
ಕೋಲಾರ, ಜು,೩-ಪ್ರಸಕ್ತ ಸಾಲಿನ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ-ಬೆಲೆ ವ್ಯತ್ಯಾಸ ಪಾವತಿ ಯೋಜನೆ ಅಡಿಯಲ್ಲಿ ನೋಂದಾಯಿತ ತೋತಾಪುರಿ ಮಾವು ಬೆಳೆಗಾರ ರೈತರು, ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವಾಗ ಯಾವುದೇ ಆತುರ ತೋರದೆ, ಯೋಜನೆಯ ಅವಧಿಯೊಳಗೆ ಹಂತ ಹಂತವಾಗಿ ಮಾರಾಟ ಮಾಡುವಂತೆ ಕೃಷಿ ಮಾರಾಟ ಇಲಾಖೆ ಮನವಿ ಮಾಡಿದೆ.
ಸರ್ಕಾರದ ಆದೇಶದಂತೆ, ಈ ಯೋಜನೆಯು ಅನುಷನಗೊಂಡ ದಿನದಿಂದ ೩೦ ದಿನಗಳ ಅವಧಿಯವರೆಗೆ ಚಾಲ್ತಿಯಲ್ಲಿರುತ್ತದೆ. ಈ ಹಿನ್ನೆಲೆಯಲ್ಲಿ, ಈಗಾಗಲೇ ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಂಡಿರುವ ರೈತರು ತಮ್ಮ ಮಾವಿನ ಹಣ್ಣಿನ ಹದ ಮತ್ತು ಅನುಕೂಲಕ್ಕೆ ಅನುಗುಣವಾಗಿ ೩೦ ದಿನಗಳ ಕಾಲಮಿತಿಯೊಳಗೆ ಮಾರುಕಟ್ಟೆಗೆ ಮಾವನ್ನು ತರಬೇಕೆಂದು ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ತೋಟ ಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಒಂದೇ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾವು ಮಾರುಕಟ್ಟೆಗೆ ಆಗಮಿಸಿದರೆ ಮಾರುಕಟ್ಟೆಯ ನಿರ್ವಹಣೆ, ತೂಕ ಮತ್ತು ಬಿಲ್ಲಿಂಗ್ ಪ್ರಕ್ರಿಯೆಗಳಲ್ಲಿ ತೊಂದರೆ ಉಂಟಾಗಬಹುದು ಎಂದು ಇಲಾಖೆ ಎಚ್ಚರಿಸಿದೆ. ಇದರ ಜೊತೆಗೆ, ಸಂಸ್ಕರಣಾ ಘಟಕಗಳಲ್ಲಿ ಸ್ಥಳಾವಕಾಶದ ಕೊರತೆ ಹಾಗೂ ರಾಜ್ಯದ ಹೊರಗೆ ಮಾವು ಸಾಗಿಸಲು ಅಗತ್ಯವಿರುವ ಲಾರಿಗಳ ಲಭ್ಯತೆಯ ಕೊರತೆಯಂತಹ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ.
ಈ ರೀತಿಯ ಅನಗತ್ಯ ಸಮಸ್ಯೆಗಳನ್ನು ತಪ್ಪಿಸುವ ಮೂಲಕ ಮಾರುಕಟ್ಟೆ ವ್ಯವಸ್ಥೆಯನ್ನು ಸುಗಮವಾಗಿ ನಿರ್ವಹಿಸಲು ಮತ್ತು ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರೈತರು ಸಹಕರಿಸಬೇಕೆಂದು ಕೃಷಿ ಮಾರುಕಟ್ಟೆ ಸಹಾಯಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.


































