Home ಜಿಲ್ಲೆ ಬೆಂಗಳೂರು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಪ್ರತಿಯೊಂದು ಕುಟುಂಬವೂ ಭಾಗವಹಿಸಿ

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಪ್ರತಿಯೊಂದು ಕುಟುಂಬವೂ ಭಾಗವಹಿಸಿ

ವಿಜಯಪುರ,ಜು.೦೧: ಕೇಂದ್ರ ಸರ್ಕಾರದ ಚುನಾವಣಾ ಆಯೋಗವು ನಡೆಸುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮದಲ್ಲಿ ಪ್ರತಿಯೊಂದು ಕುಟುಂಬವೂ ಸಕ್ರಿಯವಾಗಿ ಭಾಗವಹಿಸಬೇಕು. ಬಿಎಲ್‌ಒಗಳು ನೀಡುವ ಅರ್ಜಿಗಳನ್ನು ಸೂಕ್ಷ್ಮವಾಗಿ ಗಮನಿಸಿ,ನೂತನ ಭಾವಚಿತ್ರಗಳೊಂದಿಗೆ ಭರ್ತಿ ಮಾಡಿ ನೀಡುವ ಮೂಲಕ ಮುಂದಿನ ದಿನಗಳಲ್ಲಿ ಚುನಾವಣಾ ಪಟ್ಟಿಯಿಂದ ಹೆಸರು ಕೈಬಿಟ್ಟು ಹೋಗದಂತೆ ಜಾಗ್ರತೆ ವಹಿಸಬೇಕು ಎಂದು ಪುರಸಭಾ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಎಂ. ಸತೀಶ್ ಕುಮಾರ್ ತಿಳಿಸಿದರು.


ಪಟ್ಟಣದ ೭ನೇ ವಾರ್ಡ್‌ನ ನವಗ್ರಹಗಳ ದೇವಾಲಯದ ಬಳಿ ಬಿಎಲ್‌ಒಗಳು ಪ್ರತಿ ಮನೆ ಮನೆಗೆ ಭೇಟಿ ನೀಡಿ ನೂತನ ಮತದಾರರ ಗಣತಿ ಫಾರಂ ಅನ್ನು ವಿತರಿಸುವ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಅವರು ಮಾತನಾಡಿದರು.


ಇದೇ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿ ಹಾಗೂ ಬಿಎಲ್‌ಒ ಲತಾ ಮಾತನಾಡಿ,ಸಾರ್ವಜನಿಕರು ಗಣತಿಯ ನೂತನ ಅರ್ಜಿಗಳನ್ನು ಭರ್ತಿ ಮಾಡಲು ನಾವು ಸೂಕ್ತ ಮಾರ್ಗದರ್ಶನ ಹಾಗೂ ಸಹಾಯ ಮಾಡಲಿದ್ದೇವೆ.ಪ್ರಸ್ತುತ ನಮ್ಮ ಬಳಿ ೨೦೦೨ರ ಮತದಾರರ ಪಟ್ಟಿಯು ಲಭ್ಯವಿದೆ. ಇದರೊಂದಿಗೆ ಕುಟುಂಬದಲ್ಲಿ ಅಕ್ಟೋಬರ್ ೧ಕ್ಕೆ ೧೮ ವರ್ಷ ಪೂರ್ಣಗೊಳ್ಳುವ ಹೊಸ ಸದಸ್ಯರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಫಾರಂ ನಂಬರ್ ೬ ಅನ್ನು ಭರ್ತಿ ಮಾಡಿ ನೀಡಬೇಕು ಎಂದು ಮಾಹಿತಿ ನೀಡಿದರು.


ಮುಂದಿನ ಅಕ್ಟೋಬರ್ ೫ ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಲಿದ್ದು, ಸಾರ್ವಜನಿಕರು ಅದಕ್ಕೂ ಮುನ್ನ ಯಾವುದೇ ಆಕ್ಷೇಪಣೆಗಳು ಅಥವಾ ತಕರಾರುಗಳಿದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಿ ಸರಿಪಡಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.


ಈ ಜಾಗೃತಿ ಕಾರ್ಯಕ್ರಮದಲ್ಲಿ ಮಹಾಂತಿನ ಮಠದ ಕಾರ್ಯದರ್ಶಿ ವಿ. ವಿಶ್ವನಾಥ್, ಹನುಮಂತಪ್ಪ, ಎನ್. ಪ್ರಭುದೇವ್ ಸೇರಿದಂತೆ ವಾರ್ಡ್‌ನ ಪ್ರಮುಖರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.