Home ಮುಖಪುಟ ಸುದ್ದಿ ಎಸ್‌ಐಆರ್ ಹೋರಾಟಕ್ಕೆ ಇಂಡಿಯಾ ರಾಜ್ಯ ಮಟ್ಟದ ಸಭೆ

ಎಸ್‌ಐಆರ್ ಹೋರಾಟಕ್ಕೆ ಇಂಡಿಯಾ ರಾಜ್ಯ ಮಟ್ಟದ ಸಭೆ

ಬೆಂಗಳೂರು, ಅ. ೧೬- ಎಸ್‌ಐಆರ್ ಹಾಗೂ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲು ಇಂಡಿಯಾ ಮೈತ್ರಿಕೂಟದ ರಾಜ್ಯಮಟ್ಟದ ಮಹತ್ವದ ಸಭೆ ಬೆಂಗಳೂರಿನಲ್ಲಿಂದು ನಡೆಯಿತು.


ಶಾಸಕರ ಭವನದಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ಮತ ಉಳಿಸಿ ದೇಶ ಉಳಿಸಿ ಘೋಷವಾಕ್ಯದಡಿ ಈ ಸಭೆ ನಡೆದಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆ ಸಂವಿಧಾನಾತ್ಮಕ ಮೌಲ್ಯಗಳು ಹಾಗೂ ನಾಗರಿಕರ ಮತದಾನದ ಹಕ್ಕಿನ ರಕ್ಷಣೆಗಾಗಿ ಸಂಘಟಿತ ಹೋರಾಟ ನಡೆಸುವ ಬಗ್ಗೆ ಇಂಡಿಯಾ ಮೈತ್ರಿಕೂಟದ ಪಕ್ಷಗಳ ನಾಯಕರುಗಳು ಚರ್ಚೆ ನಡೆಸಿದರು.


ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ವಿವಾದ ಅರ್ಹ ಮತದಾರರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ ಎಂಬ ಆರೋಪಗಳು ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ಬಗ್ಗೆ ಈ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು.


ರಾಜ್ಯದಲ್ಲಿ ಜಂಟಿಯಾಗಿ ಎಸ್‌ಐಆರ್ ವಿರುದ್ಧ ಹೋರಾಟ ನಡೆಸುವ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆಗಳು ನಡೆದವು.
ಜಿಲ್ಲೆ ಹಾಗೂ ತಳಮಟ್ಟದಲ್ಲಿ ಮೈತ್ರಿಕೂಟದ ಸಮನ್ವಯವನ್ನು ಬಲಪಡಿಸುವ ಜತೆಗೆ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಮತ್ತು ಜಂಟಿ ಹೋರಾಟಗಳನ್ನು ನಡೆಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆಗಳು ನಡೆದವು.


ಈ ಸಭೆಯಲ್ಲಿ ಸಿಪಿಐ, ಸಿಪಿಐ(ಎಂ), ಸಿಪಿಐಎಂಎಲ್, ಎಐಎಫ್‌ವಿ, ಸಮಾಜವಾದಿ ಪಕ್ಷ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರುಗಳು ಭಾಗಿಯಾಗಿದ್ದರು.


ಬಿಕೆಹೆಚ್ ಹೇಳಿಕೆ


ಈ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು, ಎಸ್‌ಐಆರ್ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಿದೆ. ಈ ನಿಟ್ಟಿನಲ್ಲಿ ಇಂದು ಇಂಡಿಯಾ ಒಕ್ಕೂಟದ ಸಭೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಎಸ್‌ಐಆರ್ ವಿರುದ್ಧ ಹಾಗೂ ಸಂವಿಧಾನ ಉಳಿಸುವುದಕ್ಕೆ ಯಾವ ರೀತಿಯ ಹೋರಾಟಗಳನ್ನು ನಡೆಸಬೇಕು ಎಂಬ ಬಗ್ಗೆ ಚರ್ಚಿಸಿದ್ದೇವೆ ಎಂದರು.


ಕೇಂದ್ರ ಸರ್ಕಾರ ಫ್ಯಾಸಿಸ್ಟ್ ತತ್ವವನ್ನು ಅನುಸರಿಸುತ್ತಿದ್ದು, ಅದರ ವಿರುದ್ಧ ಹೋರಾಟ ಮಾಡಬೇಕಿದೆ. ಈ ತಿಂಗಳ ೨೩ ರಂದು ಇಂಡಿಯಾ ಒಕ್ಕೂಟದಿಂದ ಬೃಹತ್ ಹೋರಾಟ ನಡೆಯಲಿದ್ದು, ಅದಕ್ಕೂ ಸಭೆಯಲ್ಲಿ ಬೆಂಬಲ ವ್ಯಕ್ತವಾಗಿದೆ.


ರಾಜ್ಯದಲ್ಲಿ ಎಸ್‌ಐಆರ್ ವಿರುದ್ಧ ಹೋರಾಟಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಒಂದು ಸಮಿತಿ ರಚನೆಗೂ ನಿರ್ಧಾರ ಮಾಡಿದ್ದೇವೆ ಎಂದು ಅವರು ಹೇಳಿದರು.


ನವೆಂಬರ್ ೧ ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಯಲಿದೆ. ಎಲ್ಲರೂ ಇದರಲ್ಲಿ ಭಾಗಿಯಾಗುವಂತೆ ಮನವಿ ಮಾಡಿರುವುದಾಗಿಯೂ ಅವರು ತಿಳಿಸಿದರು.