Home Lead News ಮೂವರು ಪೊಲೀಸರ ಅಮಾನತು

ಮೂವರು ಪೊಲೀಸರ ಅಮಾನತು

ಬೆಂಗಳೂರು,ಜೂ.೧೨-ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಗು ವೆನ್ನಿಲಾ ಕೊಲೆ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಇನ್ಸ್‌ಪೆಕ್ಟರ್ ಸೇರಿ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.


ಐದೂವರೆ ವರ್ಷದ ಮಗು ಕೊಲೆ ಪ್ರಕರಣ ದಾಖಲಿಸಲು ವಿಳಂಬ ಧೋರಣೆ ಹಾಗೂ ಕರ್ತವ್ಯಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಹಿಂದಿನ ಕಾಡುಗೋಡಿ ಇನ್ಸ್‌ಪೆಕ್ಟರ್, ಹಾಲಿ ಸಬ್ ಇನ್ಸ್‌ಪೆಕ್ಟರ್ ಸೇರಿ ಮೂವರನ್ನು ಅಮಾನತು ಮಾಡಲಾಗಿದೆ.


ಪ್ರಸ್ತುತ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಆಗಿರುವ ಹಾಗೂ ಒಂದು ತಿಂಗಳ ಹಿಂದೆ ಕಾಡುಗೋಡಿ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ರಂಗಸ್ವಾಮಿ, ಈಗಿನ ಸಬ್ ಇನ್ಸ್‌ಪೆಕ್ಟರ್( ಪಿಎಸ್‌ಐ) ನಿಂಗರಾಜು ಹಾಗೂ ಕಾನ್ಸ್‌ಟೇಬಲ್ ಹಾಲೇಶ್ ನಾಯ್ಕ್‌ನನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.
ಕಳೆದ ಮಾರ್ಚ್ ೨೪ ರಂದು ಐದೂವರೆ ವರ್ಷದ ಮಗು ವೆನ್ನಿಲಾಳನ್ನು ತಾಯಿ ಪ್ರಿಯಾಂಕ ಹಾಗೂ ಈಕೆಯ ಪ್ರಿಯಕರ ಮೋಹನ್ ಹತ್ಯೆ ಮಾಡಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದು ಇಬ್ಬರನ್ನು ಬಂಧಿಸಲಾಗಿದೆ. ಆರಂಭದಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಮಗುವನ್ನು ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂದು ವರದಿ ಬಂದರೂ ಕೊಲೆ ಪ್ರಕರಣ ದಾಖಲಿಸದೇ ಆರೋಪಿಗಳನ್ನು ಬಂಧಿಸದೇ ನಿರ್ಲಕ್ಷ್ಯ ತೋರಿದ್ದರು. ಈ ಹಿನ್ನೆಲೆಯಲ್ಲಿ ಮೂವರು ಪೊಲೀಸರನ್ನು ಅಮಾನತು ಮಾಡಿ ಆದೇಶ ಮಾಡಲಾಗಿದೆ.


ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಸುದ್ದಿಗಾರರ ಜೊತೆ ಮಾತನಾಡಿ, ಜೂನ್ ೪ರಂದು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಮಾರ್ಚ್ ೨೪ರಂದು ಮಗುವಿನ ಹತ್ಯೆಯಾಗಿತ್ತು. ಆರಂಭದಲ್ಲಿ ಅಸಹಜ ಸಾವು (ಯುಡಿಆರ್) ಪ್ರಕರಣ ದಾಖಲಿಸಲಾಗಿತ್ತು.
ನಂತರ ಕೊಲೆ ಪ್ರಕರಣವನ್ನಾಗಿ ಪರಿವರ್ತಿಸಲಾಗಿತ್ತು. ಈ ಕೇಸ್‌ನಲ್ಲಿ ಅಧಿಕಾರಿಗಳು ಲೋಪವೆಸಗಿದ್ದರಿಂದ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಹಾಗೂ ಕಾನ್ಸ್‌ಟೇಬಲ್ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.


