Home ಜಿಲ್ಲೆ ಕಲಬುರಗಿ ಭಾವೈಕ್ಯತೆಯ ಸಂಕೇತದ ಉತ್ಸವ ಮೋಹರಂ

ಭಾವೈಕ್ಯತೆಯ ಸಂಕೇತದ ಉತ್ಸವ ಮೋಹರಂ

ಕಲಬುರಗಿ:ಜೂ.26: ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಭಾವೈಕ್ಯದ ಪ್ರತೀಕದ ಹಬ್ಬ ಮೊಹರಂ ಆಗಿದೆ. ಹಿಜ್ರಿ ಕ್ಯಾಲೆಂಡರ್‍ನಲ್ಲಿ ಮುಸ್ಲಿಂ ಸಮುದಾಯಕ್ಕೆ ಹೊಸ ವರ್ಷದ ಆರಂಭವನ್ನು ಸೂಚಿಸುವ ಮೊದಲ ತಿಂಗಳು ಇದಾಗಿದೆ. ರಂಜಾನ್ ನಂತರ ಇಸ್ಲಾಮಿಕ್ ಕ್ಯಾಲೆಂಡರ್‍ನಲ್ಲಿ ಇದು ಎರಡನೇ ಪವಿತ್ರ ತಿಂಗಳು ಎಂದು ಪರಿಗಣಿಸಲಾಗಿದೆ. ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಹಜರತ್ ಇಮಾಮ್ ಹುಸೇನ್ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸುವ ತಿಂಗಳು ಇದಾಗಿದ್ದು, ಭಾವೈಕ್ಯತೆಯ ಸಂಕೇತವಾಗಿ ಇದನ್ನು ಆಚರಿಸಲಾಗುತ್ತದೆ ಎಂದು ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ.ಪಾಟೀಲ ಹೇಳಿದರು.
ಆಳಂದ ತಾಲೂಕಿನ ಸುಂಟನೂರ ಗ್ರಾಮದ ಇಮಾಮ್ ಖಾಸೀಮ್ ಹಸನ್-ಹುಸೇನ್ ಅಲಾಯಿಪೀರ ಮಸೀದಿಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಜರುಗಿದ ‘ಮೋಹರಂ ಭಾವೈಕ್ಯತೆ ಕಾರ್ಯಕ್ರಮ’ದಲ್ಲಿ ಅಲೈಪೀರ್‍ಗಳಿಗೆ ಗೌರವ ಮತ್ತು ಅಲೈಪೀರಗಳನ್ನು ಹಿಡಿಯುವವರಿಗೆ ಸನ್ಮಾನಿಸಿ, ನಂತರ ಅವರು ಮಾತನಾಡುತ್ತಿದ್ದರು.
ಆವಾಲಾ ಎಂಬ ಅರಬ್ಬಿ ಶಬ್ದದಿಂದ ಅಲಾವಿ ಪದ ಹುಟ್ಟಿದೆ. ಇದರರ್ಥ ತಗ್ಗು ಅಥವಾ ಗುಂಡಿಯಾಗಿದೆ. ಅಲಾವಿಗೂ ಮೂಲ ಮೊಹರಂ ಆಚರಣೆಗೂ ಸಂಬಂಧವಿದೆ. ಕ್ರಿ.ಶ. 680ರಲ್ಲಿ ಕರ್ಬಲಾ ಮರುಭೂಮಿಯಲ್ಲಿ ಹುಸೇನ ಮತ್ತು ಯಜೀದನ ಅನುಯಾಯಿಗಳ ಮಧ್ಯೆ ನಡೆದ ಯುದ್ಧದಲ್ಲಿ ಹುಸೇನರು ತಮ್ಮ ವೈರಿಗಳ ಆಕ್ರಮಣಕ್ಕೆ ಒಂದು ಬಗೆಯ ತಡೆಯುಂಟು ಮಾಡಲು ತಾವಿದ್ದ ಗುಡಿಸಲುಗಳ ಸುತ್ತ ತಗ್ಗು ತೋಡಿದ್ದರು. ಅದರ ಸಂಕೇತವಾಗಿ ಮೊಹರಂ ಆಚರಣೆಯ ಸಂದರ್ಭದಲ್ಲಿ ಅಶೋರ ಖಾನೆ ಎದುರು ಆಳವಾದ ತಗ್ಗು ತೋಡುತ್ತಾರೆ. ಇದೇ ಆಲಾವಿಯಾಗಿದೆ. ಮೊಹರಂ ತಿಂಗಳ ಒಂಬತ್ತನೆಯ ರಾತ್ರಿ ಅಲಾವಿಯಲ್ಲಿ ಕಟ್ಟಿಗೆ ಹಾಕಿ ಅಗ್ನಿ ಹೊತ್ತಿಸುತ್ತಾರೆ. ಮೊಹರಂ ಘಟನೆಗೆ ಸಂಬಂಧಿಸಿದ ಪದಗಳನ್ನು ಹೇಳುತ್ತ ಅದರ ಸುತ್ತ ತಿರುಗುತ್ತಾರೆ. ಈ ಪದಗಳನ್ನು ಅಲಾವಿ ಪದಗಳೆಂದು ಕರೆಯುತ್ತಾರೆ. ಕೆಲ ಊರುಗಳಲ್ಲಿ ಹೆಜ್ಜೆ ಹಾಕುತ್ತ ಸುತ್ತುತ್ತಾರೆ. ಇದಕ್ಕೆ ಅಲಾವಿ ಹೆಜ್ಜೆ ಕುಣಿತವೆನ್ನುತ್ತಾರೆ. ಹೀಗೆ ಅಲಾಯಿ ಪೀರ-ಮೋಹರಂ ಉತ್ಸವ ಜರುಗುತ್ತದೆ ಎಂದು ಹಬ್ಬದ ಹಿನ್ನಲೆಯನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಅಲಾಯಿ ಪೀರಗಳನ್ನು ಹಿಡಿಯವವರಾದ ಬಸೀರಮೀಯಾ ಮತ್ತು ಇಲಾಹಿ ಅವರಿಗೆ ಸನ್ಮಾನಿಸಲಾಯಿತು. ಬಳಗದ ಗೌರವ ಸಲಹೆಗಾರ ಶಿವಯೋಗೆಪ್ಪಾ ಎಸ್. ಬಿರಾದಾರ, ಗ್ರಾಮದ ಯುವ ಮುಖಂಡ ಶಂಕರ ಹುಲಮನಿ, ಪ್ರಮುಖರಾದ ಕರೀಮಸಾಬ್, ಸಮೀರ್, ಬಾಬುಸಾಬ್, ಶಫೀಕ್, ಮಶಾಖಸಾಬ್, ಖಾಸಿಂಸಾಬ್, ಫಯಾಜ್,ಇರ್ಫಾನ್, ರುಕುಮಸಾಬ್, ಅಮ್ಜಾದ ಅಲಿ, ಅಜ್ಮೀರ್, ಮಕ್ಬೂಲ್, ಫತ್ರುಸಾಬ್, ಫಕ್ರುದ್ದೀನ್, ಮೆಹಬೂಬಸಾಬ್, ಕಂಠಯ್ಯ ಹಿರೇಮಠ, ನೀಲಕಂಠ, ಶಿವಪುತ್ರ, ಬಾಬು ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.


