Home ಜಿಲ್ಲೆ ಬೆಂಗಳೂರು ಪತ್ರಕರ್ತರು ,ಕುಟುಂಬದವರಿಗೆ ಉಚಿತ ಆರೋಗ್ಯ ತಪಾಸಣೆ

ಪತ್ರಕರ್ತರು ,ಕುಟುಂಬದವರಿಗೆ ಉಚಿತ ಆರೋಗ್ಯ ತಪಾಸಣೆ

ಕೋಲಾರ,ಜು.೨- ಪತ್ರಕರ್ತರ ದಿನಾಚರಣೆ ಅಂಗವಾಗಿ ನಗರದ ಪತ್ರಕರ್ತರ ಭವನದಲ್ಲಿ ವಂಶೋದಯ ಆಸ್ಪತ್ರೆಯ ನೂತನ ಹಾರ್ಟ್ ಸೆಂಟರ್ ವತಿಯಿಂದ ಉಚಿತ ಹೃದಯ ತಪಾಸಣೆ ಶಿಬಿರವನ್ನು ಹಮ್ಮಿಕೊಂಡಿದ್ದು ಆಸ್ಪತ್ರೆಯ ನಿರ್ದೇಶಕ ಡಾ.ಅರವಿಂದ್ ಹಾಗೂ ಡಾ.ವಿನಯ್ ಅವರು ಚಾಲನೆ ನೀಡಿದರು. ಹಿರಿಯ ಕನ್ಸಲ್ಟೆಂಟ್ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ.ಯಶವಂತ್ ಎ .ಲಕ್ಷ್ಮಯ್ಯ ರವರು ೨೫೦ಕ್ಕೂ ಹೆಚ್ಚು ಪತ್ರಕರ್ತರು ಹಾಗೂ ಅವರ ಕುಟುಂಬದವರ ಆರೋಗ್ಯ ತಪಾಸಣೆ ನಡೆಸಿದರು.


ಈ ಸಂದರ್ಭದಲ್ಲಿ ಹಿರಿಯ ಕನ್ಸಲ್ಟೆಂಟ್ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ.ಯಶವಂತ್ ಎ .ಲಕ್ಷ್ಮಯ್ಯ ಮಾತನಾಡಿ ಇಂದು ಬದಲಾದ ಆಹಾರ ಪದ್ದತಿ ಹಾಗೂ ವ್ಯಾಯಾಮವಿಲ್ಲದ ಜೀವನದಿಂದ ಅನೇಕ ಆರೋಗ್ಯಸಮಸ್ಯೆಗಳು ಹತ್ತಿರವಾಗುತ್ತಿವೆ, ಈ ನಿಟ್ಟಿನಲ್ಲಿ ಪತ್ರಕರ್ತರು ಸಮಾಜಮುಖಿಯಾಗಿ ಕೆಲಸ ಮಾಡುವಾಗ ನೀವೂ ಆರೋಗ್ಯದಿಂದಿರಬೇಕು, ನಿಮಗಾಗಿ ನಿಮ್ಮ ಕುಟುಂಬವಿದೆ ಎಂಬುದನ್ನು ಅರಿತು ತಪಾಸಣೆ ಮಾಡಿಸಿಕೊಳ್ಳಿ ಮುಂಜಾಗ್ರತೆ ವಹಿಸಿ ಸಮಸ್ಯೆಯಿಂದ ಸುಲಭವಾಗಿ ಪಾರಗಬಹುದು. ವಶೋದಯ ಅಡ್ವಾನ್ಸ್ಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈಗ ನೂತನವಾಗಿ ಕಾರ್ಡಿಯಾಲಜಿ ವಿಭಾಗ ಪ್ರಾರಂಭವಾಗಿದ್ದು ಹೃದಯಕ್ಕೆ ಸಂಬ೦ಧಿಸಿದ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ೨೪*೭ ಕ್ಯಾಥ್ ಲ್ಯಾಬ್, ಆಂಜಿಯೋಗ್ರಾಮ್, ಆಂಜಿಯೋಗ್ರಫಿ ಸೇರಿದಂತೆ ಎಲ್ಲಾ ಹೃದಯ ಶಸ್ತ್ರ ಚಿಕಿತ್ಸೆಗಳು ಲಭ್ಯವಿರುತ್ತವೆ.


