
ಮುಳಬಾಗಿಲು ಸೆ.೯- ತಾಲೂಕಿನಲ್ಲಿ ಪದೇಪದೇ ವಿದ್ಯುತ್ ಕಡಿತ ಹಾಗೂ ಲೋಡ್‌ಶೆಡ್ಡಿಂಗ್‌ನಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು,ಸಮಸ್ಯೆಯನ್ನು ಕೂಡಲೇ ಬಗೆಹರಿಸದಿದ್ದರೆ ರೈತರನ್ನು ಸಂಘಟಿಸಿ ಬೆಸ್ಕಾಂ ಕಚೇರಿ ಎದುರು ಶಾಂತಿಯುತ ಧರಣಿ ನಡೆಸಲಾಗುವುದು ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಉಪಾಧ್ಯಕ್ಷ ಅರಹಳ್ಳಿ ಶ್ರೀನಿವಾಸಗೌಡ ಎಚ್ಚರಿಸಿದರು.
ನಗರದ ತಾಲೂಕು ಕಚೇರಿ ಹಾಗೂ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿ,ಇಂಧನ ಸಚಿವರು, ಜಿಲ್ಲಾಧಿಕಾರಿ ಹಾಗೂ ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಕೊಳವೆಬಾವಿ ಮತ್ತು ಪಂಪ್‌ಸೆಟ್‌ಗಳನ್ನು ಅವಲಂಬಿಸಿರುವ ರೈತರಿಗೆ ನಿರಂತರ ವಿದ್ಯುತ್ ಪೂರೈಕೆಯಾಗದ ಕಾರಣ ಬೆಳೆಗಳಿಗೆ ಸಮರ್ಪಕವಾಗಿ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ, ಲಕ್ಷಾಂತರ ರೂಪಾಯಿ ಸಾಲ ಮಾಡಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳನ್ನು ಬೆಳೆದಿರುವ ರೈತರಿಗೆ ವಿದ್ಯುತ್ ವ್ಯತ್ಯಯ ಮತ್ತಷ್ಟು ಆರ್ಥಿಕ ಹೊರೆ ತಂದಿದೆ,ಮಳೆಗಾಲದಲ್ಲಿಯೇ ಬೇಸಿಗೆಗಿಂತಲೂ ತೀವ್ರವಾಗಿ ವಿದ್ಯುತ್ ಸಮಸ್ಯೆ ಎದುರಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಬೆಳೆ ಹಾನಿಯಾದಲ್ಲಿ ಸರ್ಕಾರ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಬಿಕೆಎಸ್ ನಗರ ಘಟಕದ ಅಧ್ಯಕ್ಷ ಬೆಮೇಲ್ ಎಂ.ಎನ್. ಧನಂಜಯ ಮಾತನಾಡಿ, ಸಂಜೆ ವೇಳೆಯಿಂದ ರಾತ್ರಿ ೯ ಗಂಟೆಯವರೆಗೆ ಪದೇಪದೇ ವಿದ್ಯುತ್ ಕಡಿತವಾಗುತ್ತಿರುವುದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸ, ವ್ಯಾಪಾರ-ವಹಿವಾಟು ಸೇರಿದಂತೆ ಜನಜೀವನಕ್ಕೆ ತೊಂದರೆಯಾಗುತ್ತಿದೆ. ತಾಲೂಕಿನ ಎಲ್ಲ ಟ್ರಾನ್ಸ್‌ಫಾರ್ಮರ್‌ಗಳನ್ನು ತಪಾಸಣೆ ನಡೆಸಿ, ಅಗತ್ಯವಿರುವ ಕಡೆ ಆಯಿಲ್ ತುಂಬಿಸುವುದು ಹಾಗೂ ನಿರ್ವಹಣಾ ಕಾರ್ಯ ಕೈಗೊಂಡು ವಿದ್ಯುತ್ ಪೂರೈಕೆಯನ್ನು ಸುಧಾರಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾ ಕೋಶಾಧ್ಯಕ್ಷ, ವಕೀಲ ವಿ. ಜಯಪ್ಪ ಮಾತನಾಡಿ, ಸುಟ್ಟಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ತ್ವರಿತವಾಗಿ ಬದಲಾಯಿಸಬೇಕು. ಹಾಳಾದ ವಿದ್ಯುತ್ ತಂತಿ ಹಾಗೂ ಫ್ಯೂಸ್ ಕಿಟ್‌ಗಳನ್ನು ದುರಸ್ತಿಗೊಳಿಸಬೇಕು ಎಂದರು.
ಬಿಕೆಎಸ್ ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಎ. ಅಪ್ಪಾಜಿಗೌಡ, ತಾಲೂಕು ಅಧ್ಯಕ್ಷ ಉಗಿನಿ ಆರ್. ನಾರಾಯಣಗೌಡ, ಉಪಾಧ್ಯಕ್ಷ ಕೀಲಾಗಾಣಿ ಕೆ.ಆರ್. ವೆಂಕಟರಾಮಾಚಾರಿ, ಕಾರ್ಯದರ್ಶಿ ಎಚ್. ಗೊಲ್ಲಹಳ್ಳಿ ಬಿ.ಎಂ. ಸೋಮೇಶ್, ಮಹಿಳಾ ಪ್ರಮುಖ್ ಮುಡಿಯನೂರು ಜಯಲಕ್ಷ್ಮಮ್ಮ, ಯುವ ಪ್ರಮುಖ್ ವೈ. ಗೊಲ್ಲಹಳ್ಳಿ ಎಸ್.ವಿ. ಭಾಸ್ಕರ್, ನಗರ ಪ್ರಮುಖ್ ಕೆ. ಮಧುಸೂದನ್, ತಾಯಲೂರು ಹೋಬಳಿ ಅಧ್ಯಕ್ಷ ತಿರುಮನಹಳ್ಳಿ ಚಂದ್ರಶೇಖರ್ ಮತ್ತಿತರರು ಇದ್ದರು.
































