
ಕಲಬುರಗಿ: ಶರಣರ ಭಕ್ತಿಭಾವದಲ್ಲಿ ಮಿಂದೆದ್ದ ಭಕ್ತರು, ಶರಣರ ಸನ್ನಿಧಿಯಲ್ಲಿ ಆಧ್ಯಾತ್ಮಿಕ ಕಳೆ, ಶರಣಬಸವೇಶ್ವರ ಸನ್ನಿಧಿಯಲ್ಲಿ ಶ್ರಾವಣ ಮಾಸದ ಭವ್ಯಾರಂಭ, ಭಕ್ತ ಸಾಗರದ ನಡುವೆ ಮೊಳಗಿದ ಶರಣನಾಮ ಹಾಗೂ ಆಧ್ಯಾತ್ಮಿಕ ಸಂಭ್ರಮದಲ್ಲಿ ಶ್ರಾವಣದ ಮೊದಲ ದಿನ ಶರಣಬಸವೇಶ್ವರ ದೇವಸ್ಥಾನದಲ್ಲಿ ಭಕ್ತಿಯ ವೈಭವ. ಇದು ಕಂಡುಬಂದದ್ದು ಕಲಬುರಗಿ ನಗರದ ಆರಾಧ್ಯ ದೈವ ಶರಣಬಸವೇಶ್ವರ ದೇವಸ್ಥಾನದಲ್ಲಿ, ಪವಿತ್ರ ಶ್ರಾವಣ ಮಾಸದ ಮೊದಲ ದಿನವಾದ ಬುಧವಾರದಂದು.
ಅಲ್ಲಿ ಭಕ್ತಿ, ಶ್ರದ್ಧೆ ಮತ್ತು ವೈಭವದ ಅಪೂರ್ವ ಸಂಗಮವೇ ಸಾಕ್ಷಾತ್ಕಾರಗೊಂಡಿತ್ತು. ಶ್ರಾವಣದ ಮೊದಲ ದಿನವೇ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಹರಿದುಬಂದ ಹಿನ್ನೆಲೆಯಲ್ಲಿ ಇಡೀ ದೇವಸ್ಥಾನ ಆವರಣವು ಭಕ್ತಿಸಾಗರವಾಗಿ ಮಾರ್ಪಟ್ಟಿತ್ತು. “ಶರಣಬಸವೇಶ್ವರ ಮಹಾರಾಜ್ ಕಿ ಜೈ” ಎಂಬ ಭಕ್ತಿಭಾವದ ಘೋಷಣೆಗಳು ಮುಗಿಲು ಮುಟ್ಟಿದವು. ಮುಂಜಾನೆಯಿಂದಲೇ ವಿವಿಧೆಡೆಯಿಂದ ಆಗಮಿಸಿದ ಭಕ್ತರು ಶರಣಬಸವೇಶ್ವರರ ದರ್ಶನ ಪಡೆದು, ವಿಶೇಷ ಪೂಜೆ, ಅಭಿμÉೀಕ ಹಾಗೂ ಪ್ರಾರ್ಥನೆ ಸಲ್ಲಿಸಿದರು. ಶ್ರಾವಣ ಮಾಸದ ಪಾವಿತ್ರ್ಯಕ್ಕೆ ತಕ್ಕಂತೆ ದೇವಸ್ಥಾನವನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಬಣ್ಣಬಣ್ಣದ ಹೂವುಗಳು, ತಳಿರು-ತೋರಣಗಳು ಹಾಗೂ ವಿದ್ಯುತ್ ದೀಪಾಲಂಕಾರಗಳಿಂದ ದೇವಸ್ಥಾನದ ಆವರಣ ಕಂಗೊಳಿಸುತ್ತಿತ್ತು.
“ಶರಣಬಸವೇಶ್ವರ ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರು ಪವಿತ್ರ ಶ್ರಾವಣ ಮಾಸದ ಸ್ಮರಣಾರ್ಥ, ಸಾಂಪ್ರದಾಯಿಕ ಪಾದಪೂಜೆ, ತ್ರಿಕಾಲ ಪೂಜೆ ಹಾಗೂ ವಿಶೇಷ ಪೂಜೆಗಳನ್ನು ನೆರವೇರಿಸಿದರು”.
ದೇವಸ್ಥಾನದಲ್ಲಿರುವ ಶರಣಬಸವೇಶ್ವರರ ವಿಗ್ರಹವು ಬಣ್ಣಬಣ್ಣದ ಹೂವುಗಳಿಂದ ಅಲಂಕಾರಗೊಳಿಸಲಾಗಿತ್ತು. ಶ್ರಾವಣದ ಮೊದಲ ದಿನದಂಗವಾಗಿ ನಡೆದ ವಿಶೇಷ ಪೂಜಾ ಕೈಂಕರ್ಯಗಳು, ಧಾರ್ಮಿಕ ವಿಧಿವಿಧಾನಗಳು ಹಾಗೂ ಭಜನಾ ಕಾರ್ಯಕ್ರಮಗಳು ಭಕ್ತರ ಮನದಲ್ಲಿ ಆಧ್ಯಾತ್ಮಿಕ ಭಾವವನ್ನು ಮೂಡಿಸಿದವು. ಕುಟುಂಬ ಸಮೇತರಾಗಿ ಆಗಮಿಸಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ಶರಣಬಸವೇಶ್ವರರ ದರ್ಶನ ಪಡೆದು ಪುನೀತರಾದರು.
