Home ಜಿಲ್ಲೆ ವೃಕ್ಷಥಾನ್ ಹೆರಿಟೇಜ್ ರನ್‌ಗೆ ಅರಣ್ಯ ಇಲಾಖೆ, ಪೌರ ಕಾರ್ಮಿಕರ ಜಾಗೃತಿ ಓಟ

ವೃಕ್ಷಥಾನ್ ಹೆರಿಟೇಜ್ ರನ್‌ಗೆ ಅರಣ್ಯ ಇಲಾಖೆ, ಪೌರ ಕಾರ್ಮಿಕರ ಜಾಗೃತಿ ಓಟ

ಸಂಜೆವಾಣಿ ವಾರ್ತೆ,
ವಿಜಯಪುರ, ಸೆ. ೨೧: ಪರಿಸರ ಸಂರಕ್ಷಣೆ, ಹಸಿರೀಕರಣ ಹಾಗೂ ಆರೋಗ್ಯದ ಮಹತ್ವ ಸಾರುವ ಉದ್ದೇಶದಿಂದ ಡಿ.೧೩ರಂದು ವಿಜಯಪುರದಲ್ಲಿ ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್‌ಗೆ ಪೂರ್ವಭಾವಿಯಾಗಿ ಭಾನುವಾರ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಂದ ವಿಶೇಷ ಜಾಗೃತಿ ಓಟ ನಡೆಯಿತು.
ನಗರದ ಗಗನ ಮಹಲ್ ಬಳಿ ಓಟಕ್ಕೆ ಚಾಲನೆ ನೀಡಿದ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಮಾತನಾಡಿ, ಸಚಿವ ಎಂ.ಬಿ. ಪಾಟೀಲ ಅವರ ನಿರಂತರ ಶ್ರಮದಿಂದ ವಿಜಯಪುರದ ಪರಿಸರದಲ್ಲಿ ಮಹತ್ವದ ಬದಲಾವಣೆಗಳಾಗುತ್ತಿವೆ. ಪಾಲಿಕೆ ಪೌರ ಕಾರ್ಮಿಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯೊAದಿಗೆ ಓಟದಲ್ಲಿ ಭಾಗವಹಿಸಿದ್ದು ಸಂತಸ ಮತ್ತು ತೃಪ್ತಿ ತಂದಿದೆ ಎಂದರು.
ಸಾಮಾಜಿಕ ಅರಣ್ಯ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರುದ್ರ ಕಬಾಡಗಿ ಮಾತನಾಡಿ, ಅರಣ್ಯವನ್ನು ಉಳಿಸಿ ಬೆಳೆಸುವಲ್ಲಿ ವೃಕ್ಷಥಾನ್ ಹೆರಿಟೇಜ್ ರನ್ ಮಹತ್ವದ ಪಾತ್ರ ವಹಿಸುತ್ತಿದೆ. ಎಲ್ಲ ವರ್ಗದ ಜನರು ಇದರಲ್ಲಿ ಭಾಗವಹಿಸುತ್ತಿರುವುದು ವಿಶೇಷ. ಓಟದ ಜತೆಗೆ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಸಚಿವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಇಂತಹ ಪರಿಸರ ಸ್ನೇಹಿ ಓಟದ ಆಯೋಜನೆ ವಿಶಿಷ್ಟವಾಗಿದೆ. ಡಿ.೧೩ರಂದು ನಡೆಯುವ ವೃಕ್ಷಥಾನ್ ಹೆರಿಟೇಜ್ ರನ್‌ನಲ್ಲಿ ಇಂದಿನ ಜಾಗೃತಿ ಓಟದಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ಕನಿಷ್ಠ ಹತ್ತು ಜನರನ್ನು ಕರೆತರುವಂತೆ ಮನವಿ ಮಾಡಿದರು.
ಮೇಯರ್ ಮಡಿವಾಳಪ್ಪ ಕರಡಿ ಮಾತನಾಡಿ, ಮುಂಜಾನೆ ಬೇಗ ಏಳುವುದರಿಂದ ಆಗುವ ಬದಲಾವಣೆಗಳನ್ನು ತಾವು ಸ್ವತಃ ಅರಿತಿದ್ದೇನೆ. ವೃಕ್ಷಥಾನ್ ಹೆರಿಟೇಜ್ ರನ್ ಹಿಂದೆ ಡಾ. ಮಹಾಂತೇಶ ಬಿರಾದಾರ ಅವರ ಶಿಸ್ತು ಮತ್ತು ಅವಿರತ ಶ್ರಮ ಎದ್ದು ಕಾಣುತ್ತದೆ. ಹಣವನ್ನು ನಂತರವೂ ಗಳಿಸಬಹುದು, ಆದರೆ ಮೊದಲು ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ ಎಂದು ಹೇಳಿದರು.
