
ಜಮಖಂಡಿ: ಜಮಖಂಡಿ ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಸಾಹಿತಿ ಹಾಗೂ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಸಂಗಮೇಶ ಮಟೋಳಿ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ಶನಿವಾರ ಸನ್ಮಾನಿಸಲಾಯಿತು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಜಗದೀಶ ಗುಡಗುಂಟಿ, ಕಾರ್ಯಾಧ್ಯಕ್ಷ ಶಿವಾನಂದ ಪಾಟೀಲ, ಕೋಶಾಧ್ಯಕ್ಷ ನಾಗಪ್ಪ ಸನದಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ ತಳಕೇರಿ, ಗೌರವಾಧ್ಯಕ್ಷರಾದ ಪ್ರಭು ಹಿಡಕಲ ಹಾಗೂ ಪ್ರಕಾಶ ಅರಕೇರಿ, ಖಜಾಂಚಿ ಬಾಹುಬಲಿ ಬಿರಾದಾರಪಾಟೀಲ ಸೇರಿದಂತೆ ಪದಾಧಿಕಾರಿಗಳು ಡಾ.ಸಂಗಮೇಶ ಮಟೋಳಿ ಅವರ ನಿವಾಸಕ್ಕೆ ತೆರಳಿ ಅಧಿಕೃತವಾಗಿ ಆಹ್ವಾನ ನೀಡಿ ಸನ್ಮಾನಿಸಿದರು.
ಇದಕ್ಕೂ ಮೊದಲು ಕಸಾಪ ಜಮಖಂಡಿ ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಕಸಾಪ ಅಧ್ಯಕ್ಷರ ನಿವಾಸದಲ್ಲಿ ಸಭೆ ಸೇರಿ ಸುದೀರ್ಘವಾಗಿ ಚರ್ಚಿಸಿ, ಅಂತಿಮವಾಗಿ ಡಾ.ಸಂಗಮೇಶ ಮಟೋಳಿ ಅವರ ಹೆಸರನ್ನು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಘೋಷಿಸಿದರು.
ಈ ಸಂದರ್ಭದಲ್ಲಿ ಡಾ.ಟಿ.ಪಿ. ಬಾಂಗಿ, ಮಲ್ಲಿಕಾರ್ಜುನ ಇಂಡಿ, ರುದ್ರಗೌಡ ಪಾಟೀಲ, ಉಮೇಶ ಶಿದರಡ್ಡಿ, ಪೆÇ್ರ.ಬಸವರಾಜ ಕಡ್ಡಿ, ಗುರುನಾಥ ಸುತಾರ, ಚಂದ್ರಕಲಾ ಜನಗೊಂಡ, ಶ್ರೀದೇವಿ ಸುವರ್ಣಖಂಡಿ, ಸರಿತಾ ಶಿರಗುಪ್ಪಿ, ಪಿ.ಆರ್. ರಾಮತಾಳ, ತಮ್ಮಣ್ಣ ನಾಗರಾಳ, ಸಂಗಮೇಶ ಉಟಗಿ, ಡಾ.ಟಿ.ಪಿ. ಗಿರಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದು, ಸಮ್ಮೇಳನದ ಯಶಸ್ಸಿಗೆ ಶುಭ ಹಾರೈಸಿದರು.
ಜಮಖಂಡಿ ನಗರದ ಬಸವ ಭವನದಲ್ಲಿ ಅಕ್ಟೋಬರ್ 4ರಂದು ಭಾನುವಾರ ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.































