Home ಜಿಲ್ಲೆ ಕಲಬುರಗಿ ಶೈಕ್ಷಣಿಕ ಲೋಕದ ಅಪ್ರತಿಮ ಸೇವಾ ಸಾಧಕ ಪ್ರೊ. ಎಸ್. ಎಸ್. ಪಟ್ಟಣಶೆಟ್ಟರ್‌ಗೆ ಗೌರವ

ಶೈಕ್ಷಣಿಕ ಲೋಕದ ಅಪ್ರತಿಮ ಸೇವಾ ಸಾಧಕ ಪ್ರೊ. ಎಸ್. ಎಸ್. ಪಟ್ಟಣಶೆಟ್ಟರ್‌ಗೆ ಗೌರವ

ಗದಗ: ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘಕಾಲದಿಂದ ಸಲ್ಲಿಸುತ್ತಿರುವ ಅಮೂಲ್ಯ ಸೇವೆ, ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿಗೆ ನೀಡಿರುವ ಮಹತ್ವದ ಕೊಡುಗೆ ಹಾಗೂ ಶಿಕ್ಷಣದ ಗುಣಮಟ್ಟ ವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವುದನ್ನು ಗುರುತಿಸಿ, ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಹಾಗೂ ಖ್ಯಾತ ಶಿಕ್ಷಣ ತಜ್ಞರಾದ ಪ್ರೊ. ಎಸ್. ಎಸ್. ಪಟ್ಟಣಶೆಟ್ಟರ್ ಅವರಿಗೆ ಪ್ರತಿಷ್ಠಿತ ‘ಶಿಕ್ಷಣದ ಚಕ್ರವರ್ತಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗದಗದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸುತ್ತಾ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದರ ಜೊತೆಗೆ ಶೈಕ್ಷಣಿಕ ಸಂಸ್ಥೆಗಳ ಪ್ರಗತಿ ಹಾಗೂ ಸಮಾಜದ ಶೈಕ್ಷಣಿಕ ಬೆಳವಣಿಗೆಗೆ ಪ್ರೊ. ಎಸ್. ಎಸ್. ಪಟ್ಟಣಶೆಟ್ಟರ್ ನೀಡುತ್ತಿರುವ ಕೊಡುಗೆಯನ್ನು ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹರ್ಲಾಪುರ ಸುಕ್ಷೇತ್ರದ ಶ್ರೀ ಮ.ನಿ.ಪ್ರ. ಅಭಿನವ ಡಾ. ಕೊಟ್ಟೂರೇಶ್ವರ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು. ಶ್ರೀ ಟಿ. ಎನ್. ಭಾಂಡಗೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್. ಎನ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮಾಜಿ ಸಚಿವರು ಹಾಗೂ ಶಾಸಕರಾದ ಡಾ. ಎಚ್. ಕೆ. ಪಾಟೀಲ ಉದ್ಘಾಟಿಸಿದರು. ಮಾಜಿ ಸಚಿವರು ಹಾಗೂ ಶಾಸಕರಾದ ಸಿ. ಸಿ. ಪಾಟೀಲ ಪ್ರಶಸ್ತಿ ಪ್ರದಾನ ಮಾಡಿದರು. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಪ್ರೊ. ಎಸ್. ವಿ. ಸಂಕನೂರ, ಶಾಸಕ ಚಂದ್ರು ಲಮಾಣಿ, ಮಂಜುನಾಥ ಬ. ಅಬ್ಬಿಗೇರಿ, ಸತೀಶ ಮೇಹರವಾಡೆ ಹಾಗೂ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಾಗೇಶ ವಿ. ಕಲಬುರ್ಗಿ ಪಾಲ್ಗೊಂಡಿದ್ದರು.
ಡಾ. ಅನಂತ ಕಾರ್ಕಳ ಪ್ರಾಸ್ತಾವಿಕವಾಗಿ ಮಾತನಾಡಿದರು ಪತ್ರಿಕೆ ಬೆಳೆದು ಟಿ. ಎನ್. ಭಾಂಡಗೆ ಸ್ವಾಗತಿಸಿದರು. ಸುನೀಲ ತೆಂಬದಮನಿ ವಂದಿಸಿದರು. ಆನಂದಯ್ಯ ವಿರಕ್ತಮಠ ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ದೊರೆತ ಈ ಗೌರವವು ಪ್ರೊ. ಎಸ್. ಎಸ್. ಪಟ್ಟಣಶೆಟ್ಟರ್ ಅವರ ಶೈಕ್ಷಣಿಕ ಸಾಧನೆ ಮತ್ತು ಸೇವಾ ಪಯಣಕ್ಕೆ ಸಂದ ಮಹತ್ವದ ಗೌರವವೆಂದು ಗಣ್ಯರು ಅಭಿನಂದನೆ ಸಲ್ಲಿಸಿದರು.