ಕರ್ತವ್ಯಲೋಪದ ಹಿಂದೆ ಅಧಿಕಾರಿಗಳ ಉದ್ದೇಶ ಏನು ಎನ್ನುವುದನ್ನು ಪತ್ತೆ ಹಚ್ಚಲಾಗುತ್ತಿದೆ. ಸದ್ಯ ತನಿಖೆಗಾಗಿ ಬೇರೆ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ತನಿಖಾ ಲೋಪಗಳ ಬಗ್ಗೆ ಇಲಾಖೆಯಿಂದ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಆಯುಕ್ತರು ಮಾಹಿತಿ ನೀಡಿದ್ದರು.


ಪ್ರಿಯಾಂಕಾ ಗ್ರಿಲ್ :


ಈ ನಡುವೆ ಕಾರಿನಲ್ಲಿ ಹೊಟ್ಟೆಗೆ ಒದ್ದು ಉಸಿರುಗಟ್ಟಿಸಿ ಪ್ರಿಯಕರ ಪುಟ್ಟ ಮಗು ವೆನ್ನೆಲಾ ಕೊಲೆಗೈದ ಪ್ರಕರಣದ ಸಂಬಂಧ ಕಳೆದ ನಾಲ್ಕು ದಿನಗಳಿಂದ ತಲೆಮರೆಸಿಕೊಂಡಿದ್ದ ಹೆತ್ತ ತಾಯಿ ಪ್ರಿಯಾಂಕಳನ್ನು ಕಾಡುಗೋಡಿ ಪೊಲೀಸರು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.


ಸತತ ಕಾರ್ಯಾಚರಣೆ ನಡೆಸಿ ನಿನ್ನೆ ಹಾಸನ ಜಿಲ್ಲೆಯ ಸಕಲೇಶಪುರದ ಹೊಂ ಸ್ಟೇ ವೊಂದರಲ್ಲಿ ಬಂಧಿಸಿದ ತಾಯಿ ಪ್ರಿಯಾಂಕಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ೫ ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ ಡಿಸಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ.


ಮಗುವನ್ನು ಕೊಲೆ ಮಾಡಿರುವುದನ್ನು ಬಂಧಿತ ಪ್ರಿಯಕರ ಒಪ್ಪಿಕೊಂಡಿದ್ದಾನೆ. ಅದು ಪ್ರಿಯಾಂಕಾಗೆ ತಿಳಿದಿತ್ತಾ? ಇಬ್ಬರೂ ಸೇರಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದರಾ ಎನ್ನುವುದರ ಬಗ್ಗೆ ವಿಚಾರಣೆ ನಡೆಸಲಾಗಿದೆ.


ತಪ್ಪೋಪ್ಪಿಕೊಂಡ ಪ್ರಿಯಕರ:


ಕಳೆದ ಮಾರ್ಚ್ ೨೪ರಂದು ಆರೋಪಿ ಹಾಗೂ ಪ್ರಿಯಕರ ಕಾರಿನಲ್ಲಿ ಹೊರ ಹೋಗಿದ್ದ ವೇಳೆ ಮಗು ಐಸ್ ಕ್ರೀಂ ಕೇಳಿತ್ತು. ಕೊಟ್ಟಐಸ್‌ಕ್ರೀಂ ಬೇಡವೆಂದು ಬೇರೆಯದ್ದನ್ನು ತಂದುಕೊಡುವಂತೆ ಹಠ ಹಿಡಿದಿತ್ತು. ಆಗ ಆರೋಪಿಯು ಕೋಪಗೊಂಡು ಮಗುವಿನ ಹೊಟ್ಟೆಗೆ ಹೊಡೆದಿದ್ದ. ನೋವು ತಾಳದೆ ಅಳುತ್ತಿದ್ದಂತೆ ಉಸಿರುಗಟ್ಟಿಸಿ, ಕೊಲೆ ಮಾಡಿ ಕಾರಿನ ಹಿಂಭಾಗದ ಸೀಟಿನಲ್ಲಿ ಮಲಗಿಸಿದ್ದ’ ಎಂದಿದ್ದಾರೆ.


