ನಾಳಿನ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲಾ ಶಾಸಕರಿಗೂ ತಿಳಿಸಲಾಗುತ್ತದೆ.
ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ೮ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಕಾಂಗ್ರೆಸ್ ಪಕ್ಷದಿಂದ ಯಾರೂ ಅಡ್ಡ ಮತದಾನ ಮಾಡದಂತೆ ಕಟ್ಟೆಚ್ಚರ ವಹಿಸಲಾಗಿದ್ದು, ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸೂಚನೆಯನ್ನು ಎಐಸಿಸಿ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಶಾಸಕರುಗಳಿಗೆ ನೀಡುವರು ಎಂದು ಹೇಳಲಾಗಿದೆ.
ವಿಧಾನ ಪರಿಷತ್ತಿನ ೭ ಸ್ಥಾನಗಳ ಪೈಕಿ ೫ ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್, ತಿಪ್ಪಣ್ಣ ಕಮಕನೂರು, ಮಳವಳ್ಳಿ ಶಿವಣ್ಣ ಹಾಗೂ ವಿನಯ್ ಕಾರ್ತಿಕ್ ಇವರುಗಳನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.
ಪ್ರತಿ ಅಭ್ಯರ್ಥಿಯ ಗೆಲುವಿಗೆ ೨೮ ಶಾಸಕರ ಮತ ಅಗತ್ಯವಿದ್ದು, ಕಾಂಗ್ರೆಸ್ ಪಕ್ಷ ತನ್ನ ೧೩೬ ಶಾಸಕರ ಜತೆಗೆ ಪಕ್ಷೇತರ ಶಾಸಕರುಗಳಾದ ದರ್ಶನ್ ಪುಟ್ಟಣ್ಣಯ್ಯ ಹಾಗೂ ಲತಾ ಮಲ್ಲಿಕಾರ್ಜುನ್ ಇವರುಗಳ ಬೆಂಬಲವನ್ನು ಪಡೆದಿದ್ದು, ಇವರ ಜತೆಗೆ ಬಿಜೆಪಿಯಿಂದ ಉಚ್ಛಾಟಿತರಾಗಿರುವ ಶಾಸಕರಾದ ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಇವರುಗಳ ಬೆಂಬಲವನ್ನು ಪಡೆಯುವ ಸಾಧ್ಯತೆಗಳಿದೆ. ಈ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್‌ನ ಐವರು ಅಭ್ಯರ್ಥಿಗಳು ಗೆಲ್ಲಲು ಯಾವುದೇ ತೊಂದರೆ ಇಲ್ಲ.
ವಿಧಾನ ಪರಿಷತ್ತಿನ ಚುನಾವಣೆ ಗೌಪ್ಯ ಮತದಾನವಾಗಿರುವುದರಿಂದ ಯಾರಾದರೂ ಅಡ್ಡಮತದಾನ ಮಾಡಬಹುದು ಎಂಬ ಭೀತಿಯೂ ಇದ್ದು, ಅದಕ್ಕೆ ಅವಕಾಶ ಕೊಡದಂತೆ ಕಾಂಗ್ರೆಸ್ ಶಾಸಕರನ್ನು ಮತದಾನದವರೆಗೂ ರೆಸಾರ್ಟ್‌ನಲ್ಲಿ ಇರಿಸುವ ತಂತ್ರಗಾರಿಕೆಯನ್ನು ಮಾಡಲಾಗಿದೆ.
ನಾಳೆ ಸಂಜೆ ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲಾ ಕಾಂಗ್ರೆಸ್ ಶಾಸಕರಿಗೆ ಸೂಕ್ತ ನಿರ್ದೇಶನ ನೀಡಲಾಗುತ್ತದೆ. ಯಾರೂ ಪಕ್ಷದ ಅಭ್ಯರ್ಥಿಯನ್ನು ಬಿಟ್ಟು ಬೇರೆಯವರಿಗೆ ಮತ ಹಾಕದಂತೆ ತಾಕೀತು ಮಾಡಲಾಗುತ್ತದೆ ಎಂದು ಪಕ್ಷದ ಮೂಲಗಳು ಹೇಳಿವೆ.
ನಾಳಿನ ಶಾಸಕಾಂಗ ಪಕ್ಷದ ಸಭೆಯ ನಂತರ ಬಹುತೇಕ ಶಾಸಕರು ಬಿಡದಿಯ ಖಾಸಗಿ ರೆಸಾರ್ಟ್‌ನಲ್ಲೇ ತಂಗಲಿದ್ದು, ಮಂಗಳವಾರ ಮತ್ತು ಬುಧವಾರ ರಾತ್ರಿ ಎರಡು ದಿನ ಅಲ್ಲೇ ಉಳಿಯುವ ಶಾಸಕರು ಗುರುವಾರ ಬೆಳಿಗ್ಗೆ ರೆಸಾರ್ಟ್‌ನಿಂದಲೇ ವಿಧಾನಸೌಧಕ್ಕೆ ಬರಲಿದ್ದಾರೆ.
ವಿಧಾನ ಪರಿಷತ್ತಿಗೆ ಮತದಾನ ಬೆಳಿಗ್ಗೆ ೯ ರಿಂದ ಸಂಜೆ ೪ ಗಂಟೆಯವರೆಗೂ ನಡೆಯಲಿದ್ದು, ೫ ಗಂಟೆಯ ನಂತರ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಿಸಲಾಗುತ್ತದೆ.
ಈ ಚುನಾವಣೆಗೆ ಬಿಜೆಪಿಯಿಂದ ಲಿಂಗರಾಜ ಪಾಟೀಲ್ ಮತ್ತು ರಘು ಕೌಟಿಲ್ಯ ಅಭ್ಯರ್ಥಿಗಳಾಗಿದ್ದು, ೭ನೇ ಸ್ಥಾನಕ್ಕೆ ಸ್ಪರ್ಧೆ ನೀಡಲು ಬಿಜೆಪಿ ಬೆಂಬಲ ಪಡೆದು ಜೆಡಿಎಸ್‌ನ ಗೋವಿಂದರಾಜು ಕಣದಲ್ಲಿದ್ದಾರೆ. ೭ನೇ ಅಭ್ಯರ್ಥಿಯ ಗೆಲುವು ಯಾರಿಗೆ ಸಿಗಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.




























