
ಜಮಖಂಡಿ:ನಗರದ ಐತಿಹಾಸಿಕ ಹೊಕ್ಕಳಭಾವಿ ಮೈದಾನದಲ್ಲಿ ಕನ್ನಡ ಸಂಘ, ತಾಲೂಕು ಆಡಳಿತ, ನಗರಸಭೆ, ತಾಲೂಕು ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ 71ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಕನ್ನಡ ಸಂಘದ ಅಧ್ಯಕ್ಷ ರಾಹುಲ್ ಕಲೂತಿ ಮಾತನಾಡಿ, ಕನ್ನಡ ಸಂಘವು 60 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ್ದು, ಈ ವರ್ಷದ 60ನೇ ವರ್ಷದ ಸಂಭ್ರಮದ ಅಂಗವಾಗಿ ಜಮಖಂಡಿಯಲ್ಲಿ ವಿಶೇಷ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಕೇವಲ ಎಂಟು-ಹತ್ತು ಕಾಲೇಜು ವಿದ್ಯಾರ್ಥಿಗಳು ಆರಂಭಿಸಿದ ಕನ್ನಡ ಸಂಘ ಇಂದು ಆರು ದಶಕಗಳನ್ನು ಪೂರೈಸಿ ಹೆಮ್ಮೆಯ ಸಂಸ್ಥೆಯಾಗಿ ಬೆಳೆದಿದೆ. ಇದಕ್ಕೆ ಹಿಂದಿನ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಕನ್ನಡಾಭಿಮಾನಿಗಳ ಪರಿಶ್ರಮವೇ ಕಾರಣವಾಗಿದೆ ಎಂದು ಸ್ಮರಿಸಿದರು.
ಈ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ರಾಷ್ಟ್ರಮಟ್ಟದ ಕಬಡ್ಡಿ, ಕುಸ್ತಿ, ವಾಲಿಬಾಲ್ ಹಾಗೂ ಸೈಕ್ಲಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸುಮಾರು 100 ಮಳಿಗೆಗಳನ್ನು ಸ್ಥಾಪಿಸುವುದರ ಜೊತೆಗೆ ಮಕ್ಕಳಿಗಾಗಿ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಈ ಬಾರಿಯ ಉತ್ಸವ ಕೇವಲ ಯುವಕರಿಗೆ ಸೀಮಿತವಾಗದೆ ಇಡೀ ಕುಟುಂಬವೇ ಭಾಗವಹಿಸಿ ಸಂಭ್ರಮಿಸುವ ಉತ್ಸವವಾಗಿದೆ ಎಂದು ತಿಳಿಸಿದರು.
ಜಮಖಂಡಿಯಲ್ಲಿ ಕನ್ನಡ ಭವನ ನಿರ್ಮಿಸುವುದು ಕನ್ನಡ ಸಂಘದ ಪ್ರಮುಖ ಆಶಯವಾಗಿದ್ದು, ಇದಕ್ಕಾಗಿ ಸೂಕ್ತ ಜಾಗ ಒದಗಿಸಲು ಶಾಸಕರು ಹಾಗೂ ಅಧಿಕಾರಿಗಳು ಸಹಕಾರ ನೀಡಬೇಕು. ಈ ವರ್ಷವೇ ಅಡಿಗಲ್ಲು ಸಮಾರಂಭ ನೆರವೇರಿಸಿ, ಮುಂದಿನ ದಿನಗಳಲ್ಲಿ ಭವನ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡುವ ಉದ್ದೇಶವಿದೆ ಎಂದು ಹೇಳಿದರು.
ಕನ್ನಡ ರಾಜ್ಯೋತ್ಸವದಲ್ಲಿ ಎಲ್ಲ ಸರ್ಕಾರಿ ಅಧಿಕಾರಿಗಳು ಭಾಗವಹಿಸಬೇಕು: ಶ್ವೇತಾ ಬೀಡಿಕರ
ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಮಾತನಾಡಿ, ಕನ್ನಡ ರಾಜ್ಯೋತ್ಸವ ರಾಷ್ಟ್ರೀಯ ಹಬ್ಬವಾಗಿದ್ದು, ಸರ್ಕಾರಿ ಅಧಿಕಾರಿಗಳು ಸೇರಿದಂತೆ ಪ್ರತಿಯೊಬ್ಬರೂ ಉತ್ಸಾಹದಿಂದ ಭಾಗವಹಿಸಬೇಕು. ಈ ಬಾರಿ ಕೆಲವು ಇಲಾಖೆಗಳ ಅಧಿಕಾರಿಗಳ ಗೈರುಹಾಜರಿ ಕಂಡುಬಂದಿದ್ದು, ಮುಂದಿನ ವರ್ಷದಿಂದ ಹೊಕ್ಕಳಭಾವಿ ಮೈದಾನವು ಸರ್ಕಾರಿ ಅಧಿಕಾರಿಗಳಿಂದ ಸಂಪೂರ್ಣವಾಗಿ ತುಂಬಿರಬೇಕು. ಈ ನಿಟ್ಟಿನಲ್ಲಿ ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಜವಾಬ್ದಾರಿ ವಹಿಸಬೇಕು ಎಂದು ಸೂಚಿಸಿದರು.
