
ಸಂಜೆವಾಣಿ ವಾರ್ತೆ
ಬೀದರ್: ‘ನಾಡಿನ ಹಿರಿಯ ಸಾಹಿತಿಗಳು, ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಹಿತೈಷಿಗಳ ಒತ್ತಾಯದ ಮೇರೆಗೆ ಮುಂಬರುವ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಘೋಷಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ರವಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿರಿಯ ಸಾಹಿತಿ ಗೋ. ರು. ಚನ್ನಬಸಪ್ಪ ಸೇರಿದಂತೆ ಅನೇಕ ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರ ಪ್ರೀತಿಯ ಒತ್ತಾಯಕ್ಕೆ ಮಣಿದು ಚುನಾವಣಾ ಕಣಕ್ಕಿಳಿಯುತ್ತಿದ್ದೇನೆ. ಕನ್ನಡ ನಾಡು, ನುಡಿಯ ಸೇವೆಯೇ ನನ್ನ ಪ್ರಮುಖ ಉದ್ದೇಶ’ ಎಂದು ತಿಳಿಸಿದರು.
‘ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ರೂಪಿಸುವ ಆಶಯ ಹೊಂದಿದ್ದೇನೆ. ಪ್ರಸ್ತುತ ಸುಮಾರು ೪ ಲಕ್ಷ ಇರುವ ಪರಿಷತ್ತಿನ ಸದಸ್ಯತ್ವವನ್ನು ಒಂದು ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಯುವಕರು, ಮಹಿಳೆಯರು ಹಾಗೂ ಮಕ್ಕಳನ್ನು ಸಾಹಿತ್ಯ ಚಟುವಟಿಕೆಗಳತ್ತ ಆಕರ್ಷಿಸಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುವುದು’ ಎಂದರು.
‘ಪರಿಷತ್ತಿನ ವತಿಯಿಂದ ಪ್ರತಿ ತಿಂಗಳು ಸಾಹಿತ್ಯ ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಅಪ್ರಕಟಿತ ವಿದ್ವಾಂಸರ ಕೃತಿಗಳ ಪ್ರಕಟಣೆಗೆ ಆದ್ಯತೆ ನೀಡಲಾಗುವುದು. ಸಾಹಿತ್ಯದ ಮೂಲಕ ಸಾಮರಸ್ಯ, ನೈತಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.
ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ: ‘ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಮಾಧ್ಯಮದಲ್ಲಿ ಎದುರಿಸುವ ಅಭ್ಯರ್ಥಿಗಳಿಗೆ ಪರಿಷತ್ತಿನ ಮೂಲಕ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಕನ್ನಡ ಹೋರಾಟಗಾರರು, ಸಾಹಿತಿಗಳು ಹಾಗೂ ಸರ್ಕಾರದ ನಡುವೆ ಸಂಪರ್ಕ ಸೇತುವೆಯಾಗಿ ಪರಿಷತ್ತು ಕಾರ್ಯನಿರ್ವಹಿಸುವಂತೆ ಮಾಡಲಾಗುವುದು’ ಎಂದು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮೂಲದ ಸೋಮಶೇಖರ್ ಅವರು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದು, ಯುಪಿಎಸ್ಸಿ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆದು ಐಎಎಸ್ ಅಧಿಕಾರಿಯಾದ ತಮ್ಮ ಅನುಭವವನ್ನು ಹಂಚಿಕೊAಡರು.
‘೩೫ ವರ್ಷಗಳ ಆಡಳಿತ ಸೇವೆಯಲ್ಲಿ ತುಮಕೂರು ಜಿಲ್ಲಾಧಿಕಾರಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ಎರಡೂವರೆ ವರ್ಷ ಸೇವೆ ಸಲ್ಲಿಸಿದ್ದೇನೆ’ ಎಂದರು.
ಬೀದರ್ಗೆ ?೨ ಕೋಟಿ ಅನುದಾನ: ‘ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಬೀದರ್ನ ಕನ್ನಡ ಭವನಕ್ಕೆ ?೨ ಕೋಟಿ ಹಾಗೂ ಕರ್ನಾಟಕ ಸಾಹಿತ್ಯ ಸಂಘಕ್ಕೆ ?೫೦ ಲಕ್ಷ ಅನುದಾನ ಮಂಜೂರು ಮಾಡಲಾಗಿದೆ. ಗಡಿಭಾಗದ ೬೦೦ಕ್ಕೂ ಹೆಚ್ಚು ಸಂಘ-ಸAಸ್ಥೆಗಳಿಗೆ ಕನ್ನಡ ಚಟುವಟಿಕೆಗಳಿಗಾಗಿ ಅನುದಾನ ಒದಗಿಸಲಾಗಿದೆ. ಶಾಲೆಗಳಿಗೆ ಡೆಸ್ಕ್, ಕಂಪ್ಯೂಟರ್ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.
‘ಗಡಿಭಾಗದ ಸಾಧಕರನ್ನು ಗುರುತಿಸಲು ಗಡಿನಾಡ ಚೇತನ ಪ್ರಶಸ್ತಿ ಸ್ಥಾಪಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ವಾಯತ್ತ, ಕ್ರಿಯಾಶೀಲ ಹಾಗೂ ಜನಪರ ಸಂಸ್ಥೆಯನ್ನಾಗಿ ರೂಪಿಸುವ ಸಂಕಲ್ಪ ಹೊಂದಿದ್ದೇನೆ. ಸರ್ಕಾರಿ ಸೇವೆಯಿಂದ ನಿವೃತ್ತನಾಗಿದ್ದರೂ ಕನ್ನಡದ ಕೆಲಸದಿಂದ ನಿವೃತ್ತನಾಗುವುದಿಲ್ಲ. ಪ್ರವೃತ್ತಿಗೆ ನಿವೃತ್ತಿ ಇಲ್ಲ’ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ವಿದ್ವಾಂಸ ಹುಲಿಕಲ್ ನಟರಾಜ, ಪ್ರೊ.ಜಗನ್ನಾಥ ಹೆಬ್ಬಾಳೆ, ಗುರುನಾಥ ಕೊಳ್ಳೂರ್, ದಾನಿ ಬಾಬುರಾವ, ವಿಜಯಲಕ್ಷ್ಮಿ, ಕೌಟಗೆ, ಸುನಿತಾ ದಾಡಗೆ, ಮಲ್ಲಮ್ಮ ಪಾಟೀಲ, ಪಾರ್ವತಿ ಸೋನಾರೆ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದು, ಸೋಮಶೇಖರ್ ಅವರ ಸ್ಪರ್ಧೆಗೆ ಬೆಂಬಲ ವ್ಯಕ್ತಪಡಿಸಿದರು.


























