
ಕೋಲಾರ,ಆ,೧೫-ನ್ಯಾಯಾಲಯ ಗಳಲ್ಲಿ ವರ್ಷಾನುಗಟ್ಟಲೆ ಅಲೆಯುವ ಬದಲು, ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಬಗೆಹರಿಸಿಕೊಳ್ಳುವುದು ಅತ್ಯಂತ ಸುಲಭ ಹಾಗೂ ಜನಸ್ನೇಹಿ ವಿಧಾನವಾಗಿದೆ. ಇದರಿಂದ ಸಾರ್ವಜನಿಕರ ಹಣ ಮತ್ತು ಸಮಯ ಉಳಿಯುವುದರ ಜೊತೆಗೆ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ಜಯಶ್ರೀ ಅಭಿಪ್ರಾಯ ಪಟ್ಟರು.
ನಗರದ ನ್ಯಾಯಾಲಯದ ಅವರಣದಲ್ಲಿನ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಸೆ.೧೨ ರಂದು ನಡೆಯಲಿರುವ ಈ ವರ್ಷದ ಮೂರನೇ ರಾಷ್ಟ್ರೀಯ ಲೋಕ್ ಅದಾಲತ್ (ಜನತಾ ನ್ಯಾಯಾಲಯ) ನಿಗದಿಪಡಿಸಲಾಗಿದ್ದು ಸಾರ್ವಜನಿಕ ಕಕ್ಷಿದಾರರು ಈ ಸೌಲಭ್ಯವನ್ನು ಸದ್ಬಳಿಸಿಕೊಳ್ಳಬೇಕೆಂದು ತಿಳಿಸಿದರು.
ಕಳೆದ ಬಾರಿ ನಡೆದ ಎರಡನೇ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು.ಆ ಸಂದರ್ಭದಲ್ಲಿ ೪,೯೦೮ ಚಾಲ್ತಿ ಪ್ರಕರಣಗಳು ಹಾಗೂ ೭೫,೭೭೯ ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿದಂತೆ ಒಟ್ಟು ೮೦,೬೮೭ ಪ್ರಕರಣಗಳನ್ನು ರಾಜಿ ಪ್ರಕ್ರಿಯೆ ಮೂಲಕ ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ನ್ಯಾಯಾಲಯಗಳಲ್ಲಿ ವಿಚ್ಛೇದನ ಹಾಗೂ ಜೀವನಾಂಶ ಕೋರಿ ಬರುವ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಅವರು, ಗ್ರಾಮೀಣ ಭಾಗದಲ್ಲೂ ಮೊಬೈಲ್ ಬಳಕೆಯ ದುಷರಿಣಾಮಗಳು ಎದ್ದು ಕಾಣುತ್ತಿವೆ ಎಂದರು.
ಅವಿಭಕ್ತ ಕುಟುಂಬಗಳ ಕೊರತೆ ಹಾಗೂ ದಂಪತಿಗಳ ನಡುವೆ ಸಹನೆಯ ಅಭಾವದಿಂದಾಗಿ ಸಣ್ಣಪುಟ್ಟ ವಿಚಾರಗಳಿಗೂ ವಿಚ್ಛೇದನದಂತಹ ಕಠಿಣ ನಿರ್ಧಾರಗಳಿಗೆ ಮುಂದಾಗುತ್ತಿದ್ದಾರೆ. ಇದರಿಂದ ಮಕ್ಕಳ ಭವಿಷದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ.ಈ ನಿಟ್ಟಿನಲ್ಲಿ ಲೋಕ್ ಅದಾಲತ್ ಮುಖಾಂತರ ಆಪ್ತ ಸಮಾಲೋಚನೆ (ಕೌನ್ಸೆಲಿಂಗ್) ನಡೆಸಿ, ಕುಟುಂಬಗಳನ್ನು ಒಂದುಗೂಡಿಸುವ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಲೋಕ್ ಅದಾಲತ್‌ನಲ್ಲಿ ಕೇವಲ ನ್ಯಾಯಾಲಯದಲ್ಲಿರುವ ಪ್ರಕರಣಗಳಷ ಅಲ್ಲದೆ, ವ್ಯಾಜ್ಯ ಪೂರ್ವ ಪ್ರಕರಣಗಳನ್ನೂ ಬಗೆಹರಿಸಿಕೊಳ್ಳಲು ಮುಕ್ತ ಅವಕಾಶವಿದೆ. ಪ್ರಮುಖವಾಗಿ ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು, ವಿಮಾ ಪ್ರಕರಣಗಳು, ಆಸ್ತಿ ವಿಭಾಗೀಯ ಪ್ರಕರಣಗಳು, ಬ್ಯಾಂಕ್ ಸಾಲ ವಸೂಲಾತಿ,ಕೌಟುಂಬಿಕ ವ್ಯಾಜ್ಯಗಳು, ಕಾರ್ಮಿಕ ವಿವಾದಗಳು, ವಿದ್ಯುತ್ ಸೇರಿದಂತೆ ಇತರೆ ಪ್ರಕರಣಗಳು ಹಾಗೂ ರಾಜಿ ಮಾಡಿಕೊಳ್ಳಬಹುದಾದ ಕ್ರಿಮಿನಲ್ ಪ್ರಕರಣಗಳನ್ನು ಲೋಕಾ ಅದಾಲತ್‌ನಲ್ಲಿ ಇಬ್ಬರು ಕಕ್ಷಿದಾರರಿಗೆ ಸಮಾಧಾನವಾಗುವ ರೀತಿಯಲ್ಲಿ ಇಬ್ಬರ ಸಮ್ಮತಿ ಮೇರೆಗೆ ಪ್ರಕರಣಗಳನ್ನು ಸುಲಭವಾಗಿ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಇದರಿಂದ ಸಮಯ, ಹಣ, ಉಳಿತಾಯವಾಗಲಿದೆ ಮಾನಸಿಕ ಒತ್ತಡಗಳಿಂದ, ಮನಸ್ತಾಪಗಳಿಂದ ಮುಕ್ತವಾಗಿ ಆರೋಗ್ಯವನ್ನು ಕಾಪಾಡಿ ಕೊಳ್ಳ ಬಹುದಾಗಿ ಜೀವನದ
ಲ್ಲಿ ನೆಮ್ಮದಿ ಶಾಂತಿ ಸಿಗಲಿದೆ. ಸೌರ್ಹಾದತೆ, ಸ್ನೇಹ ಸಂಬಂಧಗಳು ಬೆಳವಣಿಗೆಯಾಗಲಿದೆ ಎಂದ ಅವರು ಕೆಲವರು ಅನಾವಶ್ಯಕವಾಗಿ ನ್ಯಾಯಾಲಯಗಳು ,ಪೊಲೀಸ್ ಠಾಣೆಗಳಿಗೆ ದೂರು ಅರ್ಜಿಗಳನ್ನು ನೀಡುವ ಮೂಲಕ ಕಿರುಕುಳ ನೀಡುತ್ತಾರೆ.ಸಣ್ಣಪುಟ್ಟ ಸಮಸ್ಯೆಗಳನ್ನು ದೊಡ್ಡದು ಮಾಡಿ ಶಾಂತಿ ನೆಮ್ಮದಿಗೆ ಭಂಗ ಉಂಟು ಮಾಡುತ್ತಾರೆ.ಅಂಥವರಿಗೆ ತಿಳುವಳಿಕೆಯ ಅರಿವು ಮೂಡಿಸಿ ಇಬ್ಬರಿಗೂ ಸಂಧಾನ ನಡೆಸಿ ಸಮಸ್ಯೆ ಬಗೆ ಹರಿಸಲು ಲೋಕಾ ಅದಾಲತ್‌ಗಳು ಪೂರಕವಾಗಲಿದೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಹಾಗೂ ರಾಜ್ಯ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಬಡತನ ನಿರ್ಮೂಲನೆ, ಮಕ್ಕಳ ಸ್ನೇಹಿ ಯೋಜನೆಗಳು ಸೇರಿದಂತೆ ನಲ್ಸಾದ ೧೩ ವಿಶೇಷ ಯೋಜನೆಗಳ ಬಗ್ಗೆ ಗ್ರಾಮೀಣ ಭಾಗದಲ್ಲಿ ವ್ಯಾಪಕ ಅರಿವು