ವಿಜಯಪುರ ಸೈಕಲ್ ಗ್ರೂಪ್ ಅಧ್ಯಕ್ಷ ಡಾ. ಮಹಾಂತೇಶ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ, ವೃಕ್ಷಥಾನ್‌ನಲ್ಲಿ ಹೆಸರು ನೋಂದಾಯಿಸುವ ಪೌರ ಕಾರ್ಮಿಕರಿಗೆ ಉಚಿತ ನೋಂದಣಿ ವ್ಯವಸ್ಥೆ ಮಾಡಲಾಗುವುದು. ಅವರು ೫ ಮತ್ತು ೧೦ ಕಿ.ಮೀ. ಓಟದಲ್ಲಿ ಭಾಗವಹಿಸಬಹುದು. ‘ಸ್ವಚ್ಛ ವಿಜಯಪುರ, ಹಸಿರು ವಿಜಯಪುರ’ ಘೋಷವಾಕ್ಯದೊಂದಿಗೆ ಗಗನ ಮಹಲ್‌ನಿಂದ ಶಿವಾಜಿ ವೃತ್ತದವರೆಗೆ ೩ ಕಿ.ಮೀ. ಜಾಗೃತಿ ಓಟ ನಡೆಸಲಾಗಿದೆ ಎಂದು ತಿಳಿಸಿದರು.
ಜಗತ್ತಿನಲ್ಲಿ ಕೇವಲ ಶೇ.೨ರಷ್ಟು ಜನರು ಮಾತ್ರ ಓಡುವ ಅಭ್ಯಾಸ ಹೊಂದಿದ್ದಾರೆ. ವಿಜಯಪುರದ ಸುಮಾರು ಐದು ಲಕ್ಷ ಜನಸಂಖ್ಯೆಯಲ್ಲಿ ಐದಾರು ಸಾವಿರ ಜನ ಮಾತ್ರ ಓಟ, ನಡಿಗೆ ಹಾಗೂ ಮುಂಜಾನೆ ಬೇಗ ಏಳುವ ಅಭ್ಯಾಸ ಹೊಂದಿದ್ದಾರೆ. ಸೂರ್ಯೋದಯಕ್ಕೂ ಮುನ್ನ ಏಳುವವರ ಸಂಖ್ಯೆ ಹೆಚ್ಚಾಗಬೇಕು. ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಗಿಡಗಳನ್ನು ನೆಟ್ಟು, ಬೆಳೆಸಿ, ಪ್ರಕೃತಿಯನ್ನು ಉಳಿಸುವ ಉದ್ದೇಶ ವೃಕ್ಷಥಾನ್‌ನಲ್ಲಿದೆ ಎಂದರು.
ವೃಕ್ಷಥಾನ್‌ನಿAದ ಜನರಲ್ಲಿ ಗಿಡಗಳನ್ನು ಕಡಿಯಬಾರದು ಎಂಬ ಪರಿಸರ ಜಾಗೃತಿ ಮೂಡುತ್ತಿದೆ. ಮುಂದಿನ ದಿನಗಳಲ್ಲಿ ಜನರು ಪರಿಸರ ಸಂರಕ್ಷಣೆಯತ್ತ ಇನ್ನಷ್ಟು ಒಲವು ತೋರುವ ವಿಶ್ವಾಸವಿದೆ ಎಂದು ಹೇಳಿದರು.
ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಮಾತನಾಡಿ, ಉಸ್ತುವಾರಿ ಸಚಿವರ ಹಸಿರು ವಿಜಯಪುರದ ಕನಸು ನನಸಾಗುತ್ತಿದೆ. ನೀರಾವರಿಯೊಂದಿಗೆ ಹಸಿರೀಕರಣಕ್ಕೂ ಆದ್ಯತೆ ನೀಡಲಾಗುತ್ತಿದ್ದು, ಸಾರ್ವಜನಿಕರು ಗಿಡಗಳನ್ನು ನೆಟ್ಟು ಬೆಳೆಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿನಾಥ ಕುಸನಾಳ, ಎನ್.ಕೆ. ಬಾಗಾಯತ್, ಎಸಿಎಫ್‌ಗಳಾದ ಅನಂತಕುಮಾರ ಪಾಕೆ, ಸೆಲ್ವರಾಜ್ ನಾಯ್ಕರ್, ಶಿವಾನಂದ ಜಿಡ್ಡಿಮನಿ, ರಮೇಶ ಚವ್ಹಾಣ, ಸಹಾಯಕ ಅರಣ್ಯ ಅಧಿಕಾರಿಗಳು, ವಲಯ ಅರಣ್ಯ ಅಧಿಕಾರಿಗಳು, ಸಿಬ್ಬಂದಿ, ವಿಜಯಪುರ ಸೈಕಲ್ ಗ್ರೂಪ್ ಸದಸ್ಯರು ಹಾಗೂ ‘ನನ್ನ ಗಿಡ ನನ್ನ ಭೂಮಿ’ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.