Home ಜಿಲ್ಲೆ ೧,೧೫೬ ಸ್ಥಳಗಳಲ್ಲಿ ತಪಾಸಣೆ: ೭೨ ಬಾಲ ಕಾರ್ಮಿಕರ ರಕ್ಷಣೆ:ಎಸ್ಪಿ ನಿಂಬರಗಿ

೧,೧೫೬ ಸ್ಥಳಗಳಲ್ಲಿ ತಪಾಸಣೆ: ೭೨ ಬಾಲ ಕಾರ್ಮಿಕರ ರಕ್ಷಣೆ:ಎಸ್ಪಿ ನಿಂಬರಗಿ

ಸಂಜೆವಾಣಿ ವಾರ್ತೆ,
ವಿಜಯಪುರ, ಸೆ. ೧೩: ಬಾಲಕಾರ್ಮಿಕ ಪದ್ಧತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿಜಯಪುರ ಜಿಲ್ಲಾ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಶನಿವಾರ ಜಿಲ್ಲೆಯಾದ್ಯಂತ ಕೈಗೊಂಡ ವಿಶೇಷ ಕಾರ್ಯಾಚರಣೆಯಲ್ಲಿ ೭೨ ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಹೋಟೆಲ್, ಧಾಬಾ, ಎಪಿಎಂಸಿ ಮಾರುಕಟ್ಟೆ ಯಾರ್ಡ್, ತರಕಾರಿ ಮಾರುಕಟ್ಟೆ, ಕಿರಾಣಿ ಅಂಗಡಿಗಳು, ವಾಣಿಜ್ಯ ಸಂಕೀರ್ಣಗಳು, ಗ್ಯಾರೇಜ್‌ಗಳು, ವರ್ಕ್ಶಾಪ್‌ಗಳು, ಕಟ್ಟಡ ಕಾಮಗಾರಿ ಸ್ಥಳಗಳು, ಇಟ್ಟಿಗೆ ಭಟ್ಟಿಗಳು ಸೇರಿದಂತೆ ಒಟ್ಟು ೧,೧೫೬ ಸ್ಥಳಗಳಲ್ಲಿ ತಪಾಸಣೆ ನಡೆಸಲಾಯಿತು ಎಂದು ಹೇಳಿದ್ದಾರೆ.
ಈ ಪೈಕಿ ೨೧೭ ಹೋಟೆಲ್‌ಗಳು, ೧೬೪ ಧಾಬಾಗಳು, ೯ ಎಪಿಎಂಸಿ ಮಾರುಕಟ್ಟೆ ಯಾರ್ಡ್ಗಳು, ೧೯ ತರಕಾರಿ ಮಾರುಕಟ್ಟೆಗಳು, ೨೫೯ ಕಿರಾಣಿ ಅಂಗಡಿಗಳು, ೩೧ ವಾಣಿಜ್ಯ ಸಂಕೀರ್ಣಗಳು, ೨೦೩ ಗ್ಯಾರೇಜ್‌ಗಳು, ೮೮ ಕಟ್ಟಡ ಕಾಮಗಾರಿ ಸ್ಥಳಗಳು, ೬೭ ಇಟ್ಟಿಗೆ ಭಟ್ಟಿಗಳು ಹಾಗೂ ೯೯ ಇತರೆ ಕೆಲಸದ ಸ್ಥಳಗಳನ್ನು ಪರಿಶೀಲಿಸಲಾಯಿತು ಎಂದು ವಿವರಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ರಕ್ಷಿಸಲಾದ ೭೨ ಮಕ್ಕಳನ್ನು ಅವರ ಪೋಷಕರು ಹಾಗೂ ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರಿಸಲಾಗಿದ್ದು, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, ೧೯೮೬ರ ಅನ್ವಯ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
೧೪ ವರ್ಷದೊಳಗಿನ ಮಕ್ಕಳನ್ನು ಯಾವುದೇ ಉದ್ಯೋಗ ಅಥವಾ ಕೆಲಸಕ್ಕೆ ನೇಮಿಸುವುದು ಕಾನೂನುಬಾಹಿರವಾಗಿದ್ದು, ೧೪ ವರ್ಷ ಪೂರ್ಣಗೊಂಡು ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಿಶೋರರನ್ನು ಅಪಾಯಕಾರಿ ಉದ್ಯೋಗ ಅಥವಾ ಪ್ರಕ್ರಿಯೆಗಳಲ್ಲಿ ಕೆಲಸಕ್ಕೆ ನಿಯೋಜಿಸುವುದೂ ಅಪರಾಧವಾಗಿದೆ.
ಬಾಲಕಾರ್ಮಿಕರು ಕಂಡುಬAದಲ್ಲಿ ಸಾರ್ವಜನಿಕರು ತಕ್ಷಣ ಸಮೀಪದ ಪೊಲೀಸ್ ಠಾಣೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಥವಾ ಮಕ್ಕಳ ಸಹಾಯವಾಣಿ ೧೦೯೮ಕ್ಕೆ ಮಾಹಿತಿ ನೀಡಬೇಕು. ಮಕ್ಕಳ ರಕ್ಷಣೆ ಹಾಗೂ ಅವರ ಭವಿಷ್ಯವನ್ನು ಸುರಕ್ಷಿತಗೊಳಿಸುವ ಕಾರ್ಯದಲ್ಲಿ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮನವಿ ಮಾಡಿದ್ದಾರೆ.