
ತುಮಕೂರು, ನ. ೨೬- ನಗರದ ರೇಣುಕ ವಿದ್ಯಾಪೀಠ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ರಚಿಸಿದ ಒಂದು ಸಾವಿರಕ್ಕೂ ಹೆಚ್ಚು ಆಕರ್ಷಕ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆ, ಕಲ್ಪನಾ ಶಕ್ತಿ ಮತ್ತು ಚಿಂತನೆಯನ್ನು ಚಿತ್ರಕಲೆಗಳ ಮೂಲಕ ಅನಾವರಣಗೊಳಿಸಿದ್ದು, ಪ್ರದರ್ಶನ ವೀಕ್ಷಣೆ ಮಾಡಿದ ಶಾಲೆ ಆಡಳಿತ ಮಂಡಳಿಯವರು ಹಾಗೂ ಪೋಷಕರು ಮಕ್ಕಳ ಕಲಾ ಪ್ರತಿಭೆ ಕಂಡು ಸಂಭ್ರಮಿಸಿದರು.
ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಈ ಪ್ರದರ್ಶನ ಮಕ್ಕಳಲ್ಲಿ ಹುದುಗಿರುವ ಕಲಾ ಪ್ರತಿಭೆ ಅನಾವರಣಗೊಳ್ಳಲು, ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಈ ಪ್ರದರ್ಶನ ವೇದಿಕೆಯಾಗಿತ್ತು. ಮಕ್ಕಳ ಚಿತ್ರಕಲಾಸಕ್ತಿಯನ್ನು, ಅವರ ಸೃಜನಶೀಲತೆಯನ್ನು ಉತ್ತೇಜಿಸುವುದು, ಅವರ ಕಲಾ ಕೌಶಲ್ಯಗಳನ್ನು ಇತರರಿಗೆ ಪರಿಚಯಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು. ಓದಿನ ಜತೆಗೆ ಕಲೆ, ಕ್ರೀಡೆಯಂತಹ ಪಠ್ಯೇತರ ಚಟುವಟಿಕೆಗಳ ಬಗ್ಗೆ ಮಕ್ಕಳನ್ನು ಪ್ರೋತ್ಸಾಹಿಸಿದರೆ ಅವರ ಸರ್ವತೋಮುಖ ಬೆಳವಣಿಗೆಯಾಗುತ್ತದೆ ಎಂಬುದು ಪ್ರದರ್ಶನ ವೀಕ್ಷಣೆ ಮಾಡಿದವರ ಅಭಿಪ್ರಾಯವಾಗಿತ್ತು.
ಚಿತ್ರ ರಚನೆಗೆ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ವಿಷಯ ನೀಡಿರಲಿಲ್ಲ. ಅವರು ತಮ್ಮ ಆಸಕ್ತಿಯ ವಿಷಯದಲ್ಲಿ ಕಲ್ಪನೆಯನ್ನು ಚಿತ್ರಗಳಲ್ಲಿ ಮೂಡಿಸಿ ಬಣ್ಣ ಹಚ್ಚಿದ್ದರು. ಪ್ರಕೃತಿ ಸೌಂದರ್ಯ, ಪರಿಸರ ಸಂರಕ್ಷಣೆ, ಹಬ್ಬಗಳು, ಪ್ರಾಣಿ-ಪಕ್ಷಿಗಳು, ಸಾಧಕ ಮಹನೀಯರು, ವಿಜ್ಞಾನದ ವಿಷಯಗಳೂ ವಿದ್ಯಾರ್ಥಿಗಳ ಕಲ್ಪನೆಯಲ್ಲಿ ಚಿತ್ತಾರಗೊಂಡಿದ್ದವು.
ಈ ಸಂದರ್ಭದಲ್ಲಿ ರೇಣುಕಾ ವಿದ್ಯಾಪೀಠ ಸಂಸ್ಥೆ ಅಧ್ಯಕ್ಷ ಟಿ.ಆರ್. ಲೋಕೇಶ್, ಕಾರ್ಯದರ್ಶಿ ಟಿ.ಜೆ.ಗಿರೀಶ್, ಖಜಾಂಚಿ ಜಿ.ಆರ್.ಎಸ್. ರವಿಶಂಕರ್, ನಿರ್ದೇಶಕ ಈಶ್ವರಯ್ಯ, ಮುಖ್ಯೋಪಾಧ್ಯಾಯರಾದ ಅಂಬಿಕ, ದೇವಿಕಾ, ಚಿತ್ರಕಲಾ ಶಿಕ್ಷಕ ಅಂಜದ್ ಪಾಷಾ ಕೆ.ಎಸ್, ವಿಜ್ಞಾನ ಶಿಕ್ಷಕಿ ಸುಧಾ ಆಚಾರ್ಯ ಹಾಗೂ ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು.























