
ಅಫಜಲಪುರ ; ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಸೈದ್ಧಾಂತಿಕವಾಗಿ ಎದುರಿಸಲು ಸಾಧ್ಯವಾಗದ ವಿರೋಧ ಪಕ್ಷದವರು ಮೀಸಲು ಕ್ಷೇತ್ರ ಬಿಟ್ಟು ಸಾಮಾನ್ಯ ಕ್ಷೇತ್ರದಿಂದ
ಸ್ಪರ್ಧೆ ಮಾಡಲಿ ಎನ್ನುವ ವಿರೋಧ ಪಕ್ಷದವರು ಇಲ್ಲಿಯವರೆಗೂ ಎಷ್ಟು ಕ್ಷೇತ್ರದಲ್ಲಿ ದಲಿತ, ಹಿಂದುಳಿದ ಮತ್ತು ಅಲ್ಪ ಸಂಖ್ಯಾತರಿಗೆ ಟಿಕೇಟ್ ನೀಡಿ ಗೆಲ್ಲಿಸಿದ್ದಾರೆ ಹೇಳಲಿ ಎಂದು ಯುವ ಮುಖಂಡ ರವಿ ಗೌರ್ ಪ್ರಶ್ನಿಸಿದರು.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೀಸಲು ಕ್ಷೇತ್ರವೆಂದರೆ ಅಲ್ಲಿ ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತದಾರರಷ್ಟೇ ಇರುತ್ತಾರಾ? ಅಲ್ಲಿಯೂ ಎಲ್ಲ ಜಾತಿ, ಧರ್ಮಗಳ ಮತದಾರರೂ ಇರುತ್ತಾರೆ ಎಂಬ ಕನಿಷ್ಠ ಅರಿವು ವಿರೋಧ ಪಕ್ಷದವರಿಗಿರಲಿ ಎಂದು ಹೇಳಿದ ಅವರು, ಸಂವಿಧಾನದ 330 ಮತ್ತು 332ನೇ ವಿಧಿಗಳು ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಿವೆ. ಸಂವಿಧಾನಬದ್ಧ ಹಕ್ಕನ್ನೇ ಪ್ರಶ್ನಿಸುವ ಇವರೇ ನಿಜವಾದ ಪ್ರಜಾಪ್ರಭುತ್ವ ವಿರೋಧಿಗಳು ಎಂದು ಆರೋಪಿಸಿದರು.
ಪ್ರಿಯಾಂಕ್ ಖರ್ಗೆಯವರನ್ನು ಮಾತ್ರ ‘ಬಲಿತ ದಲಿತ’ ಎಂದು ಗುರಿಯಾಗಿಸುವ ಇವರು ಬಿಜೆಪಿಯ ಗೋವಿಂದ ಕಾರಜೋಳ, ರಮೇಶ್ ಜಿಗಜಿಣಗಿ ಹಾಗೂ ಜೆಡಿಎಸ್ನ ಎಚ್.ಕೆ. ಕುಮಾರಸ್ವಾಮಿ ಅವರು ಸತತವಾಗಿ ಅಧಿಕಾರದಲ್ಲಿದ್ದವರು ಇವರುಗಳು ಇನ್ನೂ ಬಲಿತರಾಗಿಲ್ಲವೇ? 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ ಜೆಡಿಎಸ್ ತನ್ನ ಅಭ್ಯರ್ಥಿಯನ್ನೇ ಕಣಕ್ಕಿಳಿಸದೆ ಬೆಂಬಲ ನೀಡಿತ್ತಲ್ಲ ಆಗ ಖರ್ಗೆಯವರು ಬಲಿತ ದಲಿತರಾಗಿರಲಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.
ಪ್ರಿಯಾಂಕ್ ಖರ್ಗೆರವರು ಹದಿಮೂರು ವರ್ಷಗಳಿಂದ ಅಧಿಕಾರದಲ್ಲಿದ್ದರೂ ಕಲಬುರಗಿಗೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸುವ ಜೆಡಿಎಸ್ ನಾಯಕರಿಗೆ ಒಂದು ಸಲಹೆ ಏನೆಂದರೆ, 2018ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕಲಬುರಗಿಯಲ್ಲಿ ನಡೆದ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ಕಾರ್ಯಕ್ರಮದಲ್ಲಿ, ಕಲಬುರಗಿಯು ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಹೆಬ್ಬಾಗಿಲು ಎಂದು ಹೇಳಿರುವ ತಮ್ಮ ನಾಯಕರ ಭಾಷಣದ ವಿಡಿಯೋವನ್ನು ಮೊದಲು ವೀಕ್ಷಿಸಲಿ ಎಂದು ಜೆಡಿಎಸ್ ಮುಖಂಡರಿಗೆ ಸವಾಲ ಹಾಕಿದರು.




















