
ವಿಜಯಪುರ, ಸೆ. 21:ಗಣಪತಿ ಹೋದ ಮಾರನೇ ದಿನವೇ ಜೋಕುಮಾರನ ಆಗಮನ. ಉತ್ತರ ಕರ್ನಾಟಕದ ಗ್ರಾಮೀಣ ಬದುಕಿನಲ್ಲಿ ಮಳೆ-ಬೆಳೆ ಸಮೃದ್ಧಿಯ ಆಶಯ ಹೊತ್ತು ಬರುವ ಜೋಕುಮಾರನ ಹಬ್ಬ ಇಂದಿಗೂ ತನ್ನ ಸಾಂಸ್ಕøತಿಕ ವೈಶಿಷ್ಟ್ಯವನ್ನು ಉಳಿಸಿಕೊಂಡಿದೆ. ತಾಲೂಕಿನ ನಾಗಠಾಣ ಗ್ರಾಮದಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಈ ವಿಶಿಷ್ಟ ಆಚರಣೆ ಗ್ರಾಮೀಣ ಜಾನಪದ ಪರಂಪರೆಯ ಜೀವಂತಿಕೆಯ ಪ್ರತೀಕವಾಗಿದೆ.
‘ಅಡ್ಡಡ್ಡ ಮಳೆ ಬಂದು, ದೊಡ್ಡದೊಡ್ಡ ಕೆರೆ ತುಂಬಿ, ಗೊಡ್ಡುಗಳೆಲ್ಲ ಹೈನಾಗಿ, ಜೋಕುಮಾರ ಮಳೆ ತಂದ’ ಎಂಬ ಜಾನಪದ ಪದಗಳನ್ನು ಹಾಡುತ್ತ ಮಹಿಳೆಯರು ಮಳೆಗಾಗಿ ಜೋಕುಮಾರನನ್ನು ಪ್ರಾರ್ಥಿಸುತ್ತಾರೆ. ಜೋಕುಮಾರ ಮೂರ್ತಿಯನ್ನು ಏಳು ದಿನಗಳ ಕಾಲ ಗ್ರಾಮದಲ್ಲಿ ಮನೆ ಮನೆಗೆ ಹೊತ್ತುಕೊಂಡು ತೆರಳಿ, ಆತನ ಲೀಲೆಗಳನ್ನು ಹಾಡುವ ಮೂಲಕ ವಿಶಿಷ್ಟ ಸಂಪ್ರದಾಯವನ್ನು ಮುಂದುವರಿಸುತ್ತಿದ್ದಾರೆ.
ಗ್ರಾಮದ ಪಾರ್ವತಿ, ಸುಶೀಲಾ, ಮೀನಾಕ್ಷಿ ಹಾಗೂ ಬನ್ನೇವ್ವ ಅವರು ಹೆಡಿಗೆಯಲ್ಲಿ ಜೋಕುಮಾರನನ್ನು ಹೊತ್ತುಕೊಂಡು ಮನೆ ಮನೆಗೆ ತೆರಳಿ, ಬೆಣ್ಣೆ, ಎಣ್ಣೆ, ಉಪ್ಪು, ಹುಣಸೆಕಾಯಿ, ಜೋಳ, ಅಕ್ಕಿ ಸೇರಿದಂತೆ ವಿವಿಧ ಧಾನ್ಯಗಳನ್ನು ಸಂಗ್ರಹಿಸುತ್ತಾರೆ. ಮಹಿಳೆಯರು ಜಾನಪದ ಹಾಡುಗಳನ್ನು ರಾಗಬದ್ಧವಾಗಿ ಹಾಡುತ್ತ ಸಾಗುವ ದೃಶ್ಯ ಗ್ರಾಮೀಣ ಸಂಸ್ಕೃತಿಯ ಸೊಬಗನ್ನು ಅನಾವರಣಗೊಳಿಸುತ್ತದೆ. ಈ ಆಚರಣೆಯನ್ನು ಚಿಣ್ಣರು, ಯುವಕರು ಹಾಗೂ ರೈತರು ಆಸಕ್ತಿಯಿಂದ ವೀಕ್ಷಿಸಿ ಆನಂದಿಸುತ್ತಾರೆ.
ಜಾನಪದ ಹಾಡುಗಳಲ್ಲಿ ಜೋಕುಮಾರನ ಲೀಲೆ
ಅಗಲ ಮುಖ, ದೊಡ್ಡ ಕಣ್ಣುಗಳು, ಚೂಪಾದ ಹುರಿಮೀಸೆ, ತೆರೆದ ಬಾಯಿ, ಗಿಡ್ಡ ಕಾಲುಗಳು ಹಾಗೂ ಕೈಯಲ್ಲಿ ಸಣ್ಣ ಕತ್ತಿ ಹೊಂದಿರುವ ಮಣ್ಣಿನ ಜೋಕುಮಾರ ಮೂರ್ತಿಯನ್ನು ಬೇವಿನ ಸೊಪ್ಪಿನಿಂದ ಮುಚ್ಚಿ ಬಿದಿರಿನ ಬುಟ್ಟಿಯಲ್ಲಿ ಹೊತ್ತು ತರಲಾಗುತ್ತದೆ.
