Home ಜಿಲ್ಲೆ ಕಬ್ಬಿಗೆ ದರ ನಿಗದಿಪಡಿಸಿ, ರೈತರ ಹೊಲಗಳಿಗೆ ತಂತಿಬೇಲಿ ಅಳವಡಿಸಿ: ಆಮ್ ಆದ್ಮಿ ಪಕ್ಷ ಆಗ್ರಹ

ಕಬ್ಬಿಗೆ ದರ ನಿಗದಿಪಡಿಸಿ, ರೈತರ ಹೊಲಗಳಿಗೆ ತಂತಿಬೇಲಿ ಅಳವಡಿಸಿ: ಆಮ್ ಆದ್ಮಿ ಪಕ್ಷ ಆಗ್ರಹ

ಬೀದರ್: ಬೀದರ್ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಪ್ರತಿ ಟನ್ ಕಬ್ಬಿಗೆ ರೂ.೪,೦೦೦ ರಿಂದ ರೂ. ೪,೫೦೦ ದರ ನಿಗದಿಪಡಿಸಬೇಕು ಹಾಗೂ ಅರಣ್ಯ ಪ್ರದೇಶಗಳಿಂದ ಬರುವ ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆಗಳನ್ನು ರಕ್ಷಿಸಲು ರೈತರ ಹೊಲಗಳಿಗೆ ತಂತಿಬೇಲಿ ಅಳವಡಿಸಬೇಕು ಎಂದು ಇಂದು ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿವರೆಗೆ ಪ್ರತಿಭಟನೆ ನಡೆಸಿ ಆಮ್ ಆದ್ಮಿ ಪಕ್ಷದ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕಬ್ಬು ಬೆಳೆಗಾರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಉತ್ಪಾದನಾ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸೂಕ್ತ ಬೆಲೆ ನಿಗದಿಪಡಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು. ಪಂಜಾಬ್‌ನಲ್ಲಿ ಪ್ರತಿ ಟನ್‌ಗೆ ರೂ. ೪,೧೬೦ ದರ ನೀಡಲಾಗುತ್ತಿದೆ. ಅದೇ ರೀತಿ ಕರ್ನಾಟಕದಲ್ಲಿಯೂ ರೈತರಿಗೆ ನ್ಯಾಯಯುತ ದರ ನೀಡಬೇಕು ಎಂದು ಒತ್ತಾಯಿಸಿದರು.

ಬೀದರ್ ಜಿಲ್ಲೆಯ ಸುತ್ತಮುತ್ತ ಅರಣ್ಯ ಪ್ರದೇಶಗಳಿರುವುದರಿಂದ ಕಾಡುಪ್ರಾಣಿಗಳು ರೈತರ ಹೊಲಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸುತ್ತಿವೆ. ಇದರಿಂದ ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದು, ಸರ್ಕಾರ ತಕ್ಷಣವೇ ರೈತರ ಹೊಲಗಳಿಗೆ ತಂತಿಬೇಲಿ ಅಳವಡಿಸಲು ವಿಶೇಷ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸಿದ್ದು ಫೂಲಾರಿ, ಪ್ರಧಾನ ಕಾರ್ಯದರ್ಶಿ ಎಂಡಿ ಜಾವಿದ್, ನಗರ ಅಧ್ಯಕ್ಷ ರಾಜಶೇಖರ ಜಿ., ಜಿಲ್ಲಾ ಉಪಾಧ್ಯಕ್ಷ ರಾಜಕುಮಾರ ಎನ್. ಪಾಟೀಲ್, ನಂದಿ ಬಸವ ಪಾಟೀಲ್, ವೆಂಕಟೇಶ್ ಪಾಟೀಲ್, ಸೈಯದ್ ಜಮ್ಮಿಲ್, ಎಂಡಿ ಶರೀಫ್, ರಾಮು, ಓಂಕಾರ್, ವಿಠಲ್ ರಾವ್, ಮೋಹನ್ ಕುಮಾರ್, ಶಿವಕುಮಾರ್, ಕಂಠ್ಯಪ್ಪ ಗುಪ್ತ ಹಾಗೂ ಬಸವರಾಜ್ ಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.