Home ಜಿಲ್ಲೆ ಬೆಂಗಳೂರು ವಿವಿಧ ಬೇಡಿಕೆಗೆ ಆಗ್ರಹಿಸಿ ನಾಳೆ ಜನಾಗ್ರಹ ಸಮಾವೇಶ

ವಿವಿಧ ಬೇಡಿಕೆಗೆ ಆಗ್ರಹಿಸಿ ನಾಳೆ ಜನಾಗ್ರಹ ಸಮಾವೇಶ

ಕೆಂಗೇರಿ,ಜು. ೨ :ಭೂಮಿ,ವಸತಿ,ಬ್ಯಾಕ್ ಲಾಗ್, ಉದ್ಯೋಗ ನೇಮಕಾತಿ, ವಿಶೇಷ ಘಟಕ ಯೋಜನೆ ಜಾರಿಗೆ ಒತ್ತಾಯಿಸಿ ಜುಲೈ ೩ರಂದು ಬೃಹತ್ ದಲಿತ ಜನಾಗ್ರಹ ಸಮಾವೇಶವನ್ನು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಮಹಿಳಾ ಸಂಚಾಲಕಿ ನಿರ್ಮಲ ತಿಳಿಸಿದರು.


ಕೆಂಗೇರಿ ಉಪನಗರ ಡಾ. ಬಿ. ಆರ್.ಅಂಬೇಡ್ಕರ್ ಭವನದದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ )ಬೆಂಗಳೂರು ನಗರ ಜಿಲ್ಲಾ ಸಮಿತಿ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಬಡವರು,ಮಧ್ಯವರ್ಗದವರು ಕೂಲಿ ಕಾರ್ಮಿಕರು ಹಲವಾರು ದಶಕಗಳಿಂದ ಹಂದಿಗೂಡಿನಂತ ಮನೆಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳಿಲ್ಲದೆ ವಾಸ ಮಾಡುತ್ತಿದ್ದಾರೆ, ಆಳುವ ಸರ್ಕಾರಗಳು ಸಾಮಾಜಿಕ ಬದ್ಧತೆಯಿಂದ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಮಾನವೀಯತೆಯಿಂದ ಅಗತ್ಯ


ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ಹಾಗೂ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸುಸಜ್ಜಿತ ಶಿಕ್ಷಣ ಸಮುಚ್ಚಯ (ಹಾಸ್ಟೆಲ್ ಕ್ಯಾಂಪಸ್) ನಿರ್ಮಾಣ ಸೇರಿದಂತೆ ಒಟ್ಟು ೧೯ ವಿಷಯಗಳ ಕುರಿತು ಸಮಾವೇಶದಲ್ಲಿ ಹಕ್ಕೊತ್ತಾಯ ಮಂಡಿಸಲಾಗುವುದು ಎಂದರು.


ಜಿಲ್ಲಾ ಖಜಾಂಚಿ ಕೊತ್ತನೂರು ದಿಣ್ಣೆ ತಿಮ್ಮರಾಜು ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದಲಿತರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ರಾಜ್ಯ ಸಮಿತಿ ಸದಸ್ಯರಾದ ಇಂದಿರಾ ಕೃಷ್ಣಪ್ಪ ಸೇರಿದಂತೆ ಹಲವು ಮುಖಂಡರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.


ಜಿಲ್ಲಾ ಸಂಘಟನಾ ಸಂಚಾಲಕರಾದ ಡಿ ಬಾಲಯ್ಯ, ಅಯ್ಯಪ್ಪ, ಬೆಂಗಳೂರು ನಗರ ಜಿಲ್ಲಾ ಮಹಿಳಾ ಸಂಚಾಲಕರಾದ ಧನಲಕ್ಷ್ಮಿ,ಚಂದ್ರಮ್ಮ ಬೆಂಗಳೂರು ದಕ್ಷಿಣ ತಾಲೂಕು ಸಮಿತಿಯ ಅಂಬರೀಶ್,ಬಸವರಾಜ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.