ಸಮಾಜಮುಖಿಯಾಗಿಯೂ ಉತ್ತಮ ಸೇವೆ ಸಲ್ಲಿಸುತ್ತಿರುವ ವಂಶೋದಯ ಆಸ್ಪತ್ರೆ , ಉಚಿತ ಆರೋಗ್ಯ ಶಿಬಿರಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ, ವಂಶೋದಯ ಆಸ್ಪತ್ರೆಯಲ್ಲಿ ನಿಮಗೆ ಎಲ್ಲಾ ರೀತಿಯ ಆಧುನಿಕ ಚಿಕಿತ್ಸಾ ವಿಧಾನ ಸೌಲಭ್ಯಗಳಿದ್ದು, ಇದರ ಪ್ರಯೋಜನ ಪಡೆಯಿರಿ ಎಂದ ಅವರು, ಉತ್ತಮ ಆರೋಗ್ಯವಿದ್ದರೆ ಮಾತ್ರ ಉತ್ತಮ ಮನಸ್ಥಿತಿ ಇರುತ್ತದೆ ಎಂಬ ಮಾತಿದೆ, ನಿಮ್ಮ ಕರ್ತವ್ಯ ನಿರ್ವಹಣೆಗೂ ಆರೋಗ್ಯ ರಕ್ಷಣೆ ಅತಿ ಮುಖ್ಯವಾಗಿದೆ ಎಂದರು.


ನ೦ತರ ಡಾ.ಅರವಿಂದ್ ಮಾತನಾಡಿ ಕೆಲಸದ ಒತ್ತಡದಲ್ಲಿರುವ ಪತ್ರಕರ್ತರು ಕಾಲಕಾಲಕ್ಕೆ ತಪಾಸಣೆಗೆ ಒಳಗಾಗುವ ಮೂಲಕ ರಕ್ತದೊತ್ತಡ, ಡಯಾಬಿಟೀಸ್‌ನಿಂದಾಗುವ ಆರೋಗ್ಯ ಸಮಸ್ಯೆಗಳಿಂದ ದೂರವಾಗಬೇಕು ಎಂದು ಸಲಹೆ ನೀಡಿದರು. ಅನೇಕರಿಗೆ ರಕ್ತದೊತ್ತಡ, ಡಯಾಬಿಟೀಸ್ ಇದ್ದರೂ ಅದರ ಅರಿವು ಇರುವುದಿಲ್ಲ ಮತ್ತು ತಪಾಸಣೆಗೆ ಒಳಗಾಗುವುದಿಲ್ಲ, ಇದು ಮುಂದೊ೦ದು ದಿನ ಮಾರಕ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ ಅವರು ಕಾಲಕಾಲಕ್ಕೆ ತಪಾಸಣೆಗೆ ಒಳಗಾಗುವ ಮೂಲಕ ಸೂಕ್ತ ಮುಂಜಾಗ್ರತೆ ಜೊತೆಗೆ ಆಹಾರ ಪದ್ದತಿಯಲ್ಲಿ ಬದಲಾವಣೆ ಮಾಡಿಕೊಂಡರೆ ಈ ಕಾಯಿಲೆಗಳನ್ನು ನಿಯಂತ್ರಣದಲ್ಲಿಡಬಹುದು ಎಂದರು.


ಶಿಬಿರದಲ್ಲಿ ೨೫೦ಕ್ಕೂ ಹೆಚ್ಚು ಪತ್ರಕರ್ತರು ಹಾಗು ಅವರ ಕುಟುಂಬದವರು ತಪಾಸಣೆಗೆ ಒಳಗಾಗಿದ್ದು, ಉಚಿತವಾಗಿ ಔಷಧಿ ವಿತರಿಸಲಾಯಿತು. ಹೆಚ್ಚಿನ ಚಿಕಿತ್ಸೆ ಇರುವ ಪತ್ರಕರ್ತರನ್ನು ಆಸ್ಪತ್ರೆಗೆ ಆಹ್ವಾನಿಸಲಾಯಿತು ಎಂದರು.


ಈ ಸಂದರ್ಭದಲ್ಲಿ ವಂಶೋದಯ ಆಸ್ಪತ್ರೆಯ ನಿರ್ದೇಶಕರಾದ ಡಾ.ಅರವಿಂದ್, ಡಾ.ವಿನಯ್, ಡಾ.ಯಶ್ವಂತ್, ಪಿ.ಆರ್.ಒ ಪವಿತ್ರ ಕೆ, ಮಾರ್ಕೆಟಿಂಗ್ ಸಿಬ್ಬಂದಿ ನವೀನ್, ನರೇಶ್ ಹಾಗೂ ನರ್ಸಿಂಗ್ ಸಿಬ್ಬಂದಿ ಹಾಜರಿದ್ದರು.