
ತುಮಕೂರು, ನ. ೨೮- ಸಾಮರಸ್ಯ, ಸಹಬಾಳ್ವೆ ಕನ್ನಡಿಗರ ವಿಶಾಲ ಗುಣ ಎಂದು ತುಮಕೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಹೆಚ್.ಎಸ್. ಮೋಹನ್ ಅಭಿಪ್ರಾಯಪಟ್ಟರು.
ನಗರದ ಶ್ರೀದೇವಿ ಕಾಲೇಜು ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚಾರಿತ್ರ್ಯ ಚೆನ್ನಾಗಿದ್ದರೆ ಚರಿತ್ರೆಯೂ ಚೆನ್ನಾಗಿರುತ್ತದೆ. ಆದ್ದರಿಂದ ಮಕ್ಕಳಿಗೆ ಕೇವಲ ಅಂಕಗಳು ಮತ್ತು ರ್ಯಾಂಕ್ಗಳ ಬಗ್ಗೆ ಹೇಳಿಕೊಡುವುದಕ್ಕಿಂತ ಉತ್ತಮ ನಡತೆ, ಮಾನವೀಯತೆ ಮತ್ತು ನೈತಿಕ ಮೌಲ್ಯ ಗಳ ಬಗ್ಗೆ ತಿಳಿ ಹೇಳಬೇಕು. ಜಗತ್ತು ಅಜ್ಞಾನ, ಮೂಢನಂಬಿಕೆ ಮತ್ತು ಅಂಧಕಾರದಲ್ಲಿ ಮುಳುಗಿರುವಾಗ ಪ್ರತಿಯೊಬ್ಬರೂ ಜ್ಞಾನದ ಬೆಳಕು ಹಚ್ಚಿ ಮತ್ತೊಬ್ಬರ ಬದುಕಿಗೆ ಹೊಸ ದಾರಿ ತೋರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಪ್ರೊ. ನಾರಾಯಣಘಟ್ಟ ಮಾತನಾಡಿ, ಸಮಾಜದಲ್ಲಿ ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ನಡೆಯುವ ಮೂಢನಂಬಿಕೆ, ಶೋಷಣೆ ಮತ್ತು ಜನರ ಅಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುವ ಪ್ರವೃತ್ತಿಗಳ ಬಗ್ಗೆ ಎಚ್ಚರ ವಹಿಸಬೇಕು. ಯಾವುದೇ ಆಚರಣೆಯನ್ನು ಕುರುಡಾಗಿ ಅನುಸರಿಸುವ ಬದಲು ಅದರ ಹಿಂದಿನ ಅರ್ಥ ಮತ್ತು ಉದ್ದೇಶವನ್ನು ವೈಚಾರಿಕವಾಗಿ ಪರಿಶೀಲಿಸಬೇಕು. ಗುರಿ ಎಷ್ಟು ಮುಖ್ಯವೋ ಅದನ್ನು ತಲುಪಲು ಅನುಸರಿಸುವ ಮಾರ್ಗವೂ ಅಷ್ಟೇ ಮುಖ್ಯ. ಒಳ್ಳೆಯ ಗುರಿ ಸಾಧಿಸಲು ಒಳ್ಳೆಯ ಮಾರ್ಗವನ್ನೇ ಆಯ್ಕೆ ಮಾಡಬೇಕು ಎಂದು ಹೇಳಿದರು.
ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ಎಂ. ಆರ್ ಹುಲಿನಾಯಕ್ಕರ್ ಮಾತನಾಡಿ, ಕನ್ನಡ ಭಾಷಿಕರನ್ನು ಒಗ್ಗೂಡಿಸಿ ಅಖಂಡ ಕರ್ನಾಟಕ ನಿರ್ಮಾಣಕ್ಕೆ ಧಾರವಾಡದ ಕೊಡುಗೆ ಅಪಾರ. ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ. ಕನ್ನಡಿಗರು ಯಾವುದೇ ರಾಜ್ಯಗಳಲ್ಲಿದ್ದರೂ ತಮ್ಮ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅಭಿಮಾನವಿರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ರಮಣ್ ಹುಲಿನಾಯ್ಕರ್, ಶ್ರೀದೇವಿ ಚಾರಿಟಬಲ್ ಟ್ರಸ್ಟಿಗಳಾದ ಡಾ. ಲಾವಣ್ಯ, ಅಂಬಿಕಾ ಹುಲಿನಾಯ್ಕರ್, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಎಂ.ಎಸ್. ಪಾಟೀಲ್ ಮತ್ತಿತರರು ಪಾಲ್ಗೊಂಡಿದ್ದರು.