ಶಾಪಿಂಗ್ ಮುಗಿಸಿ ಪ್ರಿಯಾಂಕ ಕಾರಿನ ಬಳಿ ವಾಪಸ್ ಬಂದಾಗ ಆಕೆಗೆ ಮಗು ಸಾವನ್ನಪ್ಪಿರುವ ವಿಷಯ ತಿಳಿದಿದೆ. ಆದರೆ, ಹೆತ್ತ ಮಗಳು ಶವವಾಗಿ ಬಿದ್ದಿದ್ದರೂ ಆ ಕಲ್ಲೆದೆಯ ತಾಯಿಯ ಮನಸ್ಸು ಕರಗಲಿಲ್ಲ. ಅಲ್ಲಿಂದ ರಾತ್ರಿ ೯ ಗಂಟೆಗೆ ಇಬ್ಬರೂ ಕಾರಿನಲ್ಲಿ ಮಗುವಿನ ಶವವನ್ನು ಇಟ್ಟುಕೊಂಡೇ ಕೋಲಾರದತ್ತ ಪ್ರಯಾಣ ಬೆಳೆಸಿದ್ದಾರೆ.


ಕೋಲಾರದ ಕೆಫೆ ಕಾಫಿ ಡೇನಲ್ಲಿ ಪ್ರಿಯಾಂಕ ತನ್ನ ಪ್ರಿಯಕರನೊಂದಿಗೆ ಸೇರಿ ಅತ್ಯಂತ ಸಡಗರದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾಳೆ.


೧೨ಗಂಟೆ ಶವದ ಜೊತೆ:


ರಾತ್ರಿ ೧ ಗಂಟೆಯವರೆಗೂ ಹುಟ್ಟುಹಬ್ಬದ ಸಂಭ್ರಮ ಮುಗಿಸಿ, ಮುಂಜಾನೆ ೨:೩೦ರ ಸುಮಾರಿಗೆ ವಾಪಸ್ ವಿಲ್ಲಾಗೆ ಬಂದಿದ್ದಾರೆ. ಮರುದಿನ ಬೆಳಗ್ಗೆ ೯ ಗಂಟೆಯವರೆಗೂ, ಅಂದರೆ ಸುಮಾರು ೧೨ ಗಂಟೆಗಳ ಕಾಲ ಮಗುವಿನ ಶವದೊಂದಿಗೇ ಈ ಇಬ್ಬರು ಆರೋಪಿಗಳು ಕಾಲ ಕಳೆದಿರುವುದು ವಿಚಾರಣೆಯಲ್ಲಿ ಪತ್ತೆಯಾಗಿದೆ.


’ಮಾರನೇ ದಿನ ಮಗು ಮೃತಪಟ್ಟಿರುವ ವಿಚಾರ ಗೊತ್ತಾಗಿತ್ತು. ಪೊಲೀಸ್ ವಿಚಾರಣೆ ವೇಳೆ ಆರೋಪಿಗಳಿಬ್ಬರೂ ನೀಡಿದ್ದ ಹೇಳಿಕೆ ಅನುಮಾನ ಉಂಟಾಗಿತ್ತು.ಉಸಿರುಗಟ್ಟಿ ಮಗು ಸಾವನ್ನಪ್ಪಿದೆ ಎಂದು ವೈದ್ಯರು ವರದಿ ನೀಡಿದ್ದರೂ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ. ಈ ಬಗ್ಗೆ ಆರೋಪಿಯ ಪತಿ ಪ್ರವೀಣ್ ವಿದೇಶದಲ್ಲಿರುವ ತನ್ನ ಸಹೋದರಿ, ಮಕ್ಕಳ ವೈದ್ಯೆಗೆ ವರದಿ ಕಳುಹಿಸಿ, ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದರು.


ಲೋಕಾಯುಕ್ತಕ್ಕೆ ದೂರು:


ಸಹೋದರಿಯು ಲೋಕಾಯುಕ್ತ ಐಜಿಪಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಅದಕ್ಕೆ ಪೂರಕವಾಗಿ ಪ್ರವೀಣ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಸಿದಾಗ, ಈ ಹಿಂದಿನ ಕಾಡುಗೋಡಿ ಇನ್‌ಸ್ಪೆಕ್ಟರ್ ರಂಗಸ್ವಾಮಿ, (ಪ್ರಸ್ತುತ ವರ್ಗಾವಣೆಗೊಂಡಿದ್ದಾರೆ) ಹಾಲಿ ಪಿಎಸ್‌ಐ ನಿಂಗರಾಜು ಹಾಗೂ ಸುಕೊ ತಂಡವು ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದೆ’ ಎಂದು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖ ಮಾಡಲಾಗಿತ್ತು.