Home ಜಿಲ್ಲೆ ಬೆಂಗಳೂರು ಅರ್ಹ ಮತದಾರರು ಹೆಸರಿಗೆ ನೋಂದಾಯಿಸಿ

ಅರ್ಹ ಮತದಾರರು ಹೆಸರಿಗೆ ನೋಂದಾಯಿಸಿ

ಕೋಲಾರ,ಜು,೧- ಪ್ರಜಾಪ್ರಭುತ್ವ ಮತ್ತು ಸಂಸದೀಯ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಮತ್ತು ಯಾವುದೇ ಅರ್ಹ ವ್ಯಕ್ತಿ ಪಟ್ಟಿಯಿಂದ ಹೊರಗುಳಿಯದಂತೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಎಸ್‌ಐಆರ್ ಉಸ್ತುವಾರಿ ಸಮಿತಿ ಅಧ್ಯಕ್ಷ ವಿ. ಆರ್. ಸುದರ್ಶನ್ ತಿಳಿಸಿದರು.


ತಾಲ್ಲೂಕಿನ ವೇಮಗಲ್‌ನ ತಮ್ಮ ನಿವಾಸದಿಂದಲೇ ವಿಶೇಷ ಸಮಗ್ರ ಮತಪಟ್ಟಿ ಪರಿಷ್ಕರಣೆ ಎಸ್‌ಐಆರ್ ಪ್ರಕ್ರಿಯೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.


ಗ್ರಾಮೀಣ ಭಾಗದ ಜನರು, ಅನಕ್ಷರಸ್ಥರು, ಬಡವರು, ಶೋಷಿತರು ಹಾಗೂ ಅಲೆಮಾರಿ ಸಮುದಾಯದವರ ನೆರವಿಗೆ ಧಾವಿಸಿ, ಅವರ ಹೆಸರುಗಳು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದರು. ಈ ಕುರಿತು ಕಾಂಗ್ರೆಸ್ ಪಕ್ಷದ ವತಿಯಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.


ಯಾರೆಲ್ಲ ಅರ್ಹ ಮತದಾರರು ಇದ್ದಾರೆ, ಅವರು ಮತದಾರರ ಪಟ್ಟಿಯಿಂದ ಹೊರಗೆ ಉಳಿಯಬಾರದು, ಮತದಾರರ ಪಟ್ಟಿಯನ್ನು ಮತ್ತು ಚುನಾವಣಾ ಆಯೋಗದ ವೆಬ್ ಸೈಟ್‌ನಲ್ಲಿಯೂ ಸಹ ಪ್ರಕಟವಾಗುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು, ಈ ದೇಶದ ಪ್ರಜೆಯಾದ ಯಾರು ಪಟ್ಟಿಯಿಂದ ಹೊರಗುಳಿಯಬಾರದು ಎಂದರು.


ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಪ್ರತಿಯೊಬ್ಬ ಅರ್ಹ ಮತದಾರರೂ ಅಗತ್ಯ ದಾಖಲೆಗಳನ್ನು ಒದಗಿಸಿ, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಸಲಹೆ ನೀಡಿದ ಅವರು, ಸಾರ್ವಜನಿಕರು ಸಿಬ್ಬಂದಿ ಜತೆ ಸೌಹಾರ್ದತೆಯಿಂದ ನಡೆದುಕೊಂಡು ಕೇಳಿದ ದಾಖಲೆಗಳನ್ನು ಒದಗಿಸಬೇಕು ಎಂದು ಕೋರಿದರು.


ಮತದಾರರ ಪಟ್ಟಿಯ ಪರಿಷ್ಕರಣೆ ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಲ್ಲ; ಅದು ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುವ ಕಾರ್ಯವಾಗಿದೆ. ನಿಖರ ಮತ್ತು ದೋಷರಹಿತ ಮತದಾರರ ಪಟ್ಟಿಯಿಂದ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ಅರ್ಹ ನಾಗರಿಕರು ಗಣತಿ ನಮೂನೆಯನ್ನು ತಪ್ಪದೇ ಭರ್ತಿ ಮಾಡಿ ಸಲ್ಲಿಸುವಂತೆ ಹೇಳಿದರು.


