Home ಜಿಲ್ಲೆ ಮೈಸೂರು ಕ್ರಾಫರ್ಡ್ ಹಾಲ್‍ನಲ್ಲಿ ವಿವಿ ಪ್ರಗತಿ ಪರಿಶೀಲಿಸಿದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ

ಕ್ರಾಫರ್ಡ್ ಹಾಲ್‍ನಲ್ಲಿ ವಿವಿ ಪ್ರಗತಿ ಪರಿಶೀಲಿಸಿದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ

ಸಂಜೆವಾಣಿ ನ್ಯೂಸ್
ಮೈಸೂರು.ಅ.8:-
ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಬುಧವಾರ ನಗರz ಕ್ರಾಫರ್ಡ್ ಹಾಲ್‍ನಲ್ಲಿ ಮೈಸೂರು ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.


ಸಭೆಯಲ್ಲಿ ಮೈಸೂರು ವಿಶ್ವವಿದ್ಯಾಲಯ, ಮಂಡ್ಯ ವಿಶ್ವವಿದ್ಯಾಲಯ, ಹಾಸನ ವಿಶ್ವವಿದ್ಯಾಲಯ ಹಾಗೂ ಚಾಮರಾಜನಗರ ವಿಶ್ವವಿದ್ಯಾಲಯಗಳ ಸಮಗ್ರ ಕಾರ್ಯವೈಖರಿ ಮತ್ತು ಪ್ರಗತಿ ಕುರಿತು ಸಚಿವರು ವಿವರವಾದ ಮಾಹಿತಿ ಪಡೆದುಕೊಂಡರು.


ಕಟ್ಟಡ ಹಾಗೂ ಜಾಗದ ಪರಿಶೀಲನೆ: ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರತ್ಯೇಕಗೊಂಡ ಹಾಸನ, ಮಂಡ್ಯ ಮತ್ತು ಚಾಮರಾಜನಗರ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸ್ಥಳ ವಿಸ್ತೀರ್ಣ ಹಾಗೂ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗಳ ಕುರಿತು ಸಚಿವರು ಮಾಹಿತಿ ಸಂಗ್ರಹಿಸಿದರು.
ಕಾರ್ಯನಿರ್ವಹಿಸುತ್ತಿರುವ ಖಾಯಂ ಉಪನ್ಯಾಸಕರು, ಖಾಲಿ ಇರುವ ಹುದ್ದೆಗಳು, ಅತಿಥಿ ಉಪನ್ಯಾಸಕರು ಹಾಗೂ ಹೊರಗುತ್ತಿಗೆ ನೌಕರರ ವಿವರ ಪಡೆಯಲಾಯಿತು. ಇದರೊಂದಿಗೆ ಬೋಧಿಸಲಾಗುತ್ತಿರುವ ಕೋರ್ಸ್‍ಗಳು, ಯು.ಜಿ ಮತ್ತು ಪಿ.ಜಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ, ಆಯವ್ಯಯ ಹಾಗೂ ಆದಾಯ-ವೆಚ್ಚಗಳ ವಿವರಗಳನ್ನು ಪರಿಶೀಲಿಸಲಾಯಿತು.


ಮೈಸೂರು ವಿವಿಯಿಂದ ನೂತನ ವಿಶ್ವವಿದ್ಯಾಲಯಗಳು ಬೇರ್ಪಡೆಯಾದ ನಂತರ ಎದುರಾಗಿರುವ ಪಿಂಚಣಿ ಪಾವತಿಯ ಗೊಂದಲಗಳನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಖಾಯಂ ಉಪನ್ಯಾಸಕರ ಅಭಾವದಿಂದ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, ವಿಶ್ವವಿದ್ಯಾಲಯಗಳ ಸ್ವಂತ ಆದಾಯದಿಂದ ಅವರಿಗೆ ವೇತನ ನೀಡುವುದು ಹೊರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಅಧಿಕೃತ ಪತ್ರ ಬರೆಯುವಂತೆ ಸೂಚಿಸಿದ ಸಚಿವರು, ತಾವು ಖುದ್ದು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ಪರಿಹಾರ ಒದಗಿಸುವುದಾಗಿ ತಿಳಿಸಿದರು.


ಈ ಉನ್ನತ ಮಟ್ಟದ ಸಭೆಯಲ್ಲಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷ ಪೆÇ್ರ.ಎಸ್.ಆರ್.ನಿರಂಜನ, ಮೈಸೂರು ವಿವಿ ಕುಲಪತಿ ಪೆÇ್ರ.ಎನ್.ಕೆ.ಲೋಕನಾಥ್, ಹಾಸನ ವಿವಿ ಕುಲಪತಿ ತಾರಾನಾಥ್, ಮಂಡ್ಯ ವಿವಿ ಕುಲಪತಿ ಶಿವಚಿತ್ತಪ್ಪ ಹಾಗೂ ಸಚಿವರ ಆಪ್ತ ಕಾರ್ಯದರ್ಶಿ ಚಿದಂಬರ್.ಪಿ.ಎಂ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.