ಮೂಡಿಸಲಾಗುತ್ತಿದೆ. ದುರ್ಬಲ ವರ್ಗದವರಿರುವ ಹಳ್ಳಿಗಳನ್ನು ಗುರುತಿಸಿ, ಅಲ್ಲಿಯೇ ಕಾನೂನು ನೆರವು ಚಿಕಿತ್ಸಾಲಯ ತೆರೆದು ಆರು ತಿಂಗಳ ಕಾಲ ನಿರಂತರ ಕಾರ್ಯಕ್ರಮಗಳನ್ನು ದೇಶದಾದ್ಯಂತ ರೂಪಿಸಲಾಗಿದೆ ಎಂದು ಅವರು ವಿವರಿಸಿದರು. ಪ್ರಶ್ನೆಯೊಂದಕ್ಕೆ ವೈಚಾರಿಕೆ ಭಿನ್ನಮತಗಳಿಂದ ಹಿರಿಯರ ಬುದ್ದಿವಾದ ತಿಳುವಳಿಕೆಗಳಿಲ್ಲದೆ ಹಾದಿ ತಪ್ಪಿ ಸಮಸ್ಯೆಗಳು ಬಗೆಹರಿಯದೆ ಹೋದಾಗ ನ್ಯಾಯಾಲಯಕ್ಕೆ ಬರಬೇಕಾಗಿರುವುದು ಅನಿವಾರ್ಯವಾಗಲಿದೆ. ಕುಟುಂಬದಲ್ಲಿನ ವ್ಯವಸ್ಥೆಗಳನ್ನು ಉಳಿಸಿ ಕೊಳ್ಳುವುದು ಪ್ರಮುಖವಾಗಿದೆ. ಮನಸ್ಥಿತಿಗಳನ್ನು ಉತ್ತಮವಾಗಿಟ್ಟು ಕೊಂಡಲ್ಲಿ ಜೀವನದ ಮಾರ್ಗದರ್ಶನದಲ್ಲಿ ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ಉತ್ತಮವಾಗಿರುವುದು ಎಂದ ಅವರು ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗುವ ಪೂರ್ವಭಾವಿ ಯಾಗಿಯೂ ಸಮಸ್ಯೆಗಳನ್ನು ಪ್ರಾಧಿಕಾರದಲ್ಲಿ ಸಮಲೋಚಿಸಿ ಸಲಹೆಗಳನ್ನು ಪಡೆದು ಕೊಳ್ಳಲು ಅವಕಾಶ ಕಲ್ಪಿಸಿದೆ. ಕೋಲಾರ ಜಿಲ್ಲೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ೪೯ ಪ್ರಕರಣಗಳು ದಾಖಲಾಗಿದ್ದು ಈ ಪೈಕಿ ಕೋಲಾರ ತಾಲ್ಲೂಕಿನ ೧೦ ಪ್ರಕರಣಗಳನ್ನು ರಾಜಿ ಸಂಧಾನಗಳಿಂದ ಬಗೆಹರಿಸಲಾಗಿದೆ ಎಂದರು.
ನಗರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಸಂಬಂಧಿಸಿ ದಂತೆ ಪ್ರಾದಿಕಾರದ ವತಿಯಿಂದ ದಾಳಿ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುವ ಮೂಲಕ ಸಾರ್ವಜನಿಕವಲಯದಲ್ಲಿ ಪರಿಸರದ ಜಾಗೃತಿ ಮೂಡಿಸಲಾಗುವುದು ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಮೂರ್ತಿ ಪ್ರಭು ನೀಲಚಾರಿ ಬಡಿಗೇರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ್ ಉಪಸ್ಥಿತರಿದ್ದು ಲೋಕಾ ಅದಾಲತ್ ಕಾರ್ಯಕ್ರಮಗಳ ಬಗ್ಗೆ ಧ್ವನಿಗೊಡಿಸಿದರು.
































