Home ಜಿಲ್ಲೆ ಸೆ.೯ರಂದು ಯಾದಗಿರಿಯಲ್ಲಿ ರೈತರ ಸಮಾವೇಶ

ಸೆ.೯ರಂದು ಯಾದಗಿರಿಯಲ್ಲಿ ರೈತರ ಸಮಾವೇಶ

ಯಾದಗಿರಿ: ರೈತರ ವಿವಿಧ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೆಪ್ಟೆಂಬರ್ ೯ರಂದು ನಗರದಲ್ಲಿ ರೈತ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಹೇಶಗೌಡ ಸುಭೇದಾರ್ ಕಾರ್ಯಕ್ರಮದ ವಿವರಗಳನ್ನು ನೀಡಿದರು.
ಶಾಸ್ತ್ರೀ ವೃತ್ತದಿಂದ ಸರ್ಕಾರಿ ಪದವಿ ಕಾಲೇಜಿನ ಸಭಾಂಗಣದವರೆಗೆ ಬೆಳಿಗ್ಗೆ ೧೦ಕ್ಕೆ ಟ್ರ‍್ಯಾಕ್ಟರ್ ಹಾಗೂ ಎತ್ತಿನಬಂಡಿಗಳ ಮೆರವಣಿಗೆ ನಡೆಯಲಿದೆ. ಬಳಿಕ ಸರ್ಕಾರಿ ಪದವಿ ಕಾಲೇಜಿನ ಸಭಾಂಗಣದಲ್ಲಿ ಸಮಾವೇಶ ನಡೆಯಲಿದ್ದು, ಸಂಘದ ವಿವಿಧ ಘಟಕಗಳಿಗೆ ನೇಮಕಗೊಂಡಿರುವ ಪದಾಧಿಕಾರಿಗಳ ಪದಗ್ರಹಣ ಹಾಗೂ ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ರೈತರು ಎದುರಿಸುತ್ತಿರುವ ಸಾಲದ ಹೊರೆ, ಬೆಳೆ ನಷ್ಟ, ವಿದ್ಯುತ್ ಸಮಸ್ಯೆ, ನೀರಾವರಿ, ಮಾರುಕಟ್ಟೆ ಹಾಗೂ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯದಿರುವುದು ಸೇರಿದಂತೆ ಹಲವು ವಿಷಯಗಳು ಸಮಾವೇಶದಲ್ಲಿ ಚರ್ಚೆಯಾಗಲಿವೆ. ರೈತರ ಅಹವಾಲುಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕೆ ಒತ್ತಾಯಿಸಲಾಗುವುದು ಎಂದರು.
ಅತಿವೃಷ್ಟಿ-ಅನಾವೃಷ್ಟಿಯಿAದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದ್ದು, ರೈತರು ಆರ್ಥಿಕವಾಗಿ ದುರ್ಬಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷಿ ಸಾಲ, ಟ್ರ‍್ಯಾಕ್ಟರ್ ಸಾಲ ಸೇರಿದಂತೆ ವಿವಿಧ ಸಾಲಗಳ ವಸೂಲಾತಿಗೆ ತಾತ್ಕಾಲಿಕ ತಡೆ ನೀಡಬೇಕು. ಸಾಲದ ಹೆಸರಿನಲ್ಲಿ ರೈತರಿಗೆ ನೋಟಿಸ್ ನೀಡುವುದು, ವಾಹನ ಜಪ್ತಿ ಮಾಡುವುದು ಹಾಗೂ ಪೊಲೀಸ್ ಪ್ರಕರಣ ದಾಖಲಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ರೈತರಿಗೆ ಸರ್ಕಾರದಿಂದ ಸಿಗುವ ಪರಿಹಾರ, ಪಿಂಚಣಿ, ಸಹಾಯಧನ ಹಾಗೂ ಇತರ ಯೋಜನೆಗಳ ಹಣವನ್ನು ಬ್ಯಾಂಕ್‌ಗಳು ಸಾಲದ ಖಾತೆಗೆ ಜಮೆ ಮಾಡಿಕೊಳ್ಳದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ಬರ ಪರಿಸ್ಥಿತಿಯನ್ನು ಪರಿಗಣಿಸಿ ಯಾದಗಿರಿಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ರೈತರ ಕೃಷಿ ಸಾಲ ಮನ್ನಾ ಮಾಡುವುದರ ಜತೆಗೆ ಬೆಳೆ ನಷ್ಟಕ್ಕೆ ಪ್ರತಿ ಎಕರೆಗೆ ?೫೦ ಸಾವಿರ ಪರಿಹಾರ ನೀಡಬೇಕು. ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಹೇಳಿದರು.