ಬಂದ ಭಕ್ತರೆಲ್ಲರಿಗೂ ದಾಸೋಹ ವiಹಾಮನೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಭಕ್ತರಲ್ಲಿ “ತಾಯಿ ಅನ್ನಪೂರ್ಣೆಶ್ವರಿ” ಎಂದೇ ಖ್ಯಾತನಾಮರಾದ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ, ಬಂದ ಭಕ್ತರಿಗೆ ಪ್ರೀತಿಯಿಂದ ಉಣಬಡಿಸಿದರು. ಸಂಸ್ಥಾನದ 9ನೇ ಪೀಠಾದಿಪತಿಗಳಾದ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಅವರು ಅವ್ವಾಜಿಯವರ ಕೈ ಜೋಡಿಸಿದರು.
ಶರಣಬಸವೇಶ್ವರ ಸಂಸ್ಥಾನದ ಧಾರ್ಮಿಕ ಹಾಗೂ ಸಾಮಾಜಿಕ ಪರಂಪರೆಯಲ್ಲಿ ಶ್ರಾವಣ ಮಾಸಕ್ಕೆ ವಿಶಿಷ್ಟ ಸ್ಥಾನವಿದೆ. ಈ ಪವಿತ್ರ ಅವಧಿಯಲ್ಲಿ ನಡೆಯುವ ಆಧ್ಯಾತ್ಮಿಕ ಪ್ರವಚನಗಳು, ಧಾರ್ಮಿಕ ಉಪನ್ಯಾಸಗಳು, ಭಜನಾ ಕಾರ್ಯಕ್ರಮಗಳು ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಭಕ್ತರಿಗೆ ಭಕ್ತಿ, ಜ್ಞಾನ ಮತ್ತು ಸಂಸ್ಕಾರದ ಅನುಭವವನ್ನು ನೀಡಿದವು. ಶ್ರಾವಣ ಮಾಸದ ಮೊದಲ ದಿನವೇ ದೇವಸ್ಥಾನದಲ್ಲಿ ಕಂಡುಬಂದ ಭಕ್ತರ ಅಪಾರ ಉತ್ಸಾಹ, ಸಂಭ್ರಮ ಹಾಗೂ ಆಧ್ಯಾತ್ಮಿಕ ವಾತಾವರಣವು ಮುಂದಿನ ದಿನಗಳಲ್ಲಿ ನಡೆಯಲಿರುವ 40 ದಿನಗಳ ಶ್ರಾವಣ ಮಾಸದ ಧಾರ್ಮಿಕ ವೈಭವಕ್ಕೆ ಅದ್ದೂರಿ ಮುನ್ನುಡಿಯಾಯಿತು. ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶವೆಲ್ಲ ಭಕ್ತರಿಂದ ತುಂಬಿ ತುಳುಕುತ್ತಿದ್ದ ದೃಶ್ಯ ಮನಮೋಹಕವಾಗಿತ್ತು.
ಶರಣಬಸವೇಶ್ವರ ದೇವರ ದರ್ಶನ, ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಭಕ್ತರು ಶ್ರಾವಣ ಮಾಸವನ್ನು ಭಕ್ತಿ, ಶ್ರದ್ಧೆ, ಸತ್ಕಾರ್ಯ ಮತ್ತು ಧಾರ್ಮಿಕ ಚಿಂತನೆಯೊಂದಿಗೆ ಆಚರಿಸುವ ಸಂಕಲ್ಪ ತೊಟ್ಟರು. ಒಟ್ಟಿನಲ್ಲಿ, ಶ್ರಾವಣದ ಮೊದಲ ದಿನ ಶರಣಬಸವೇಶ್ವರ ದೇವಸ್ಥಾನದಲ್ಲಿ ಮೂಡಿಬಂದ ಭಕ್ತಿಯ ವೈಭವವು ಕಲಬುರಗಿಯ ಧಾರ್ಮಿಕ ಪರಂಪರೆ ಮತ್ತು ಶರಣ ಸಂಸ್ಕೃತಿಯ ಶ್ರೀಮಂತಿಕೆಯನ್ನು ಮತ್ತೊಮ್ಮೆ ಅನಾವರಣಗೊಳಿಸಿತು.






