ಕನ್ನಡ ಭಾಷೆ ನಮ್ಮ ಹೆಮ್ಮೆ ಮತ್ತು ಅಭಿಮಾನ. ಯುವಕ-ಯುವತಿಯರು ಕನ್ನಡವನ್ನು ಬಳಸುವುದರ ಜೊತೆಗೆ ಇತರ ಭಾಷೆಗಳನ್ನು ಕಲಿತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಆದರೆ ಮಾತೃಭಾಷೆಯನ್ನು ಎಂದಿಗೂ ಮರೆಯಬಾರದು ಎಂದು ಕರೆ ನೀಡಿದರು.
ಕನ್ನಡ ನಮ್ಮ ಅಸ್ಮಿತೆ, ಕನ್ನಡವೇ ನಮ್ಮ ಆದ್ಯತೆ: ಶಾಸಕ ಜಗದೀಶ ಗುಡಗುಂಟಿ
ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ಕನ್ನಡ ನಮ್ಮ ಅಸ್ಮಿತೆ, ಅನನ್ಯತೆ ಹಾಗೂ ಆದ್ಯತೆಯಾಗಿದೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ, ಶ್ರೀಮಂತ ಸಾಹಿತ್ಯ, ಸಂಸ್ಕøತಿ ಹಾಗೂ ಪರಂಪರೆ ಇದೆ ಎಂದರು.
ಕನ್ನಡ ನಾಡಿನ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರನ್ನು ಸ್ಮರಿಸಿದ ಅವರು, ಜಮಖಂಡಿಯ ಕನ್ನಡ ಸಂಘವು 60 ವರ್ಷ ಪೂರೈಸಿರುವುದು ಹೆಮ್ಮೆಯ ಸಂಗತಿ. ನಾಡದೇವಿ ಭುವನೇಶ್ವರಿಯ ಜಂಬೂ ಸವಾರಿ, ರಾಷ್ಟ್ರಮಟ್ಟದ ಕಬಡ್ಡಿ, ಕುಸ್ತಿ, ಸೈಕ್ಲಿಂಗ್ ಹಾಗೂ ವಾಲಿಬಾಲ್ ಸ್ಪರ್ಧೆಗಳನ್ನು ಆಯೋಜಿಸಿರುವುದು ಕ್ರೀಡಾಭಿಮಾನಿಗಳಿಗೆ ಸಂತಸ ತಂದಿದೆ ಎಂದರು.
ಕನ್ನಡ ಭವನ ನಿರ್ಮಾಣಕ್ಕೆ ಸೂಕ್ತ ಜಾಗ ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದು, ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಂಡು ಶೀಘ್ರದಲ್ಲೇ ಭವನ ನಿರ್ಮಾಣದ ಕನಸನ್ನು ನನಸಾಗಿಸಲು ಪ್ರಯತ್ನಿಸಲಾಗುವುದು. ಜಮಖಂಡಿ ಸೇತುವೆಗೆ ರಾವ್ ಬಹದ್ದೂರ್ ಹೆಸರು ನಾಮಕರಣ ಮಾಡುವ ಪ್ರಯತ್ನಕ್ಕೂ ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ನೀರಿನ ಮಿತ ಬಳಕೆ, ಅಂತರ್ಜಲ ಸಂರಕ್ಷಣೆ ಹಾಗೂ ಪರಿಸರ ರಕ್ಷಣೆಯ ಮಹತ್ವವನ್ನು ವಿವರಿಸಿದ ಅವರು, ಅನಗತ್ಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಕಡಿಮೆ ಮಾಡಿ, ಸಣ್ಣಪುಟ್ಟ ಪ್ರಯಾಣಗಳಿಗೆ ಸೈಕಲ್ ಬಳಸುವ ಮೂಲಕ ಇಂಧನ ಉಳಿತಾಯ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕನ್ನಡ ಭಾಷೆಯ ಉಳಿವಿಗೆ ಮನೆಮನೆಯಿಂದಲೇ ಪ್ರಯತ್ನವಾಗಲಿ: ಶ್ರೀಕಾಂತ ಕುಲಕರ್ಣಿ
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಕನ್ನಡ ಭಾಷೆ ನಮ್ಮ ಅಸ್ತಿತ್ವ, ಸಂಸ್ಕೃತಿ, ಭಾವನೆ ಹಾಗೂ ಬದುಕಿನ ಉಸಿರಾಗಿದೆ. ಪಂಪ, ಹೊನ್ನ, ರನ್ನ, ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಕುಮಾರವ್ಯಾಸ, ಕುವೆಂಪು, ಬೇಂದ್ರೆ ಸೇರಿದಂತೆ ಅನೇಕ ಮಹನೀಯರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ನವೆಂಬರ್ 1ರಂದು ಮಾತ್ರ ಕನ್ನಡದ ಬಗ್ಗೆ ಮಾತನಾಡಿ, ಉಳಿದ ದಿನಗಳಲ್ಲಿ ಇಂಗ್ಲಿಷ್ ಹಾಗೂ ಇತರ ಭಾಷೆಗಳ ವ್ಯಾಮೋಹಕ್ಕೆ ಒಳಗಾಗಬಾರದು. ಮನೆಗಳಲ್ಲಿ ಮಕ್ಕಳೊಂದಿಗೆ ಕನ್ನಡದಲ್ಲಿಯೇ ಮಾತನಾಡಬೇಕು. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಜಮಖಂಡಿಯ ಪಟವರ್ಧನ ಮಹಾರಾಜರು ನಗರಕ್ಕೆ ನೀಡಿದ ಕೊಡುಗೆಗಳು, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಸ್ಮರಿಸಿದ ಅವರು, ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ಸೂಕ್ತ ಆದ್ಯತೆ ಮತ್ತು ನ್ಯಾಯ ದೊರೆಯುವಂತೆ ಸರ್ಕಾರ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.
ಕನ್ನಡ ಭಾಷೆ ಉಳಿಯಬೇಕಾದರೆ ಕುಟುಂಬ ಮತ್ತು ಸಂಸ್ಕೃತಿ ಉಳಿಯಬೇಕು: ಹರಶಾನಂದ ಶ್ರೀಗಳು
ದಿವ್ಯ ಸಾನಿಧ್ಯ ವಹಿಸಿದ್ದ ಹರಶಾನಂದ ಶ್ರೀಗಳು ಆಶೀರ್ವಚನ ನೀಡಿ, ಇಂದಿನ ದಿನಗಳಲ್ಲಿ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮನೆಗಳಲ್ಲಿ ತಾಯಂದಿರು ಮಕ್ಕಳೊಂದಿಗೆ ಕನ್ನಡ ಮಾತನಾಡಬೇಕು. ಇಂಗ್ಲಿಷ್ ಶಿಕ್ಷಣಕ್ಕೆ ವಿರೋಧವಿಲ್ಲ, ಆದರೆ ಮಕ್ಕಳಿಗೆ ಕನ್ನಡ ಓದಲು, ಬರೆಯಲು ಮತ್ತು ಶುದ್ಧವಾಗಿ ಮಾತನಾಡಲು ಕಲಿಸಬೇಕು ಎಂದರು.
ಕುಟುಂಬ ವ್ಯವಸ್ಥೆ ಹಾಗೂ ಸಂಸ್ಕೃತಿ ಉಳಿದಾಗ ಮಾತ್ರ ಭಾಷೆಯೂ ಉಳಿಯುತ್ತದೆ. ಕನ್ನಡ ಸಂಘಗಳು ಕೇವಲ ರಾಜ್ಯೋತ್ಸವಕ್ಕೆ ಸೀಮಿತವಾಗದೆ ವರ್ಷವಿಡೀ ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಕ್ರೀಡೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಹೇಳಿದರು.
ಯುವ ಅಧ್ಯಕ್ಷ ರಾಹುಲ್ ಕಲೂತಿ ನೇತೃತ್ವದಲ್ಲಿ ಈ ವರ್ಷ ಕನ್ನಡ ಸಂಘವು ಅದ್ಧೂರಿ ಕಾರ್ಯಕ್ರಮಗಳನ್ನು ರೂಪಿಸಿರುವುದು ಸಂತೋಷದ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡಾಭಿಮಾನಿಗಳು ನಾಡು-ನುಡಿಯ ಕೆಲಸಕ್ಕೆ ಸಮಯ ಮೀಸಲಿಡಲಿ: ಮುತ್ತಿನಕಂತಿ ಶ್ರೀಗಳು
ಮುತ್ತಿನಕಂತಿ ಶ್ರೀಗಳು ಆಶೀರ್ವಚನ ನೀಡಿ, ಸಮಾಜದಲ್ಲಿ ಅತ್ಯಂತ ಶ್ರೇಷ್ಠವಾದ ದಾನವೆಂದರೆ ಸಮಯದಾನ. ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯ ಬೆಳವಣಿಗೆಗಾಗಿ ಪ್ರತಿಯೊಬ್ಬರೂ ತಮ್ಮ ಅಮೂಲ್ಯ ಸಮಯವನ್ನು ಮೀಸಲಿಡಬೇಕು. ಕನ್ನಡ ಸಂಘದ ಅಧ್ಯಕ್ಷ ರಾಹುಲ್ ಕಲೂತಿ ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಅಧಿಕಾರಿಗಳು ಮತ್ತು ಸಂಘಟಕರ ಕಾರ್ಯವನ್ನು ಶ್ಲಾಘಿಸಿ, ಎಲ್ಲರೂ ಒಗ್ಗಟ್ಟಿನಿಂದ ಕನ್ನಡದ ಕೆಲಸಗಳಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ವಿಧಾನ ಪರಿಷತ್ತಿನ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ ಮಾತನಾಡಿದರು.