ಮೆಣಸಿನಕಾಯಿ ಬೆಳೆಯುವ ರೈತರಿಗೆ ಸ್ಥಳೀಯವಾಗಿ ಸೂಕ್ತ ಮಾರುಕಟ್ಟೆ ಸೌಲಭ್ಯ ಕಲ್ಪಿಸಬೇಕು. ಶಹಾಪುರ ಎಪಿಎಂಸಿಯಲ್ಲಿ ಮೆಣಸಿನಕಾಯಿ ಖರೀದಿ ಕೇಂದ್ರ ಆರಂಭಿಸುವುದರ ಜತೆಗೆ ಜಿಲ್ಲೆಯ ಎಪಿಎಂಸಿಗಳಲ್ಲಿ ಶೀತಲೀಕರಣ ಘಟಕಗಳನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ದೊರೆಯದಿರುವುದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಕನಿಷ್ಠ ೧೨ ಗಂಟೆ ನಿರಂತರ ವಿದ್ಯುತ್ ಪೂರೈಸುವ ವ್ಯವಸ್ಥೆ ಮಾಡಬೇಕು. ಪ್ರತಿ ತಾಲ್ಲೂಕಿನಲ್ಲಿ ಟ್ರಾನ್ಸ್ಫಾರ್ಮರ್ ದುರಸ್ತಿ ಕೇಂದ್ರ ಆರಂಭಿಸಿ, ಹಾಳಾದ ಪರಿವರ್ತಕಗಳನ್ನು ತ್ವರಿತವಾಗಿ ದುರಸ್ತಿ ಮಾಡಿ ರೈತರಿಗೆ ಒದಗಿಸಬೇಕು ಎಂದು ಆಗ್ರಹಿಸಿದರು.
ಅಲಮಟ್ಟಿ ಜಲಾಶಯದ ನೀರಿನ ಮಟ್ಟ ಹೆಚ್ಚಿಸುವ ಕಾಮಗಾರಿಗೆ ವೇಗ ನೀಡಬೇಕು. ಬಸವಸಾಗರ ಜಲಾಶಯದ ಕಾಲುವೆಗಳಿಗೆ ಸಮರ್ಪಕ ನೀರು ಹರಿಸುವ ಮೂಲಕ ನೀರಾವರಿ ಸೌಲಭ್ಯ ವಿಸ್ತರಿಸಬೇಕು ಎಂದು ಹೇಳಿದರು.
ಹೊತ್ತಿಗುಡೂರು ದಾಬಾದಿಂದ ದೇವದುರ್ಗ ಹಾಗೂ ಲಿಂಗಸುಗೂರುವರೆಗಿನ ರಸ್ತೆ ಹಲವು ಕಡೆ ಹದಗೆಟ್ಟಿದೆ. ಅಪಘಾತಗಳಿಗೆ ಕಾರಣವಾಗಿರುವ ರಸ್ತೆ ಹಾಗೂ ಸೇತುವೆಗಳ ಗುಂಡಿಗಳನ್ನು ತಕ್ಷಣ ಮುಚ್ಚಿ, ಅಗತ್ಯವಿರುವ ಕಡೆ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮುಂಗಾರು ಮತ್ತು ಹಿಂಗಾರು ಬಿತ್ತನೆಗೆ ಮುನ್ನ ಜಿಲ್ಲಾಡಳಿತ, ಕೃಷಿ ಇಲಾಖೆ, ರಸಗೊಬ್ಬರ ಪೂರೈಕೆದಾರರು ಹಾಗೂ ರೈತ ಮುಖಂಡರ ಸಭೆ ನಡೆಸಿ, ಬೀಜ, ಗೊಬ್ಬರ, ವಿದ್ಯುತ್, ಬೆಳೆ ಖರೀದಿ ಸೇರಿದಂತೆ ರೈತರ ಸಮಸ್ಯೆಗಳನ್ನು ಚರ್ಚಿಸಿ ಪರಿಹರಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ, ಗೌರವಾಧ್ಯಕ್ಷ ಶಶಿಕಾಂತ ಗುರೂಜಿ, ಉಪಾಧ್ಯಕ್ಷ ಶಾಂತರೆಡ್ಡಿಗೌಡ ಪ್ರೊ. ಪಾಟೀಲ, ಪ್ರಧಾನ ಸಂಚಾಲಕ ನಾಗಯ್ಯಸ್ವಾಮಿ ದೇಸಾಯಿ, ಜಿಲ್ಲಾಧ್ಯಕ್ಷ ವಿಜಯಕುಮಾರ ಮುಷ್ಟೂರು ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.