
ಕಲಬುರಗಿ,ಮೇ 9: ಮನುಸ್ಮೃತಿ ಯಲ್ಲಿ ಮಹಿಳೆಯರಿಗೆ ಯಾವುದೇ ಹಕ್ಕುಗಳಿರಲಿಲ್ಲ. ಮಹಿಳೆಯರಿಗೆ ಸಮಾನ ಹಕ್ಕು ದೊರಕಿಸಿಕೊಡಲು ಆ ಕಾಲದಲ್ಲೇ ಬಸವಣ್ಣನವರು ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸಮಾನವಾದ ಅವಕಾಶ ನೀಡಿದ್ದರು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದರು.
ನಗರದ ಎಸ್ ಎಂ ಪಂಡಿತ ರಂಗಮಂದಿರದಲ್ಲಿ ನಡೆದಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಬಸವಣ್ಣನವರು ಅವಿರತ ಹೋರಾಟದ ನಂತರವೂ ಕೂಡಾ ಮಹಿಳೆಯರಿಗೆ ಹಕ್ಕುಗಳು ಸಿಗಲಿಲ್ಲ, ಈಗಲೂ ಮಹಿಳೆಯರಿಗೆ ಸಿಗುತ್ತಿಲ್ಲ ಎಂದು ವಿಷಾಧಿಸಿದ ಪ್ರಿಯಾಂಕ್ ಖರ್ಗೆ ಡಾ ಅಂಬೇಡ್ಕರ್ ಅವರು ಸಂವಿಧಾನದ ಅಡಿಯಲ್ಲಿ ಮಹಿಳೆಯರಿಗೆ ಸಮಾನವಾದ ಹಕ್ಕು ನೀಡಿದ್ದಾರೆ. ಉದ್ಯೋಗದ ಹಕ್ಕು ಹಾಗೂ ಸಮಾನ ವೇತನ ಕೂಡಾ ದೊರಕಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರ ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆಗಳನ್ನು ನಾರಿಯರ ಸಲುವಾಗಿಯೇ ಜಾರಿಗೆ ತರಲಾಗಿದೆ. ಇದರಿಂದಾಗಿ ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಅವರನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರ ಕೆಲಸ ಸುಲಭವಲ್ಲ. ಅಂಗನಾಡಿ ಕೇಂದ್ರಗಳು ಮಕ್ಕಳ ಜೀವನದ ಅಡಿಪಾಯಗಳಾಗಿರುತ್ತವೆ ಹಾಗೂ ಅವರಿಗೆ ಭವಿಷ್ಯ ರೂಪಿಸುವ ಕೇಂದ್ರಗಳಾಗಿವೆ. ಇದೂವರೆಗೆ ಜಿಲ್ಲೆಯಲ್ಲಿ 313 ಬಾಲಕಿಯರ ಬಾಲ್ಯವಿವಾಹವನ್ನು ತಪ್ಪಿಸಲಾಗಿದೆ ಎಂದರು.
ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ ಡಾ ಅಂಬೇಡ್ಕರ್ ಅವರು ನೀಡಿದ ಸೌಲಭ್ಯವನ್ನು ಸಮರ್ಪಕವಾಗಿ ಜನಸಾಮಾನ್ಯರಿಗೆ ತಲುಪಿಸಿದ ಕೀರ್ತಿ ಕರ್ನಾಟಕ ರತ್ನ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಲ್ಲಬೇಕು. ಅಂಬೇಡ್ಕರ್ ಅವರ ರಥವನ್ನು ಖರ್ಗೆ ಮುಂದೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದರು.
ಕಲಬುರಗಿ ರೊಟ್ಟಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ನಗರದಲ್ಲಿ ಕ್ರೀಡಾಂಗಣಗಳು ಸೇರಿದಂತೆ ಪ್ರಮುಖ ಮೂಲಭೂತ ಸೌಲಭ್ಯಗಳನ್ನು ಕಟ್ಟುನಿಟ್ಟಾಗಿ ಒದಗಿಸಿದ್ದಾರೆ. ಜಿಲ್ಲೆಯಲ್ಲಿ ಮೃಗಾಲಯ ಸ್ಥಾಪನೆ ಮಾಡಿದ್ದಾರೆ ಎಂದು ಸಚಿವರನ್ನು ಕೊಂಡಾಡಿದರು.