ಜಂಬೂ ಸವಾರಿ, ಕುಂಭಮೇಳದೊಂದಿಗೆ ಕಂಗೊಳಿಸಿದ ಜಮಖಂಡಿ
ಕಾರ್ಯಕ್ರಮದ ಆರಂಭದಲ್ಲಿ ತಹಶೀಲ್ದಾರ್ ಅನಿಲ ಬಡಗೇರ ಸ್ವಾಗತಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಬಡಗೇರ ವಂದಿಸಿದರು. ಡಾ. ಎನ್.ವಿ. ಅಸ್ಕಿ ನಿರೂಪಿಸಿದರು.
ನಂತರ ಕನ್ನಡ ಸಂಘದ ಅಧ್ಯಕ್ಷ ರಾಹುಲ್ ಕಲೂತಿ, ಶಾಸಕ ಜಗದೀಶ ಗುಡಗುಂಟಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಸೇರಿದಂತೆ ಗಣ್ಯರು ಜಂಬೂ ಸವಾರಿ ಹಾಗೂ ವಿವಿಧ ವಾದ್ಯಮೇಳಗಳ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.
ನಾಡದೇವಿ ಭುವನೇಶ್ವರಿಯ ಭವ್ಯ ಮೂರ್ತಿ, ಜಂಬೂ ಸವಾರಿ, ವಿವಿಧ ಕಲಾತಂಡಗಳು ಹಾಗೂ ವಾದ್ಯಮೇಳಗಳೊಂದಿಗೆ ಮೆರವಣಿಗೆ ಆರಂಭಗೊಂಡಿತು. ನೂರಾರು ಮುತ್ತೈದೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು, ತಲೆಯ ಮೇಲೆ ಕುಂಭ ಹೊತ್ತು ಮೆರವಣಿಗೆಗೆ ವಿಶೇಷ ಮೆರುಗು ನೀಡಿದರು.
ಹೊಕ್ಕಳಭಾವಿಯಿಂದ ಆರಂಭಗೊಂಡ ಮೆರವಣಿಗೆಯು ಓಲೆಮಠ, ಬಾಗ್ಸೆ ಗಲ್ಲಿ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ದೇಸಾಯಿ ವೃತ್ತದ ಬಳಿಯ ಪರಶುರಾಮ ಉದ್ಯಾನವನದಲ್ಲಿ ಸಮಾರೋಪಗೊಂಡಿತು. ನಗರದಾದ್ಯಂತ ಕನ್ನಡಾಭಿಮಾನಿಗಳ ಸಂಭ್ರಮ ಮನೆಮಾಡಿತ್ತು.
ಕಾರ್ಯಕ್ರಮದಲ್ಲಿ ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ಮಾಮೂನ ರಶೀದ್ ಪಾರ್ಥನಳ್ಳಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅನ್ವರ ಮೊಮಿನ, ಅರುಣಕುಮಾರ ಶಹಾ, ಸುಶೀಲಕುಮಾರ ಬೆಳಗಲಿ, ಪೌರಾಯುಕ್ತೆ ಜ್ಯೋತಿ ಗಿರೀಶ್, ಡಾ. ರಂಗನಾಥ ಸೋನ್ವಲ್ಕರ್, ಪಿ.ಬಿ. ಅಜ್ಜನ್ನವರ ಸೇರಿದಂತೆ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಕನ್ನಡ ಸಂಘದ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯ ವೈಭವವನ್ನು ಸಾರಿದ 71ನೇ ಕನ್ನಡ ರಾಜ್ಯೋತ್ಸವ ಮತ್ತು ಕನ್ನಡ ಸಂಘದ 60ನೇ ವರ್ಷದ ಸಂಭ್ರಮಾಚರಣೆ ಜಮಖಂಡಿಯಲ್ಲಿ ಅದ್ಧೂರಿಯಾಗಿ ನೆರವೇರಿತು.























