
ಕೆ.ಆರ್.ಪುರ,ಅ.೧೬- ಮಹದೇವಪುರ ಕ್ಷೇತ್ರದ ವರ್ತೂರು- ಗುಂಜೂರು ಮುಖ್ಯರಸ್ತೆಯ ಕಾಮಗಾರಿಯನ್ನು ಮಾಜಿ ಸಚಿವ ಹಾಗೂ ಮಹದೇವಪುರ ಟಾಸ್ಕ್ ಫೋರ್ಸ್ ಅಧ್ಯಕ್ಷ ಅರವಿಂದ ಲಿಂಬಾವಳಿ ಅವರು ಸಂಬಂಧಪಟ್ಟಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ, ವಾಹನ ಸವಾರರ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ತಾವು ಶಾಸಕರಾಗಿದ್ದ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲಾಗಿತ್ತು ಎಂದು ತಿಳಿಸಿದರು.
ನಂತರ ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಅನುದಾನ ಬಿಡುಗಡೆ ವಿಳಂಬವಾಗಿದ್ದರಿಂದ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿತ್ತು. ಇದರಿಂದಾಗಿ ಕಾಮಗಾರಿಗೆ ವೇಗ ನೀಡಲು ಪರಿಶೀಲನೆ ಮಾಡಲಾಗಿದೆ, ಇದೀಗ ಅಂತಿಮ ಹಂತ ತಲುಪಿದೆ ಎಂದು ಹೇಳಿದರು.
ಕಿರಿದಾದ ರಸ್ತೆಯಿಂದಾಗಿ ಈ ಭಾಗದಲ್ಲಿ ಪ್ರತಿನಿತ್ಯ ವಾಹನ ಸವಾರರು ಸಂಚಾರ ದಟ್ಟಣೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರು.
ಇನ್ನು ಕೆಲವೇ ದಿನಗಳಲ್ಲಿ ರಸ್ತೆ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದ್ದು, ಇದರಿಂದ ಸ್ಥಳೀಯ ನಿವಾಸಿಗಳು ಹಾಗೂ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಬಹುಕಾಲದ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ಅರವಿಂದ ಲಿಂಬಾವಳಿ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮೊಬಿಲಿಟಿ ಟಾಸ್ಕ್ ಫೋರ್ಸ್ ಅಧ್ಯಕ್ಷ ನಟರಾಜ್, ನಗರ ಮಂಡಲ ಅಧ್ಯಕ್ಷ ಶ್ರೀಧರ ರೆಡ್ಡಿ, ರಾಜ್ಯ ಬಿಜೆಪಿ ಪರಿಷತ್ ಸದಸ್ಯ ಎಲ್.ರಾಜೇಶ್, ಬೆಂಗಳೂರು ನಗರಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಮೋದಿ,ಅಲ್ಪಸಂಖ್ಯಾತ ಘಟಕದ ಉಸ್ತುವಾರಿ ವರ್ತೂರು ಶ್ರೀಧರ್,ವರ್ತೂರು ಕಾಮಗಾರಿಗಳ ಉಸ್ತುವಾರಿ ವಿ.ಪಿ.ರಕ್ಷೀತ್, ಮುಖಂಡರಾದ ನಾಗರಾಜ್, ವಿವೇಕ್ ಉಪಸ್ಥಿತರಿದ್ದರು.























