Home ಕ್ರೈಂ ಸುದ್ದಿಗಳು ಕಬ್ಬು ಕಟಾವಿಗೆ ಹೋದ ತಂದೆ-ಮಗನ ಬರ್ಬರ ಹತ್ಯೆ!

ಕಬ್ಬು ಕಟಾವಿಗೆ ಹೋದ ತಂದೆ-ಮಗನ ಬರ್ಬರ ಹತ್ಯೆ!

ವಿಜಯಪುರ, ನ. 14: ಜಮೀನು ವಿವಾದದ ಕಿಚ್ಚು ಎರಡು ಜೀವಗಳನ್ನು ಬಲಿ ಪಡೆದಿದೆ. ಲಾವಣಿಗೆ ಪಡೆದ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಕಟಾವು ಮಾಡಲು ತೆರಳಿದ್ದ ತಂದೆ-ಮಗನ ಮೇಲೆ ಎದುರಾಳಿ ಗುಂಪು ಮಾರಕ ಹಲ್ಲೆ ನಡೆಸಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ತಡಲಗಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಇನ್ನಿಬ್ಬರು ಗಾಯಗೊಂಡಿದ್ದು, ಅವರನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ತಡಲಗಿ ಗ್ರಾಮದ ಹನುಮಂತ ಯಲ್ಲಪ್ಪ ಸಾಲವಾಡಗಿ (60) ಹಾಗೂ ಅವರ ಪುತ್ರ ಮಂಜುನಾಥ್ ಹನುಮಂತ ಸಾಲವಾಡಗಿ (30) ಕೊಲೆಯಾದ ದುರ್ದೈವಿಗಳು.

ಕಬ್ಬು ಕಟಾವಿಗೆ ಅಡ್ಡಿ, ಮಾತಿಗೆ ಮಾತು ಬೆಳೆದು ಮಾರಾಮಾರಿ!

ಗ್ರಾಮದ ಹನುಮವ್ವ ಮೇಟಿ ಎಂಬುವವರಿಗೆ ಸೇರಿದ ಸುಮಾರು 10 ಎಕರೆ ಜಮೀನನ್ನು ಸಾಲವಾಡಗಿ ಕುಟುಂಬದವರು ಲಾವಣಿಗೆ ಪಡೆದು, ಅದರಲ್ಲಿ ಕಬ್ಬು ಬೆಳೆದಿದ್ದರು. ಆದರೆ, ಈ ಜಮೀನಿನಲ್ಲಿ ನಮಗೂ ಪಾಲಿದೆ ಎಂದು ಹನುಮವ್ವ ಅವರ ಸಂಬಂಧಿಕರು ತಕರಾರು ತೆಗೆದಿದ್ದರು. ಅಲ್ಲದೆ, ಜಮೀನಿನಲ್ಲಿ ಬೆಳೆದ ಕಬ್ಬು ಕಟಾವು ಮಾಡದಂತೆ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಇಂದು ಸಾಲವಾಡಗಿ ಕುಟುಂಬದವರು ಬೆಳೆದ ಕಬ್ಬು ಕಟಾವು ಮಾಡಲು ಜಮೀನಿಗೆ ತೆರಳಿದಾಗ ಮತ್ತೆ ವಿವಾದ ಭುಗಿಲೆದ್ದಿದೆ. ಕಬ್ಬು ಕಟಾವು ಮಾಡದಂತೆ ಹನುಮವ್ವ ಅವರ ಸಂಬಂಧಿಕರು ತಡೆದಿದ್ದು, ಈ ವಿಚಾರವಾಗಿ ಎರಡೂ ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದಿದೆ. ನೋಡನೋಡುತ್ತಿದ್ದಂತೆಯೇ ವಾಗ್ವಾದ ವಿಕೋಪಕ್ಕೆ ತಿರುಗಿ ಎರಡು ಗುಂಪುಗಳ ನಡುವೆ ಭೀಕರ ಘರ್ಷಣೆ ಸಂಭವಿಸಿದೆ.
ಈ ವೇಳೆ ಕಲ್ಲು, ಕಟ್ಟಿಗೆ ಹಾಗೂ ಬಡಿಗೆಗಳಿಂದ ಪರಸ್ಪರ ಹಲ್ಲೆ ನಡೆದಿದ್ದು, ಸಾಲವಾಡಗಿ ಕುಟುಂಬದ ಹನುಮಂತ ಹಾಗೂ ಅವರ ಪುತ್ರ ಮಂಜುನಾಥ್ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ಇನ್ನಿಬ್ಬರು ಗಾಯಗೊಂಡಿದ್ದಾರೆ.

ಜಮೀನು ವಿವಾದಕ್ಕೆ ಎರಡು ಬಲಿ

ಒಂದು ಜಮೀನಿನ ಲಾವಣಿ ವಿಚಾರವಾಗಿ ಆರಂಭವಾದ ಕಲಹ ಕೊನೆಗೆ ತಂದೆ-ಮಗನ ಜೀವವನ್ನೇ ಬಲಿ ಪಡೆದಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಘಟನೆಯಿಂದ ತಡಲಗಿ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಕೊಲ್ಹಾರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣದ ಪೂರ್ಣ ವಿವರ ಹಾಗೂ ಹಲ್ಲೆಯಲ್ಲಿ ಭಾಗಿಯಾದವರ ಕುರಿತು ಪೆÇಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.