
ಯಾದಗಿರಿ: ಮಹಾತ್ಮ ಗಾಂಧೀಜಿ ಅವರು ದೇಶದ ಅಸಂಖ್ಯಾತ ಜನರನ್ನು ಒಗ್ಗೂಡಿಸಿ ಸ್ವಾತಂತ್ರ್ಯ ಚಳವಳಿ ನಡೆಸುವ ಮೂಲಕ ಭಾರತವನ್ನು ಸ್ವತಂತ್ರಗೊಳಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಅಗ್ರಗಣ್ಯ ನಾಯಕರಾಗಿದ್ದಾರೆ. ಅದೇ ರೀತಿ ಮೌಲ್ಯಾಧಾರಿತ ರಾಜಕಾರಣ ಹಾಗೂ ಸರಳ-ಪ್ರಾಮಾಣಿಕ ಜೀವನಕ್ಕೆ ಮಾದರಿಯಾಗಿದ್ದ ಪ್ರಧಾನಮಂತ್ರಿಗಳಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಪ್ರಮುಖರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಆವರಣದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜಯಂತಿ ಅಂಗವಾಗಿ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಇಬ್ಬರು ಮಹನೀಯರ ಜಯಂತಿಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಅವರ ಜೀವನದ ಆದರ್ಶಗಳು ಹಾಗೂ ಸಂದೇಶಗಳನ್ನು ಅಳವಡಿಸಿಕೊಂಡು ಅವರ ಹಾದಿಯಲ್ಲಿ ಕಿಂಚಿತ್ತಾದರೂ ನಡೆಯುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಮಹಾತ್ಮ ಗಾಂಧೀಜಿ ಅವರ ಅಹಿಂಸೆ, ಸತ್ಯಾಗ್ರಹ ಹಾಗೂ ಸ್ವಾತಂತ್ರ್ಯ ಚಳವಳಿಯಲ್ಲಿನ ಕೊಡುಗೆ, ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಸರಳತೆ, ಪ್ರಾಮಾಣಿಕತೆ ಹಾಗೂ ದೇಶಭಕ್ತಿಯ ಮೌಲ್ಯಗಳನ್ನು ಇಂದಿನ ಯುವಪೀಳಿಗೆ ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಾಹಿತಿ ಹಾಗೂ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರು, ಪ್ರಕಾಶ ಅಂಗಡಿ ಕನ್ನೆಳ್ಳಿ, ಮಹಾದೇವಪ್ಪಗೌಡ ಅಬ್ಬೆತುಮಕೂರು, ದೇವರಾಜ ನಾಯಕ, ವೀರಬಸವಂತ ಸೇರಿದಂತೆ ಹಲವರು ಉಪಸ್ಥಿತರಿದ್ದರು.






