ಜನರ ಪರವಾಗಿ ನಿರಂತರವಾಗಿ ಕೆಲಸ ಮಾಡುವ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಹೊಸ ಹೊಸ ಯೋಜನೆಗಳನ್ನು ಜಿಲ್ಲೆಗೆ ತಂದಿದ್ದಾರೆ. ಆರ್ಟಿಕಲ್ 371( ಜೆ) ಜಾರಿಗೆ ತಂದು ಈ ಭಾಗದ ಬಡವರ, ದಲಿತರ ಮಕ್ಕಳು ವೈದ್ಯರಾಗಿದ್ದಾರೆ. ಅವರ ಸಮಾಜ ಸೇವೆಯನ್ನು ಪರಿಗಣಿಸಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಿದ ಕಮಕನೂರು, ಖರ್ಗೆ ಮನೆತನದಲ್ಲಿ ಯಾರಾದರೊಬ್ಬರು ಈ ರಾಜ್ಯದ ಮುಖ್ಯಮಂತ್ರಿ ಆಗಲಿ ಎಂದು ಆಶಿಸಿದರು.ಜಿಲ್ಲೆಯಲ್ಲಿ ಒಟ್ಟು 1036 ಅಂಗನವಾಡಿ ಕಾರ್ಯಕರ್ತೆಯರಾಗಿ ಹಾಗೂ ಅಂಗನವಾಡಿ ಸಹಾಯಕರಾಗಿ ನೇಮಕವಾದವರಿಗೆ ನೇಮಕಾತಿ ಆದೇಶ ಪತ್ರವನ್ನ ಸಚಿವರು ಇದೇ ಸಂದರ್ಭದಲ್ಲಿ ವಿತರಿಸಿದರು.ಕಲಬುರಗಿ ನೆಕ್ಟ್ಸ್ ಫೌಂಡೇಶನ್ ಟ್ರಸ್ಟ್ ಗೆ ಆರು ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಅಂಕುಶ್ ಬಿ.ಶಹಾ ಅವರು ಸಚಿವರಿಗೆ ಹಸ್ತಾಂತರಿಸಿದರು.
ವೇದಿಕೆಯ ಮೇಲೆ ಶಾಸಕರಾದ ಅಲ್ಲಮಪ್ರಭು ಪಾಟೀಲ, ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು ಹಾಗೂ ಜಗದೇವ ಗುತ್ತೇದಾರ, ಮೇಯರ್ ವರ್ಷಾ ಜಾನೆ, ಪ್ರವಿಣ್ ಹರವಾಳ, ಮಜರ್ ಆಲಂ ಖಾನ್, ಮಹೇಬೂಬ್ ಮಹೆಬೂಬ್ ಚಿಸ್ತಿ ಸಾಹೇಬ್, ಚಂದ್ರಿಕಾ ಪರಮೇಶ್ವರ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಸಿಇಒ ಭಂವರ್ ಸಿಂಗ್ ಮೀನಾ, ಅವಿನಾಶ ಶಿಂಧೆ, ಕಮೀಷನರ್ ಡಾ ಶರಣಪ್ಪ ಢಗೆ, ಎಸ್ ಪಿ ಅಡ್ಡೂರು ಶ್ರೀನಿವಾಸಲು, ಅರಣ್ಯ ಉಪ ಸಂರಕ್ಷಣಾಧಿಕಾರಿ ಸುಮೀತ್ ಪಾಟೀಲ್,ಡಿಸಿಪಿ ಶಾಲು, ಎ.ಸಿ. ಸಾಹಿತ್ಯ ಆಲದಕಟ್ಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ರಾಜಕುಮಾರ ರಾಠೋಡ ಸೇರಿದಂತೆ ಹಲವರಿದ್ದರು.




























