ಚಿಕ್ಕಬಳ್ಳಾಪುರ,ಜು.೦೧: ಶಾಸಕ ಪ್ರದೀಪ್ ಈಶ್ವರ್ ಮೇಲೆ ನಿರಂತರ ದ್ವೇಷ ರಾಜಕಾರಣ ಮಾಡುತ್ತಿರುವ ಹಾಗೂ ಇತ್ತೀಚೆಗೆ ಶ್ರೀ ಕೆಂಪೇಗೌಡ ಜಯಂತಿ ಸಂದರ್ಭದಲ್ಲಿ ನಡೆದ ಗಲಭೆಗೆ ಪ್ರಚೋದನೆ ನೀಡಿದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯ ಡಾ. ಕೆ .ಸುಧಾಕರ್ ಹಾಗೂ ಶ್ರೀ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಸಂಸ್ಥೆಯ ಅಧ್ಯಕ್ಷ ಸಂದೀಪ ಬಿ ರೆಡ್ಡಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಬೇಕು ಎಂದು ತಾಲೂಕು ಕಾಂಗ್ರೆಸ್ ಮುಖಂಡ ಕೆಳಗಿನ ತೋಟದ ಡ್ಯಾನ್ಸ್ ಶ್ರೀನಿವಾಸ್ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರ ಜಯಂತಿ ಸಂದರ್ಭದಲ್ಲಿ ನಡೆದ ಘಟನೆಗಳಿಗೆಲ್ಲ ಜಾತ್ಯತೀತ ಜನತಾದಳ ಮತ್ತು ಬಿಜೆಪಿ ಪಕ್ಷದವರೇ ಕಾರಣ ಎಂದು ಆರೋಪಿಸಿದರು.
೧೯೮೯ರಲ್ಲಿ ಅಂದಿನ ಸಮಾಜವಾದಿ ಜನತಾದಳ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ನಮ್ಮ ತಂದೆ ಚುನಾವಣಾ ಪ್ರಚಾರ ಸಂದರ್ಭದಲ್ಲಿ ನಡೆದ ವಿದ್ಯುತ್ ದುರಂತದಲ್ಲಿ ಎಚ್.ಡಿ,ದೇವೇಗೌಡರ ನೇತೃತ್ವದ ಸಮಾಜವಾದಿ ಜನತಾ ಪಕ್ಷದ ಬ್ಯಾನರ್ ಕಟ್ಟಲು ಹೋಗಿ ಪ್ರಾಣಾರ್ಪಣೆ ಮಾಡಿಕೊಂಡರು.ಕನಿಷ್ಠ ಪಕ್ಷ ಅಂದು ದೇವೇಗೌಡರವರು ನಮ್ಮ ತಂದೆಯ ಮೃತ ದೇಹ ಇದ್ದ ಕಡೆ ಬರಲಿಲ್ಲ.ನಮ್ಮ ಮನೆಗೂ ಬಂದು ನಮಗೆ ಸಾಂತ್ವನ ಹೇಳಲಿಲ್ಲ ಎಂದು ಗದ್ಗತಿತಾರಾಗಿ ದುಃಖದಿಂದ ಅಂದಿನ ದುರ್ಘಟನೆಯನ್ನು ನೆನಪು ಮಾಡಿಕೊಂಡರು.
ದಲಿತ ಮುಖಂಡ ಸುಧಾ ವೆಂಕಟೇಶ್ ಮಾತನಾಡಿ,ನಾಡಪ್ರಭು ಕೆಂಪೇಗೌಡರ ಜಯಂತಿ ಸಂದರ್ಭದಲ್ಲಿ ಕನ್ನಡ ಭವನದಲ್ಲಿ ಶಾಸಕ ಪ್ರದೀಪ್ ಈಶ್ವರ್‌ಗೆ ಸುಮಾರು ನೂರಕ್ಕೂ ಹೆಚ್ಚು ಮಂದಿ ನಿಂದಿಸಿದರು/ಸರ್ಕಾರಿ ಕಾರ್ಯಕ್ರಮ ಆದ್ದರಿಂದ ನಮ್ಮ ಶಾಸಕರು ಉದ್ರೇಕಕ್ಕೆ ಒಳಗಾಗದೆ ಶಾಂತ ರೀತಿಯಿಂದ ವೇದಿಕೆಯಲ್ಲಿ ಇದ್ದರು. ಈ ಸಂದರ್ಭದಲ್ಲಿ ಜಾತ್ಯತೀತ ಜನತಾದಳ ಪಕ್ಷದ ಮುಖಂಡರಿಂದ ಪ್ರೇರೆಪಿತರಾದ ಕೆಲವು ಮಂದಿ ಶಾಸಕರನ್ನು ಹೀನಾಯ ಮಾತುಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದರು,
ಇದಲ್ಲದೆ, ಶಾಸಕ ಪ್ರದೀಪ್ ಈಶ್ವರ್ ಭುಜ ತಟ್ಟಿ ಕೂದಲು ಕಿತ್ತು ಮೀಸೆ ತಿರುವಿ ತಮ್ಮ ಪ್ರತಿರೋಧ ವ್ಯಕ್ತಪಡಿಸಿದ್ದು ಉದ್ದೇಶಪೂರ್ವಕದಿಂದ ಅಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮುಷ್ಟೂರು ನಾರಾಯಣಮ್ಮ ಮಾತನಾಡಿ,ಚಿಕ್ಕಬಳ್ಳಾಪುರದಲ್ಲಿ ಇತ್ತೀಚೆಗೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷದವರಿಂದ ದಬ್ಬಾಳಿಕೆ ರಾಜಕೀಯ ನಡೆಯುತ್ತಿದ್ದು ಏನು ಮಾಡಲು ಹೊರಟಿದ್ದಾರೆ ಇವರೆಲ್ಲ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಮುಖಂಡರುಗಳಾದ ಗವಿರಾಯಪ್ಪ ನಾಯನಹಳ್ಳಿ ನಾರಾಯಣಸ್ವಾಮಿ ನಗರಸಭೆ ಮಾಜಿ ಸದಸ್ಯ ಶ್ರೀನಿವಾಸ್ ಮತ್ತಿತರರು ಮಾತನಾಡಿ ಬಿಜೆಪಿ ಮತ್ತು ಜೆಡಿಎಸ್ ರವರು ತಾಲೂಕಿನಲ್ಲಿ ನಡೆಸುತ್ತಿರುವ ವೈಶ್ಯಮ್ಯದ ರಾಜಕಾರಣದ ಬಗ್ಗೆ ಕಿಡಿಕಾರಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ನಾಗೇಶ್ ರೆಡ್ಡಿ ರಕ್ಷಿತ್ ರೆಡ್ಡಿ ನಾಗಭೂಷಣ್ ಕಂದವಾರ ರಮೇಶ್ ಒಳಗೊಂಡಂತೆ ಮತ್ತಿತರರು ಹಾಜರಿದ್ದರು.
































