Home ಜಿಲ್ಲೆ ‘ಗೋ ಮಾತಾ ರಾಷ್ಟ್ರ ಮಾತಾ’ ಅಭಿಯಾನ: ಬೀದರ್ ಜಿಲ್ಲೆಯಿಂದ ೧೦ ಲಕ್ಷ ಸಹಿ ಸಂಗ್ರಹದ ಗುರಿ

‘ಗೋ ಮಾತಾ ರಾಷ್ಟ್ರ ಮಾತಾ’ ಅಭಿಯಾನ: ಬೀದರ್ ಜಿಲ್ಲೆಯಿಂದ ೧೦ ಲಕ್ಷ ಸಹಿ ಸಂಗ್ರಹದ ಗುರಿ

ಬೀದರ: ಗೋ ಮಾತೆಯನ್ನು ರಾಷ್ಟ್ರಮಾತೆಯಾಗಿ ಘೋಷಿಸುವಂತೆ ಒತ್ತಾಯಿಸಿ ದೇಶದಾದ್ಯಂತ ನಡೆಯುತ್ತಿರುವ ‘ಗೋ ಮಾತಾ ರಾಷ್ಟ್ರ ಮಾತಾ’ ಅಭಿಯಾನದ ಅಂಗವಾಗಿ ಬೀದರ್ ಜಿಲ್ಲೆಯಲ್ಲಿ ೧೦ ಲಕ್ಷ ಸಹಿಗಳನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಸಂಯೋಜಕ ವೆಂಕಟೇಶ ಶಾಲಿ ಚಿದ್ರಿ ತಿಳಿಸಿದರು.

ನಗರದ ಸರಸ್ವತಿ ಶಾಲೆಯಲ್ಲಿ ಸೋಮವಾರ ಸಂಜೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಡಿಸೆಂಬರ್ ೧೭ರಂದು ದೇಶದಾದ್ಯಂತ ನಡೆಯಲಿರುವ ಸಹಿ ಸಂಗ್ರಹ ಅಭಿಯಾನದ ಕುರಿತು ಮಾಹಿತಿ ನೀಡಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಈ ಅಭಿಯಾನದ ಮೂಲಕ ಜನರ ಮನವಿಯನ್ನು ತಲುಪಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಗೋ ಮಾತಾ ರಾಷ್ಟ್ರ ಮಾತಾ ಅಭಿಯಾನದ ಕರ್ನಾಟಕ ರಾಜ್ಯ ಉಸ್ತುವಾರಿ ರವೀಂದ್ರಾನAದ ಸರಸ್ವತಿ ಮಹಾರಾಜ್ (ರಾಜಸ್ಥಾನ) ಅವರ ಆಹ್ವಾನದ ಮೇರೆಗೆ ಅಭಿಯಾನವನ್ನು ರಾಜ್ಯಾದ್ಯಂತ ವ್ಯಾಪಕವಾಗಿ ನಡೆಸಲಾಗುತ್ತಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಹಿಂದಿನ ಹಂತದಲ್ಲಿ ಬೀದರ್ ಜಿಲ್ಲೆಯಿಂದ ಒಂದು ಲಕ್ಷಕ್ಕೂ ಅಧಿಕ ಸಹಿಗಳನ್ನು ಸಂಗ್ರಹಿಸಲಾಗಿತ್ತು. ಜುಲೈ ತಿಂಗಳಲ್ಲಿ ಸುಮಾರು ೩.೫೦ ಲಕ್ಷ ಸಹಿಗಳು ಸಂಗ್ರಹವಾಗಿದ್ದು, ಮುಂದಿನ ಹಂತದಲ್ಲಿ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸಹಿಗಳನ್ನು ಸಂಗ್ರಹಿಸಿ ಜಿಲ್ಲೆಯಿಂದ ಒಟ್ಟು ೧೦ ಲಕ್ಷ ಸಹಿಗಳ ಗುರಿ ಸಾಧಿಸಬೇಕು ಎಂದು ಮುಖಂಡರು ಕರೆ ನೀಡಿದರು.

ಗೋ ಮಾತೆಯ ಸಂರಕ್ಷಣೆ ಹಾಗೂ ಗೋಮಾತೆಯನ್ನು ರಾಷ್ಟ್ರಮಾತೆಯಾಗಿ ಘೋಷಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಿಂದೂ ಸಮಾಜ ಒಗ್ಗೂಡಿ ಅಭಿಯಾನದಲ್ಲಿ ಭಾಗವಹಿಸಬೇಕು ಎಂದು ಗೋಳವಾನಂದ ಸರಸ್ವತಿ ಮಹಾರಾಜ್, ರಾಮಕೃಷ್ಣ ಶಾಲೆಯ ಸಿ.ಬಿ. ರೆಡ್ಡಿ, ಧನರಾಜ ಪಾಂಡ್ರೆ ಸೇರಿದಂತೆ ಪ್ರಮುಖರು ಮನವಿ ಮಾಡಿದರು.