ಪ್ರಜಾಪ್ರಭುತ್ವ ವ್ಯವಸ್ಥೆಯ ಬೇರನ್ನು ಗಟ್ಟಿಗೊಳಿಸುವಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಪಾತ್ರ ಹಿರಿದಾಗಿದ್ದು, ರಾಜಕೀಯ ಪಕ್ಷಗಳು, ಯುವ ಮತದಾರರು, ಬೂತ್ ಮಟ್ಟದ ಅಧಿಕಾರಿಗಳು ಮತ್ತು ಏಜೆಂಟರು ಸೇರಿದಂತೆ ಸಾರ್ವಜನಿಕರೆಲ್ಲರೂ ಇದರಲ್ಲಿ ಸಕ್ರಿಯವಾಗಿ ಕೈಜೋಡಿಸಬೇಕು ಎಂದು ವಿನಂತಿಸಿದರು.


ಈ ಸಂದರ್ಭದಲ್ಲಿ ತಹಶಿಲ್ದಾರ್ ಎಚ್ ಶ್ರೀನಿವಾಸ್ ಮಾತನಾಡಿ, ತಾಲ್ಲೂಕಿನಾದ್ಯಂತ ಸಮಗ್ರ ಮತಪಟ್ಟಿ ಪರಿಷ್ಕರಣೆಗೆ ಅಗತ್ಯ ಸಿಬ್ಬಂದಿಯನ್ನು ನೇಮಿಸಲಾಗಿದೆ, ಅವರಿಗೆ ಈಗಾಗಲೇ ಗಣತಿ ಕಾರ್ಯ ನಡೆಸಲು ಅಗತ್ಯವಾದ ತರಬೇತಿಯನ್ನೂ ನೀಡಲಾಗಿದೆ ಎಂದು ತಿಳಿಸಿದರು.


ಸಾರ್ವಜನಿಕರು ಗಣತಿ ಸಿಬ್ಬಂದಿ ಕೇಳುವ ಅಗತ್ಯ ಮಾಹಿತಿಯನ್ನು ನೀಡಿ ಪರಿಷ್ಕರಣೆ ಕಾರ್ಯ ಅತಿ ಉತ್ತಮವಾಗಿಯೂ ಹಾಗೂ ಯಾವುದೇ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಹೊರಗುಳಿಯದಂತೆ ಮಾಡುವ ತಮ್ಮ ಪ್ರಯತ್ನಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.


ವೇಮಗಲ್ ಹೋಬಳಿ ನೋಡಲ್ ಅಧಿಕಾರಿ ಗೋವಿಂದಪ್ಪ, ಪಪಂ ಮುಖ್ಯಾಧಿಕಾರಿ ವೆಂಕಟೇಶ್, ರಾಜಸ್ವ ನೀರಿಕ್ಷಕರಾದ ಅಜಯ್, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಎಂ ಮುನಿಯಪ್ಪ, ಯೋಜನಾ ಪ್ರಾಧಿಕಾರ ಸದಸ್ಯ ನಾಗರಾಜ್, ಹೊಟೆಲ್ ರಾಜಣ್ಣ, ಈಡಿಗರ ರವಿಚಂದ್ರ, ಜೆಸಿಬಿ ಶಶಿಕುಮಾರ್, ಶ್ರೀನಿವಾಸ್, ಗ್ರಾಮ ಲೆಕ್ಕಾಧಿಕಾರಿ ಸಲ್ಮಾನ್, ಬಿಎಲ್‌ಓ ನಾಗರಾಜ್, ಇಮ್ರಾನ್ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ತಹಶೀಲ್ದಾರ್ ಶ್ರೀನಿವಾಸ್, ವೇಮಗಲ್ -ಕುರುಗಲ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್. ಎಂ. ವೆಂಕಟೇಶ್,ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಗೋವಿಂದಪ್ಪ, ರಾಜಸ್ವನೀರಿಕ್ಷಕ ಅಜಯ್ ಕುಮಾರ್,ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ವಿ.ಎಂ.ಮುನಿಯಪ್ಪ, ವೇಮಗಲ್ -ನರಸಾಪುರ ಯೋಜನಾ ಪ್ರಾಧಿಕಾರದ ಸದಸ್ಯ ಬಿ.ನಾಗರಾಜ್, ಗ್ರಾ.ಪಂ ಮಾಜಿ ಅಧ್ಯಕ್ಷ ನಾಗರಾಜ್, ಶಂಕರಪ್ಪ, ಗ್ರಾಮ ಲೆಕ್ಕಧಿಕಾರಿ ಸಲ್ಮಾನ್, ಬಿ.ಎಲ್.ಓ ನಾಗರಾಜ್, ಬಿ. ಎಲ್. ಎ ೨ಗಳಾದ ಹೋಟೆಲ್ ರಾಜಣ್ಣ, ಮಂಜುನಾಥ್, ಇಮ್ರಾನ್ ಮತ್ತಿತರರು ಹಾಜರಿದ್ದರು.