ಇಸ್ಲಾಂ ಧರ್ಮವು ಸಹೋದರತ್ವ ಭಾವ ಸಾರುತ್ತದೆ. ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ಅನ್ಯಾಯ, ಅಧರ್ಮ, ಶೋಷಣೆ ನಿರ್ಮೂಲನೆ ಶ್ರಮಿಸಿ, ಕೋಮು ಸೌಹಾರ್ಧತೆ ಸಾರಿ, ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ನೀಡಿದ್ದಾರೆ. ಅವರ ಸಂದೇಶ, ತತ್ವದ ಅನುಸರಣೆಯಿಂದ ಮನುಕುಲದ ಒಳಿತಾಗಲು ಸಾಧ್ಯವಿದೆ. ಮೋಹರಂ ಹಬ್ಬವು ಇಂದಿಗೂ ಕೂಡಾ ಎಲ್ಲರೂ ಒಂದೇ ಎಂಬ ಭಾವನೆಯಿಂದ ಭಾಗವಹಿಸಲಾಗುತ್ತಿದೆ. ಇದು ಸೌಹಾರ್ಧತೆಗೆ ಪೂರಕವಾಗಿದೆ. ಇಂತಹ ಹಬ್ಬ, ಆಚರಣೆಗಳು ಪ್ರಸ್ತುತ ಸಂದರ್ಭದಲ್ಲಿ ತುಂಬಾ ಅವಶ್ಯಕತೆಯಿವೆ.
ಎಚ್.ಬಿ.ಪಾಟೀಲ, ಉಪನ್ಯಾಸಕರು, ಚಿಂತಕರು, ಕಲಬುರಗಿ