Home ಜಿಲ್ಲೆ ಬೆಂಗಳೂರು ರೈತರ ಮೇಲೆ ಅರಣ್ಯ ಇಲಾಖೆ ದಬ್ಬಾಳಿಕೆ-ಡಿಎಫ್‌ಒ ಅಮಾನತಿಗೆ ಒತ್ತಾಯ

ರೈತರ ಮೇಲೆ ಅರಣ್ಯ ಇಲಾಖೆ ದಬ್ಬಾಳಿಕೆ-ಡಿಎಫ್‌ಒ ಅಮಾನತಿಗೆ ಒತ್ತಾಯ

ಕೋಲಾರ,ಸೆ,೮- ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರೈತರ ಭೂಮಿಯನ್ನು ಮರುವಶ ಪಡೆಯಲು ಆದೇಶ ಹೊರಡಿಸಿ ವಾಟ್ಸಫ್ ಸಂದೇಶದ ಮೂಲಕ ಭಯಭೀತಗೊಳಿಸಲು ಯತ್ನಿಸಿರುವ ಜಿಲ್ಲಾ ಉಪ ಅರಣ್ಯಾಧಿಕಾರಿ ಸಕ್ರೀನ ಸಿಕ್ಕಲೀಗಾರ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಅಮಾನತು ಮಾಡಬೇಕೆಂದು ಆಗ್ರಹಿಸಿ ನಗರದ ಉಪ ಅರಣ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.


ಈ ವೇಳೆ ಕೋಮುಲ್ ನಿರ್ದೇಶಕ ಕೆ.ಕೆ.ಮಂಜು ಮಾತನಾಡಿ, ಶ್ರೀನಿವಾಸಪುರ ತಾಲೂಕಿನ ಕೇತಗಾನಹಳ್ಳಿ ರೈತರ ಜಮೀನನ್ನು ಅರಣ್ಯ ಅಧಿಕಾರಿಗಳು ಮರುವಶ ಪಡೆದುಕೊಳ್ಳಲು ಡಿಎಫ್‌ಓ ಆದೇಶಿಸಿರುವ ವಿರುದ್ಧ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಆಯ ಕಾಲಾನುಸಾರ ನ್ಯಾಯಾಲಯ ಆದೇಶಗಳನ್ನು ಧಿಕ್ಕರಿಸಿರುವ ಈ ಅಧಿಕಾರಿ ವರ್ತನೆ ಖಂಡನೀಯ ಎಂದು ತಿಳಿಸಿ, ಕಂದಾಯ ಇಲಾಖೆಯವರೇ ಸಾಗುವಳಿ ಚೀಟಿ ನೀಡಿದ್ದು ಆ ಭೂಮಿಯಲ್ಲಿ ಬೆಳೆ ಬೆಳೆಯುತ್ತಿದ್ದೇವೆ. ಅರಣ್ಯಕ್ಕೆ ಸೇರಿದ್ದು ಎಂದು ಅಧಿಕಾರಿಗಳು ರೈತರ ಮೇಲೆ ದೌರ್ಜನ್ಯ ನಡೆಸಿ ಬಂದೂಕು ತೋರಿಸಿ ಪ್ರಾಣ ಬೆದರಿಕೆ ಮಾಡುತ್ತಿದ್ದು ತಕ್ಷಣ ಡಿಎಫ್‌ಓ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.


ಜಿಲ್ಲಾ ಕಾಂಗ್ರೆಸ್ ಎಸ್ಟಿ ಘಟಕದ ಅಧ್ಯಕ್ಷ ಅಂಬರೀಷ್, ಮಾತನಾಡಿ, ಶ್ರೀನಿವಾಸಪುರ ತಾಲೂಕಿನಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ಹೆಸರಿನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಶಸ್ತ್ರಾಸ್ತ್ರಗಳೊಂದಿಗೆ ನಿಯೋಜಿಸುವಂತೆ ಸೂಚಿಸಿರುವುದಾಗಿ ಹೇಳಲಾದ ವಾಟ್ಸಾಪ್ ಸಂದೇಶದ ಕುರಿತು ಟೀಕಿಸಿದ ಅವರು ಇದೇನು ಪ್ರಜಾಪ್ರಭುತ್ವ ರಾಷ್ಟ್ರವಾ ಅಥವಾ ಸರ್ವಾಧಿಕಾರಿ ಆಡಳಿತವಾ ಎಂದು ಪ್ರಶ್ನಿಸಿದರು.


ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಮ್ಯಕಲ ನಾರಾಯಣಸ್ವಾಮಿ ಮಾತನಾಡಿ, ಅನೇಕ ಕಡೆ ಸರ್ಕಾರವೇ ಮಂಜೂರು ಮಾಡಿರುವ ಭೂಮಿಯಲ್ಲಿ ಗಿಡ ಮರ ಬೆಳೆಸಿರುವುದನ್ನು ದೌರ್ಜನ್ಯದಿಂದ ತೆರವು ಮಾಡಿ ಪರಿಸರ ದ್ರೋಹ ಎಸಗಿರುವ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಜಾಪ್ರಭುತ್ವ ಸರ್ಕಾರದ ಸೂಚನೆಗಳಿಗೆ ಬೆಲೆ ನೀಡದಷ್ಟು ಉದ್ದಟತನ ತೋರುತ್ತಿರುವುದು ಖಂಡನೀಯ ಎಂದರು.


ಅನ್ನ ನೀಡುವ ರೈತರನ್ನು ಅತ್ಯಂತ ತುಚ್ಚವಾಗಿ ಕಾಣುತ್ತಿರುವ ಅರಣ್ಯಾಧಿಕಾರಿಯ ಅಗತ್ಯತೆ ಕೋಲಾರ ಜಿಲ್ಲೆಗೆ ಇಲ್ಲ, ಇಂತಹವರನ್ನು ಅಮಾನತ್ ಮಾಡುವ ಮೂಲಕ ಸರ್ಕಾರ ರೈತರ ಹಿತ ರಕ್ಷಣೆ ಮಾಡಬೇಕು, ರಾಜ್ಯದಲ್ಲಿ ಇರುವುದು ಪ್ರಜಾಪ್ರಭುತ್ವ ಸರ್ಕಾರ ಎಂಬುದನ್ನೇ ಈ ಅಧಿಕಾರಿ ಮರೆತಿದ್ದಾರೆ ಎಂದು ಕಿಡಿಕಾರಿದರು.


ರೈತರ ಸಮಸ್ಯೆಗಳು ಮತ್ತು ಪರಿಸ್ಥಿತಿ ಕಂಡರೆ ಕಣ್ಣಲ್ಲಿ ನೀರು ಬರುತ್ತದೆ. ರೈತರನ್ನು ಬೀದಿಗೆ ತಳ್ಳಿದ ಅಧಿಕಾರಿಗಳ ವಿರುದ್ಧ ಅರಣ್ಯ ಅಧಿಕಾರಿಗಳೆ ಕ್ರಮ ಕೈಗೊಳ್ಳಬೇಕು. ಕೆಡಿಪಿ ಸಭೆಯಲ್ಲಿ ಮಂತ್ರಿಗಳೇ ಹೇಳಿದ್ದರು ಅದನ್ನೂ ಲೆಕ್ಕಿಸದೆ ಅಧಿಕಾರಿಗಳು ಗುಂಡಾವರ್ತನೆ ಮಾಡುತ್ತಿದ್ದಾರೆ. ರೈತರು ಸರ್ಕಾರದ ಭವಿಷ್ಯವನ್ನ ಬರೆಯುತ್ತಾರೆ, ಇವರಿಗೆ ಪ್ರಾಣ ಬೆದರಿಕೆ ಹಾಕುತ್ತಿರುವ ಡಿಎಫ್‌ಓ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.


ಪ್ರತಿಭಟನೆಯಲ್ಲಿ ಸಂಜಯ್ ರೆಡ್ಡಿ, ಕೇತಗಾನಹಳ್ಳಿ ನಾಗರಾಜ್, ಹರಟಿ ಪ್ರಕಾಶ್, ಪಾತಕೋಟ ನವೀನ್ ಕುಮಾರ್, ಡಿಎಸ್‌ಎಸ್ ಮುನಿಸ್ವಾಮಿ, ಶ್ರೀನಿವಾಸಪುರ ಮುನಿಯಪ್ಪ, ರಮೇಶ್‌ಬಾಬು ಸೇರಿದಂತೆ ರೈತ ಮುಖಂಡರು, ರೈತರು ವಿವಿಧ ಪಕ್ಷಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.