
ನಾಲತವಾಡ, ನ. 1: ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವುದು ಸೇರಿದಂತೆ ರೈತರ ವಿವಿಧ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಆಗ್ರಹಿಸಿ ವೀರೇಶನಗರ, ನಾಗಬೇನಾಳ ಹಾಗೂ ಆರೇಶಂಕರ ನಾಗಬೇನಾಳ ತಾಂಡಾದ ರೈತರು ವೀರೇಶನಗರದಲ್ಲಿ ಮುದ್ದೇಬಿಹಾಳ-ಲಿಂಗಸುಗೂರು ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಕಬ್ಬಿನ ಬೆಲೆ ನಿಗದಿಪಡಿಸುವಲ್ಲಿ ಸರ್ಕಾರ ವಿಳಂಬ ಮಾಡುತ್ತಿರುವುದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬೆಳೆ ಬೆಳೆಯಲು ರೈತರು ಮಾಡಿರುವ ಖರ್ಚು ಹಾಗೂ ಪಟ್ಟಿರುವ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬೇಕು. ಸರ್ಕಾರ ಕೂಡಲೇ ಕಬ್ಬಿನ ಬೆಲೆ ನಿಗದಿಪಡಿಸಿ ರೈತರ ಹಿತ ಕಾಪಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಮೌನೇಶ ನಾಗಬೇನಾಳ ಮಾತನಾಡಿ, ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ದೊರೆಯದಿದ್ದರೆ ಕೃಷಿಕರ ಬದುಕು ಸಂಕಷ್ಟಕ್ಕೆ ಸಿಲುಕಲಿದೆ. ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ತಕ್ಷಣ ಪರಿಹಾರ ಕಲ್ಪಿಸಬೇಕು. ರೈತರ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿರುವ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬು ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು. ಕಬ್ಬಿನ ಬೆಲೆ ನಿಗದಿಪಡಿಸುವಲ್ಲಿ ಇನ್ನೂ ವಿಳಂಬ ಮಾಡಿದರೆ ರೈತರು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ರೈತರ ರಸ್ತೆ ತಡೆ ಪ್ರತಿಭಟನೆಯಿಂದ ಮುದ್ದೇಬಿಹಾಳ-ಲಿಂಗಸುಗೂರು ಮುಖ್ಯರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಪ್ರತಿಭಟನೆಯಲ್ಲಿ ಶ್ರೀಕೃಷ್ಣ ಗಡ್ಡಿ, ಮಲ್ಲಪ್ಪ ಹಡಪದ, ರಮೇಶ ಗೌಂಡಿ, ದೊಡ್ಡಮುತ್ತಣ್ಣ ಪೂಜಾರಿ, ಹಣಮಂತ ಕಂಬಳಿ, ಬಸಪ್ಪ ಕೋಟಿ, ದಸ್ತಗೀರ ನಧಾಫ್, ಗದ್ದೆಪ್ಪ ಪೂಜಾರಿ, ಮುದಕಪ್ಪ ಕಂಬಳಿ, ಗಂಗಪ್ಪ ಹವಲ್ದಾರ, ಭೀಮಣ್ಣ ಗುರಿಕಾರ, ಗಂಗಪ್ಪ ಹಾದಿಮನಿ, ಈರಪ್ಪ ಸುಲ್ತನಾಪುರ, ಚಂದ್ರಶೇಖರ ಪತ್ತೇಪೂರ, ಶೇಖಪ್ಪ ನಧಾಫ್, ಈರಪ್ಪ ಕರಿಭಾವಿ ಸೇರಿದಂತೆ ಹಲವರು ಭಾಗವಹಿಸಿದ್ದರು.























