
ದೇವನಹಳ್ಳಿ, ಸೆ. ೨೧: ರಾಜ್ಯದಲ್ಲಿ ಬರದಿಂದ ಕೃಷಿ ಕ್ಷೇತ್ರ ಮತ್ತು ರೈತರು ನಲುಗಿದ್ದಾರೆ. ರೈತರು ಮತ್ತು ಹೈನುಗಾರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸರ್ಕಾರ ಅವರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಜಿ.ಕೆ. ಕೃಷ್ಣರೆಡ್ಡಿ ಹೇಳಿದರು.
ಜೆಡಿಎಸ್ ಜಿಲ್ಲಾ ಘಟಕ ತಾಲ್ಲೂಕಿನ ಸೀಕಾಯನಹಳ್ಳಿ ಗೇಟ್ ಸಮೀಪ ಭಾನುವಾರ ಆಯೋಜಿಸಿದ್ದ ರಾಜ್ಯ ಕೋರ್ ಕಮಿಟಿಯ ಜಿಲ್ಲಾಮಟ್ಟದ ಪ್ರವಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಮೂರುವರೆ ವರ್ಷಗಳಲ್ಲಿ ಸುಮಾರು ೩,೦೦೦ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಮುಂದಾಗಬೇಕು. ಬರ ಪರಿಹಾರವಾಗಿ ಪ್ರತಿ ಎಕರೆಗೆ ?೩೫ ಸಾವಿರ ನೀಡಬೇಕು ಎಂದು ಒತ್ತಾಯಿಸಿದರು.
ಗೃಹಲಕ್ಷ್ಮಿ ಮಹಿಳೆಯರಿಗೆ ಯೋಜನೆಯಡಿ ನೀಡಬೇಕಾದ ಹಣವೂ ಸಮರ್ಪಕವಾಗಿ ತಲುಪುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು ೪೦ ತಿಂಗಳು ಕಳೆದಿದ್ದರೂ ೨೧ ರಿಂದ ೨೨ ತಿಂಗಳ ಅವಧಿಯಷ್ಟೇ ಹಣ ಹಲವು ಫಲಾನುಭವಿಗಳ ಖಾತೆಗೆ ಜಮೆಯಾಗಿದ್ದು, ಉಳಿದ ೧೮ ರಿಂದ ೧೯ ತಿಂಗಳ ಹಣ ಬಾಕಿಯಾಗಿದೆ. ಈ ಮೊತ್ತಕ್ಕೆ ಸಂಬಂಧಿಸಿದಂತೆ ?೩೫ ಸಾವಿರ ಕೋಟಿ ಏನಾಯಿತು? ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ದಲಿತರ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗುತ್ತಿದೆ. ಇದರಿಂದ ದಲಿತರ ಅಭಿವೃದ್ಧಿಗೆ ಮೀಸಲಾದ ಹಣದ ಉದ್ದೇಶವೇ ಬದಲಾಗುತ್ತಿದೆ ಎಂದು ಟೀಕಿಸಿದರು. ಇತರ ರಾಜ್ಯಗಳ ಚುನಾವಣೆಗೆ ರಾಜ್ಯದ ಹಣ ಬಳಕೆಯಾಗುತ್ತಿದೆ ಎಂಬ ಆರೋಪ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ಸಂಸದ ಮಲ್ಲೇಶ್ ಬಾಬು, ’ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಅಧಿಕಾರಾವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ಜೆಡಿಎಸ್ ಸಂಘಟನೆಯನ್ನು ಬಲಪಡಿಸಿ ೨೦೨೮ರ ವಿಧಾನಸಭಾ ಚುನಾವಣೆಗೆ ಸಜ್ಜಾಗಬೇಕು’ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಶಾಸಕ ಎ. ಮಂಜು, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಎಸ್. ಪಾಟೀಲ ನರಿಬೋಳ, ಎಲ್.ಎನ್. ನಾರಾಯಣ ಸ್ವಾಮಿ, ಶ್ರೀನಿವಾಸಮೂರ್ತಿ, ಇ. ಕೃಷ್ಣಪ್ಪ, ತಿಪ್ಪೇಸ್ವಾಮಿ, ನಿಸರ್ಗ ನಾರಾಯಣ ಸ್ವಾಮಿ, ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಮೈತ್ರಿ ಅಭ್ಯರ್ಥಿ ಎ.ಪಿ. ರಂಗನಾಥ್, ಜಿಲ್ಲಾಧ್ಯಕ್ಷ ಕೆ. ವಿ. ಮಂಜುನಾಥ್, ತಾಲೂಕು ಅಧ್ಯಕ್ಷ ಎಸ್. ಮಹೇಶ್ ಇದ್ದರು.

































