
ತಾಳಿಕೋಟಿ :ಜು.1: ತಾಲ್ಲೂಕಿನ ಮೂಕಿಹಾಳ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ರೈತರಿಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಸನ್ 2019-2026ರವರೆಗೆ ಬೆಳೆವಿಮೆ ತುಂಬಿದ ರೈತರಿಗೆ ವಿಮೆ ಹಣ ದೊರೆಯದಂತೆ ಅಧಿಕಾರಿಗಳು ವ್ಯವಸ್ಥಿತವಾಗಿ ವಂಚನೆ ಮಾಡಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ ಆರೋಪಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಮಂಗಳವಾರ ತಾಲ್ಲೂಕು ಮೂಕಿಹಾಳ ಗ್ರಾಪಂ ಸಮೀಪದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಸನ್ 2019-20-2020-21-2021-22 ಮುಂಗಾರು ಹಂಗಾಮು, 2022-23ರ ಹಿಂಗಾರು ಹಂಗಾಮು,2024-25ರಲ್ಲಿ ಹಿಂಗಾರು ಹಂಗಾಮಿನಲ್ಲಿ ರೈತರಿಗೆ ಬೆಳೆವಿಮೆ ಪರಿಹಾರ ಬಂದಿಲ್ಲವೆಂದು ಅಧಿಕಾರಿಗಳೇ ಮಾಹಿತಿ ನೀಡುತ್ತಿದ್ದಾರೆ.ಬೆಳೆವಿಮೆಗೆ ಕಂತು ಪಾವತಿಸಿದ ರೈತರ ಜಮೀನುಗಳಿಗೆ ಹೋಗಬೇಕಾದ ಅಧಿಕಾರಿಗಳು ಎಲ್ಲೋ ಕೂತು ಬೆಳೆ ಸರ್ವೆ ಮಾಡುತ್ತಾರೆ. ಇದರಲ್ಲಿ ದೊಡ್ಡ ವ್ಯವಸ್ಥಿತ ಮೋಸ ಅಡಗಿದೆ.ಗ್ರಾಮ ಪಂಚಾಯಿತಿಯ ನಾಲ್ವರು ಸಿಬ್ಬಂದಿಯೇ ರೈತನೊಬ್ಬನ ಜಮೀನಿಗೆ ಹೋಗಿ ಬೆಳೆ ಸಮೀಕ್ಷೆ ಮಾಡಿದ್ದಾಗಿ ತೋರಿಸುತ್ತಾರೆ.ಒಟ್ಟಾರೆ ಈ ಭಾಗದಲ್ಲಿ ಬೆಳೆವಿಮೆಯನ್ನು ರೈತರಿಗೆ ತಲುಪಿಸದೇ ವಂಚಿಸಲಾಗಿದೆ.ಅಧಿಕಾರಿಗಳಿಂದ ಸಮಗ್ರ ಮಾಹಿತಿ ತರಿಸಿಕೊಂಡು ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.
ಮೂಕಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಹುಹಳ್ಳಿ ಕುಡಿವ ನೀರಿನ ಯೋಜನೆ ಅಡಿ ಶಿವಪೂರ,ನಾಗೂರ,ಹರನಾಳ,ಹಡಗಿನಾಳ ಗ್ರಾಮಗಳಿಗೆ ಇವತ್ತಿಗೂ ಕುಡಿಯುವುದಕ್ಕೆ ನೀರು ಪೂರೈಕೆ ಆಗುತ್ತಿಲ್ಲ ಆರ್‍ಡಬ್ಲುಎಸ್ ಅಧಿಕಾರಿಗಳು ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಸಂಪೂರ್ಣ ಹಳ್ಳ ಹಿಡಿಯುವಂತೆ ಮಾಡಿದ್ದಾರೆ ಈ ಗ್ರಾಂಪಂ ಪ್ಯಾಪ್ತಿಯಲ್ಲಿ 10 ಶುದ್ದ ಕುಡಿಯುವ ನೀರಿನ ಘಟಕಗಳಿವೆ ಯಾವವು ಚ್ಯಾಲು ಇಲ್ಲಾ ಎಲ್ಲವೂ ಬಂದ್ ಬಿದ್ದು ತುಕ್ಕು ಹಿಡಿದು ಹೋಗಿವೆ ಶಾಂತಗೌಡ ನಡಹಳ್ಳಿ ಆರೋಪಿಸಿದರು ಇದಕ್ಕೆ ಸ್ವತಃ ಮೂಕಿಹಾಳ ಗ್ರಾಪಂ ಪಿಡಿಒ ಎಸ್.ಆಯ್.ಗುಂಡಣ್ಣವರು ಈಗಾಗಲೇ ಸಾಕಷ್ಟು ಸಲ ಆರ್.ಡಬ್ಲು ಎಸ್ ಅಧಿಕಾರಿಗಳು ಪತ್ರಮುಖೇನ ಮತ್ತು ಮೌಖಿಕವಾಗಿ ದೂರು ನೀಡಲಾಗಿದೆ ಯಾವು ಚ್ಯಾಲು ಇಲ್ಲಾವೆಂದು ಹೇಳಿದರು.
ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಅಧಿಕಾರಿಗಳು ರೈತರ ರಕ್ತ ಕುಡಿಯುವುದಕ್ಕೆ ಹುಟ್ಟಿದ್ದಾರೆಯೇ ಹೊರತು ಉದ್ಧಾರ ಮಾಡುವುದಕ್ಕಲ್ಲ. ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮದೊಂದೇ ಕ್ಷೇತ್ರಕ್ಕೆ ಸಿಮೀತವಾಗಿದ್ದಾರೆ. ಎಂಟು ಕ್ಷೇತ್ರದ ಶಾಸಕರು ರೈತರ ಸಮಸ್ಯೆ ಆಲಿಸುತ್ತಿಲ್ಲ. ನೀರಿಗಾಗಿ ಪ್ರತಿವರ್ಷ ಹೋರಾಟ ಮಾಡುವ ಪರಿಸ್ಥಿತಿ ಇದೆ. ಬಿಜೆಪಿ,ಕಾಂಗ್ರೆಸ್,ಜೆಡಿಎಸ್ ರೈತರನ್ನು ಮೂಲೆಗುಂಪು ಮಾಡುತ್ತಿವೆ.ಚಿಮ್ಮಲಗಿ ಏತ ನೀರಾವರಿ 20 ವರ್ಷವಾದರೂ ನೀರು ಹರಿಯುತ್ತಿಲ್ಲ.1500 ಕೋಟಿ ರೂ.ವೆಚ್ಚದ ಬೂದಿಹಾಳ ಪೀರಾಪೂರ ಯೋಜನೆ ಪೂರ್ಣಗೊಂಡಿಲ್ಲ ರೈತರೆಲ್ಲರೂ ಹೋರಾಟ ಮಾಡುತ್ತಿದ್ದ ಸಮಯದಲ್ಲಿ 200 ಕೋಟಿ ರೂ. ಜುಜಬಿ ಅದನ್ನು ಬಿಡುಗಡೆ ಮಾಡುತ್ತೇವೆಂದು ಹೇಳಿ 9 ತಿಂಗಳು ಕಳೆಯಲು ಬಂದರೂ ಕಾಮಗಾರಿ ಪ್ರಾರಂಭವಾಗಿಲ್ಲಾ ಹಣ ಕೊಡಿಸಲು ಉಸ್ತುವಾರಿ ಸಚಿವರಿಂದ ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬೆಳೆವಿಮೆಗೆ ಸಂಬಂಧಿಸಿದಂತೆ ವಿಜಯಪುರದ ಉಪ ಕೃಷಿ ನಿರ್ದೇಶಕ ಶರಣಗೌಡ ಆರ್ ರೈತರಿಗೆ ಮಾಹಿತಿ ನೀಡಿ, 2019 ರಿಂದ 2026ರವರೆಗೆ ಮೂರು ಬಾರಿ ರೈತರಿಗೆ ಬೆಳೆವಿಮೆ ಬಂದಿಲ್ಲ.ಇನ್ನುಳಿದ ಅವಧಿಗೆ ರೈತರಿಗೆ ವಿಮೆ ಪರಿಹಾರ ಹಣ ಜಮಾ ಆಗಿದೆ ಎಂದು ವಿವರಿಸಿದರು. ಒಂದು ಹಂತದಲ್ಲಿ ಕೃಷಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಯನ್ನು ರೈತ ಸಂಘಟನೆ ಪದಾಧಿಕಾರಿಗಳು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.
ಪಂಚಾಯಿತಿ ವ್ಯಾಪ್ತಿಯಲ್ಲಿ ಶಿವಪೂರ ಗ್ರಾಮದಲ್ಲಿ ಕಳ್ಳಬಟ್ಟಿ ಸಾರಾಯಿ ಮಾರಾಟದಿಂದ ಹತ್ತು ಜನರು ಅಸುನೀಗಿದ್ದಾರೆ.ಅಬಕಾರಿ ಇಲಾಖೆಯ ಅಧಿಕಾರಿಗಳು ಎಲ್ಲೆಂದರಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿರುವ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು.ಸರಕಾರಿ ಗೋಮಾಳ ಜಾಗೆಯ ಅತಿಕ್ರಮಣ ತೆರವುಗೊಳಿಸಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ಮನೆಗಳ ಹಂಚಿಕೆ ಪಾರದರ್ಶಕವಾಗಿ ನಡೆಯಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟಗಾರರು ಆಗ್ರಹಿಸಿದರು. ಹೋರಾಟಗಾರರ ಪ್ರಶ್ನೆಗಳಿಗೆ ಆಯಾ ಇಲಾಖೆಯ ಅಧಿಕಾರಿಗಳು ಉತ್ತರ ನೀಡಿದರಲ್ಲದೇ ಎಲ್ಲ ಸಮಸ್ಯೆ ಪರಿಹಾರಕ್ಕೆ ಒಂದು ತಿಂಗಳ ಕಾಲಾವಕಾಶ ಕೋರಿದರು.
