
ಬೆಂಗಳೂರು, ಜು.೧೫- ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಯ ಭವಿಷ್ಯ ಜುಲೈ ೧೭ರಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿರುವ ವಿಚಾರಣೆ ಬಳಿಕ ಸ್ಪಷ್ಟವಾಗುವ ಸಾಧ್ಯತೆಯಿದೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಆಗಸ್ಟ್ ೩೧ರೊಳಗೆ ಚುನಾವಣೆ ನಡೆಸುವ ಗಡುವನ್ನು ಡಿಸೆಂಬರ್ ೩೧ರವರೆಗೆ ವಿಸ್ತರಿಸುವಂತೆ ಕರ್ನಾಟಕ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಜುಲೈ ೧೭ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠದ ಮುಂದೆ ಜಿಬಿಎ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಿಚಾರಣೆಯನ್ನು ಪಟ್ಟಿಯಿಂದ ಕೈಬಿಡದಂತೆ ಮನವಿ ಮಾಡಿದ್ದು, ಪೀಠ ಅದಕ್ಕೆ ಸಮ್ಮತಿ ಸೂಚಿಸಿರುವುದರಿಂದ ಅಂದೇ ವಿಚಾರಣೆ ನಡೆಯುವ ಸಾಧ್ಯತೆ ಹೆಚ್ಚಿದೆ.
ಈ ಹಿಂದೆ ಯಾವುದೇ ಕಾರಣಕ್ಕೂ ಚುನಾವಣೆ ಮತ್ತಷ್ಟು ಮುಂದೂಡಲು ಅವಕಾಶ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸೂಚಿಸಿ, ಆಗಸ್ಟ್ ೩೧ರೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿತ್ತು. ಆದರೂ ಕರ್ನಾಟಕ ಸರ್ಕಾರ ಮತ್ತೊಮ್ಮೆ ಕಾಲಾವಕಾಶ ಕೋರಿ ಅರ್ಜಿ ಸಲ್ಲಿಸಿರುವುದು ಗಮನ ಸೆಳೆದಿದೆ.
ಇದೇ ವೇಳೆ, ಚುನಾವಣೆಯನ್ನು ನಿಗದಿತ ಅವಧಿಯಲ್ಲೇ ನಡೆಸುವಂತೆ ಕೋರಿ ಸಂಘ ಪರಿವಾರದ ಪರವಾಗಿ ಇಂಪ್ಲೀಡ್ ಅರ್ಜಿಯೂ ಸಲ್ಲಿಕೆಯಾಗಿದೆ. ಸರ್ಕಾರ ನೀಡಿರುವ ಕಾರಣಗಳನ್ನು ತಿರಸ್ಕರಿಸಿ ಆಗಸ್ಟ್ ೩೧ರೊಳಗೆ ಚುನಾವಣೆ ನಡೆಸಲು ಆದೇಶಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
ಸರ್ಕಾರದ ವಾದದ ಪ್ರಕಾರ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಿಬ್ಬಂದಿ ಮನೆಮನೆಗೆ ತೆರಳಿ ಮತದಾರರ ಪರಿಶೀಲನೆ ನಡೆಸುತ್ತಿರುವುದರಿಂದ ಚುನಾವಣೆಗೆ ಅಗತ್ಯವಿರುವ ಸಿಬ್ಬಂದಿಯನ್ನು ನಿಯೋಜಿಸುವುದು ಕಷ್ಟಕರವಾಗಿದೆ. ಬೆಂಗಳೂರಿನಲ್ಲಿ ಸುಮಾರು ೧.೦೩ ಕೋಟಿ ಮತದಾರರು ಹಾಗೂ ೪೦ ಲಕ್ಷ ಮನೆಗಳಿದ್ದು, ಐದು ನಗರ ಪಾಲಿಕೆಗಳ ಚುನಾವಣೆಗೆ ಭದ್ರತಾ ಸಿಬ್ಬಂದಿಯನ್ನು ಹೊರತುಪಡಿಸಿ ಸುಮಾರು ೬೦ ಸಾವಿರ ಸಿಬ್ಬಂದಿ ಅಗತ್ಯವಿದೆ ಎಂದು ಸರ್ಕಾರ ತಿಳಿಸಿದೆ.
ಜುಲೈ ೧೭ರಂದು ಸುಪ್ರೀಂ ಕೋರ್ಟ್ ನೀಡುವ ತೀರ್ಪಿನ ಆಧಾರದ ಮೇಲೆ ಜಿಬಿಎ ಚುನಾವಣೆ ಆಗಸ್ಟ್ ೩೧ರೊಳಗೆ ನಡೆಯಲಿದೆಯೇ ಅಥವಾ ಮುಂದೂಡಿಕೆಯಾಗಲಿದೆಯೇ ಎಂಬುದು ನಿರ್ಧಾರವಾಗಲಿದೆ.
ಮರು ವಿಭಜನೆ ಸಾಧ್ಯತೆ?
ಒಂದು ವೇಳೆ ಡಿಸೆಂಬರ್ ೩೧ರವರೆಗೆ ಕಾಲಾವಕಾಶ ನೀಡಿದರೆ, ಐದು ನಗರ ಪಾಲಿಕೆಗಳ ಬದಲಿಗೆ ಎರಡು ಅಥವಾ ಮೂರು ಪಾಲಿಕೆಗಳ ಮರುರಚನೆ ಕುರಿತು ಸರ್ಕಾರ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂಬ ಮಾಹಿತಿ ಬಿಜೆಪಿ ಮೂಲಗಳಿಂದ ಲಭ್ಯವಾಗಿದೆ. ಆದರೆ ಈ ಸಾಧ್ಯತೆಯ ಕುರಿತು ಸರ್ಕಾರದಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.


































