Home ಜಿಲ್ಲೆ ನರೇಗಾ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ನರೇಗಾ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಗುರುಮಠಕಲ್:ಜೂ.೧೭:ಪ್ರತಿಯೊಬ್ಬರು ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಯಲ್ಹೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಧಿಕಾರಿ ಜ್ಞಾನೇಶ್ವರ್ ಹೇಳಿದರು. ಜಿಲ್ಲಾ ಪಂಚಾಯಿತಿ ಯಾದಗಿರಿ, ತಾಲೂಕು ಪಂಚಾಯಿತಿ ಗುರುಮಠಕಲ್, ಹಾಗೂ ಪಸಪೂಲ ಗ್ರಾಮ ಪಂಚಾಯಿತಿ ಇವರ ಸಹಯೋಗದೊಂದಿಗೆ ಐಇಸಿ ಚಟುವಟಿಕೆಯಡಿ ಪಸಪೂಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಗೋಪಾಲಪುರ ಗ್ರಾಮದಲ್ಲಿ ಮಂಗಳವಾರ ಹಳ್ಳ ಹುಳೆತ್ತುವ ಕಾಮಗಾರಿ ಸ್ಥಳದಲ್ಲಿ ನರೇಗಾ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರು ಕಡ್ಡಾಯವಾಗಿ ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ, ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಆರಂಭದಲ್ಲಿಯೇ ರೋಗ ಹರಡುವುದನ್ನು ಪತ್ತೆ ಹೆಚ್ಚಿ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು. ಆಹಾರದಲ್ಲಿ ಉಪ್ಪು ಕಡಿಮೆ ಸೇವಿಸಿ, ಪದೇಪದೇ ಚಹಾ ಕುಡಿಯಬೇಡಿ. ಹಸಿಮೆಣಸಿನ ಕಾಯಿ ಖಾರದ ಪುಡಿಯನ್ನು ಅಧಿಕ ಸೇವಿಸುವುದರಿಂದ ಹೊಟ್ಟೆಯಲ್ಲಿ ಅಲ್ಸರ್ ಆಗುವ ಸಾಧ್ಯತೆ ಇರುತ್ತದೆ. ಅದಕ್ಕೆ ಮಿತವಾಗಿ ಆಹಾರ ಸೇವಿಸಿ ಮತ್ತು ಹೆಚ್ಚು ನೀರು ಕುಡಿಯಿರಿ ಎಂದು ಸಲಹೆ ನೀಡಿದರು. ಬಿಸಿಲಲ್ಲಿ ಕೆಲಸ ಮಾಡುವುದರಿಂದ ನಿತ್ಯ ೪ ರಿಂದ ೫ ಲೀಟರ್ ನೀರು ಸೇವಿಸಬೇಕು ಎಂದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ್ ಸಜ್ಜನ್ ಮಾತನಾಡಿ, ಕೂಲಿಕಾರರು ಆರೋಗ್ಯದಿಂದ್ದರೆ, ಕೆಲಸ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದರು. ಮಲೇರಿಯಾ, ಕೊಲೆಸ್ಟ್ರಾಲ್ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಮಂಡಿ ನೋವು ಹಾಗೂ ರಕ್ತಹೀನತೆ ತಪಾಸಣೆ ಮಾಡಲಾಯಿತು. ಈ ಕಾಯಿಲೆಗಳ ನ್ಯೂನತೆಯಿಂದ ಬಳಲುತ್ತಿರುವವರಿಗೆ ಮಾತ್ರೆಗಳು ಹಂಚಲಾಯಿತು. ಜೊತೆಗೆ ವಿಟಮಿನ್ಸ್ ಮಾತ್ರೆಗಳು ಮತ್ತು ಒ ಆರ್ ಎಸ್ ಪೌಡರ್ ಕೊಡಲಾಯಿತು. ಒಟ್ಟು ೭೧ ನರೇಗಾ ಕೂಲಿಕಾರರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಉಮಾಪತಿ ಹಿರೇಮಠ್, ಡಿ ಇಒ ಬಸವರಾಜ್ ಅಂಗಡಿ, ಐಇಸಿ ತಾಲೂಕು ಸಂಯೋಜಕ ರಾಘವೇಂದ್ರ, ಟಿಎಇ ವಿಜಯ್ ಪತ್ತಾರ್, ಬಿ ಎಫ್ ಟಿ ಬಸಲಿಂಗಪ್ಪ, ಆರೋಗ್ಯ ಇಲಾಖೆಯ ಸಿ ಹೆಚ್ ಓ ಕೃನಾಲ್ ಕುಮಾರ್, ಎ???ಓ ಶರಣು, ಪಿಎಚ್ ಸಿಓ ಮಂಜುಳಾ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು, ಕಾಯಕ ಬಂದುಗಳು ಹಾಗೂ ಕೂಲಿಕಾರರು ಇದ್ದರು