ಹೋರಾಟದಲ್ಲಿ ರೈತ ಸಂಘದ ವೀರಪ್ಪ ಕುಳೆಕುಮಟಗಿ, ಶಿವಾನಂದಯ್ಯ ಹಿರೇಮಠ, ತಾಲೂಕಾಧ್ಯಕ್ಷ ಶ್ರೀಶೈಲ ವಾಲಿಕಾರ, ದೇವರಾಜ ಗುಂಡಕನಾಳ, ಮಹಿಬೂಬ ಅವಟಿ, ಉಮೇಶ ಮೊಕಾಳೆ, ಶಿವಾರಾಜ ಉಳ್ಳಾಗಡ್ಡಿ, ಮೂಕಿಹಾಳ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ರೈತ ಪ್ರಮುಖರಾದ ಮಲ್ಲಯ್ಯ ಹಿರೇಮಠ,ನಿಂಗಪ್ಪ ಕೆಂಭಾವಿ,ಸಂಗಣ್ಣ ಬಿರಾದಾರ,ಪಟೇಲ್ ಮೂಕಿಹಾಳ, ಬಸವರಾಜ ಪಾಟೀಲ ಬಳವಾಟ, ನಾಗೇಶ, ಶಿವರಾಜ ಗುಗ್ಗಳ್ಳಿ ಮೊದಲಾದವರು ಪಾಲ್ಗೊಂಡಿದ್ದರು.
ಮೂಕಿಹಾಳ ಕ್ರಾಸ್‍ದಿಂದ ಮೂಕಿಹಾಳ ದರ್ಗಾದವರೆಗೆ ಎತ್ತಿನ ಚಕ್ಕಡಿ ಹಾಗೂ ಪಾದಯಾತ್ರೆಯಲ್ಲಿ ಪಂಚಾಯಿತಿ ವ್ಯಾಪ್ತಿಯ ಏಳು ಗ್ರಾಮಗಳ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಅಧಿಕಾರಿಗಳ ಮನವಿಯ ಮೇರೆಗೆ ಪಂಚಾಯಿತಿಗೆ ಮುತ್ತಿಗೆ ಹಾಕುವುದನ್ನು ಕೊನೆಯ ಘಳಿಗೆಯಲ್ಲಿ ಹೋರಾಟಗಾರರು ಕೈ ಬಿಟ್ಟರು.
ಭಾರೀ ಪೊಲೀಸ್ ಭದ್ರತೆ: ರೈತರ ಬೃಹತ್ ಹೋರಾಟಕ್ಕೆ ಬ.ಬಾಗೇವಾಡಿ ಉಪ ವಿಭಾಗದ ಪೊಲೀಸ್ ಠಾಣೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಕರೆಯಿಸಲಾಗಿತ್ತು.ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ, ಸಿಪಿಐ ಮೊಹ್ಮದ ಫಸಿವುದ್ದೀನ, ಪಿಎಸ್‍ಐ ಜ್ಯೋತಿ ಖೋತ, ಯತೀಶ ಕೆ.ಎಸ್., ಅಶೋಕ ನಾಯಕ, ಎಫ್.ಎಸ್.ಇಂಡೀಕರ್ ಸೇರಿದಂತೆ ಆಲಮಟ್ಟಿ, ನಿಡಗುಂದಿ, ತಾಳಿಕೋಟಿ, ಮುದ್ದೇಬಿಹಾಳ, ಕೊಲ್ಹಾರ, ಕೂಡಗಿ ಪೊಲೀಸ್ ಠಾಣೆಯ ಸಿಬ್ಬಂದಿ ಬಿಗಿ ಭದ್ರತೆ ವಹಿಸಿದ್ದರು.
ಅಧಿಕಾರಿಗಳ ತಂಡ ಪ್ರತ್ಯಕ್ಷ: ರೈತರ ಹೋರಾಟ ವೇದಿಕೆಗೆ ತಹಶೀಲ್ದಾರ್ ವಿನಯಾ ಹೂಗಾರ,ತಾಪಂ ಇಒ ಅನಸೂಯಾ ಚಲವಾದಿ, ವಿವಿಧ ಇಲಾಖೆಯ ಅಧಿಕಾರಿಗಳಾದ ಚಂದ್ರಕಾಂತ ಕುಂಬಾರ,ಎಸ್.ಎಸ್.ಕೋಟೆಣ್ಣವರ,ರಮೇಶ ಕೋಲಾರ, ಆರ್.ಎಸ್.ಹಿರೇಗೌಡರ,ಜ್ಞಾನೇಶ ಮುರಾಳ, ಮಹೇಶ ಜೋಷಿ, ವಿಜಯಕುಮಾರ ಬಿರಾದಾರ,ಎಸ್.ಡಿ.ಭಾವಿಕಟ್ಟಿ, ಗಿರೀಶ ಅಲಕುಡೆ,ಲಕ್ಷ್ಣಣ ಸಂಗೋಗಿ ಮೊದಲಾದವರು ಆಗಮಿಸಿ ಹೋರಾಟಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.






