ಜೋಕುಮಾರನ ಹುಟ್ಟು, ಸಾವು, ಪುಂಡತನ, ಕಾಮ ಸೇರಿದಂತೆ ಆತನ ವಿವಿಧ ಸ್ವಭಾವಗಳನ್ನು ಬಿಂಬಿಸುವ ಜಾನಪದ ಹಾಡುಗಳನ್ನು ಮಹಿಳೆಯರು ಹಾಡುತ್ತಾರೆ. ಮನೆ ಮುಂದೆ ಜೋಕುಮಾರ ಬಂದಾಗ ಮನೆಯವರು ಮೆಣಸಿನಕಾಯಿ, ಉಪ್ಪು, ಜೋಳ ಹಾಗೂ ಇತರ ಆಹಾರ ಪದಾರ್ಥಗಳನ್ನು ಅರ್ಪಿಸಿ ಪೂಜಿಸುತ್ತಾರೆ. ಮನೆಯಲ್ಲಿರುವ ಚಿಕ್ಕಾಡ, ಗುಂಗಾಡ (ಸೊಳ್ಳೆ), ತಿಗಣೆಗಳೆಲ್ಲವೂ ಜೋಕುಮಾರನೊಂದಿಗೆ ಹೋಗಲಿ ಎಂಬ ನಂಬಿಕೆಯೂ ಈ ಆಚರಣೆಯಲ್ಲಿದೆ.
ಮಳೆಗಾಗಿ ಕಾಯುವ ರೈತಾಪಿ ಜನರು ಉತ್ತಮ ಮಳೆ ಸುರಿದು, ಕೆರೆ-ಕಟ್ಟೆಗಳು ತುಂಬಿ, ಸಮೃದ್ಧ ಬೆಳೆ ದೊರೆಯಲಿ ಎಂದು ಜೋಕುಮಾರನಲ್ಲಿ ಪ್ರಾರ್ಥಿಸುತ್ತಾರೆ. ಹೀಗೆ ಜಾನಪದ ಹಾಡು, ನಂಬಿಕೆ ಹಾಗೂ ಕೃಷಿ ಬದುಕಿನ ಆಶಯಗಳು ಒಂದಾಗಿ ಈ ಆಚರಣೆಯಲ್ಲಿ ಮಿಳಿತಗೊಂಡಿವೆ.
ಆಧುನಿಕತೆಯಲ್ಲೂ ಉಳಿದಿರುವ ಪರಂಪರೆ
“ಇಂದಿನ ಆಧುನಿಕ ಜೀವನಶೈಲಿಯಲ್ಲಿ ಹಬ್ಬಗಳ ಆಚರಣೆಯಲ್ಲಿನ ಶ್ರದ್ಧೆ ಕಡಿಮೆಯಾಗುತ್ತಿರುವುದು ವಿಷಾದಕರ. ಆದರೂ ಉತ್ತರ ಕರ್ನಾಟಕ ಭಾಗದಲ್ಲಿ ಜೋಕುಮಾರ ಹಬ್ಬ ವಿಶಿಷ್ಟ ಆಚರಣೆಯಾಗಿ ಇಂದಿಗೂ ಜೀವಂತವಾಗಿದೆ” ಎಂದು ಗ್ರಾಮದ ಶಿಕ್ಷಕ ಸಂತೋಷ ಬಂಡೆ ಹೇಳುತ್ತಾರೆ.
“ಕಲೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಆಧುನಿಕತೆಯ ನಡುವೆಯೂ ನಮ್ಮ ಗ್ರಾಮದಲ್ಲಿ ಉಳಿಸಿಕೊಂಡು, ಬೆಳೆಸಿಕೊಂಡು ಬರುತ್ತಿರುವುದು ವಿಶೇಷ” ಎಂದು ಗೃಹಿಣಿ ಭುವನೇಶ್ವರಿ ಬಂಡೆ ಅಭಿಪ್ರಾಯಪಡುತ್ತಾರೆ.
ಒಟ್ಟಿನಲ್ಲಿ, ನಾಗಠಾಣದಲ್ಲಿ ಜೋಕುಮಾರನ ಆರಾಧನೆಯ ಮೂಲಕ ತಲೆಮಾರುಗಳಿಂದ ಬಂದ ಜಾನಪದ ಪರಂಪರೆ ಮುಂದುವರಿದಿದ್ದು, ಗ್ರಾಮೀಣ ಸಂಸ್ಕೃತಿ ಹಾಗೂ ಕೃಷಿ ಬದುಕಿನ ನಡುವಿನ ಅವಿನಾಭಾವ ಸಂಬಂಧವನ್ನು ಸಾರುತ್ತಿದೆ.































