
ಭಾಗ್ಯನಗರ,ಜು.೦೧: ತಾಲ್ಲೂಕು ದಲಿತ ಸಂಘರ್ಷ ಸಮಿತಿ ಶಾಖೆಯ ಮುಖಂಡರು ಅರಣ್ಯ ಅಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ಜಿಲ್ಲಾ ಸಂಘಟನಾ ಸಂಚಾಲಕರಾದ ಬಿ. ವಿ. ವೆಂಕಟರಮಣ,ಬಾಗೇಪಲ್ಲಿ ತಾಲ್ಲೂಕು, ಮಿಟ್ಟೆಮರಿ ಹೋಬಳಿ, ಪೈಪಾಳ್ಯ ಗ್ರಾಮದ ಸರ್ವೆ ನಂ. ೧೦ ಸರ್ವೆ ನಂ. ೧೭ ಮತ್ತು ಸರ್ವೆ ನಂ. ೧೫೮ ರಲ್ಲಿ ದರಖಾಸ್ತಿನಲ್ಲಿ ಮಂಜೂರಾಗಿ ಸ್ವಾಧಿನಾನುಭವದಲ್ಲಿದ್ದ ದಲಿತರ ಮತ್ತು ಬಡ ರೈತರ ಜಮೀನುಗಳನ್ನು ಅರಣ್ಯ ಇಲಾಖೆಯವರು ಮುಟ್ಟುಗೋಲು ಹಾಕಿಕೊಂಡಿದ್ದು, ಕೂಡಲೇ ಅದನ್ನು ಕೈ ಬಿಡಬೇಕು ಎಂದರು.
ಪಾತಪಾಳ್ಯ ಹೋಬಳಿ, ವಂಗಾರ್ಲಪಲ್ಲಿ ಗ್ರಾಮದ ಸರ್ವೆ ನಂ.೬೯ರಲ್ಲಿ ೧೮೦ಎಕರೆ ಜಮೀನಿನಲ್ಲಿ ಸರ್ಕಾರದಿಂದ ಮಂಜೂರಾಗಿ ಸಾಗುವಳಿ ಚೀಟಿ, ಪಹಣಿ, ಗ್ರಾಂಟ್ ಕಾಫಿ, ಕಿಮ್ಮತ್ತು ಹಾಗೂ ದರಖಾಸ್ತು ಕಡತಗಳು ಇದ್ದು,ಸ್ವಾಧೀನದಲ್ಲಿರುವ ಬಡ ರೈತರ ಮತ್ತು ದಲಿತರ ಜಮೀನನ್ನು ಅರಣ್ಯ ಅಧಿಕಾರಿಗಳು ದೌರ್ಜನ್ಯದಿಂದ ಮುಟ್ಟುಗೋಲು ಹಾಕಿರುವ ಭೂಮಿಯನ್ನು ವಾಪಸ್ ಬಿಡಬೇಕು ಎಂದು ಒತ್ತಾಯಿಸಿದರು.
ಇದಲ್ಲದೆ, ಪಾತಪಾಳ್ಯ ಹೋಬಳಿ, ಸುಜ್ಞಾನಂಪಲ್ಲಿ ಗ್ರಾಮದ ಸರ್ವೆ ನಂ.೧೦೨ ರ ಸರ್ಕಾರಿ ಜಮೀನಿನಲ್ಲಿ ಅನುಭೋಗದಲ್ಲಿರುವ ಕಲ್ಲಿನಲ್ಲಿ ಗ್ರಾಮದ ದಲಿತರಿಗೆ ಅರಣ್ಯ ಅಧಿಕಾರಿಗಳು ನೋಟಿಸ್ ಕೊಟ್ಟು ನ್ಯಾಯಾಲಯಕ್ಕೆ ಬರಬೇಕೆಂದು ಕಿರುಕುಳ ನೀಡುತ್ತಿರುವುದನ್ನು ನಿಲ್ಲಿಸಬೇಕು. ಜೊತೆಗೆ ಕಸಬಾ ಹೋಬಳಿ, ಬಾಲರೆಡ್ಡಿ ಪಲ್ಲಿ ಗ್ರಾಮದ ಸರ್ವೆ ನಂ. ೨೫ ರಲ್ಲಿರುವ ಸರ್ಕಾರಿ ಖರಾಬು ಜಮೀನಿನಲ್ಲಿ ಉಳುಮೆ ಮಾಡುತ್ತಿರುವವರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ತೊಂದರೆ ಮಾಡುವುದು ನಿಲ್ಲಿಸಬೇಕು.ಗೂಳೂರು ಹೋಬಳಿ, ದೇವಿಕುಂಟೆ ಗ್ರಾಮದ ದಲಿತರಿಗೆ ಮತ್ತು ರೈತರಿಗೆ ತಮ್ಮ ಜಮೀನಿಗಳಿಗೆ ಹೋಗಲು ನ್ಯಾಯಾಲಯದ ಆದೇಶವಿದ್ದರೂ ಸಹ ಅರಣ್ಯ ಇಲಾಖೆಯವರು ರಸ್ತೆಯನ್ನು ಬಿಡದೆ ತೊಂದರೆ ಮಾಡುವುದನ್ನು ನಿಲ್ಲಿಸಬೇಕು.ಅಲ್ಲದೆ, ಮಿಟ್ಟೆಮರಿ ಹೋಬಳಿ, ಚೊಕ್ಕಂಪಲ್ಲಿ, ಗ್ರಾಮದ ದಲಿತರಿಗೆ ತಮ್ಮ ಜಮೀನುಗಳಿಗೆ ಹೋಗಲು ಅರಣ್ಯ ಗಡಿಯಲ್ಲಿ ಬಿಡದೆ ದೌರ್ಜನ್ಯ ಮಾಡುವುದನ್ನು ನಿಲ್ಲಿಸಬೇಕು.
ತಾಲ್ಲೂಕಿನಾದ್ಯಾಂತ ಎಲ್ಲಾ ಜಾತಿಯ ರೈತರು ಮತ್ತು ದಲಿತರು ಉಳುಮೆ ಮಾಡುತ್ತಿರುವ ಜಮೀನುಗಳ ಮೇಲೆ ಡೀಮ್ ಫಾರೆಸ್ಟ್ ಎಂದು ಹೇಳಿಕೊಂಡು ತೊಂದರೆ ಮಾಡುತ್ತಿರುವುದನ್ನು ನಿಲ್ಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಸಿ.ಜಿ.ಗಂಗಪ್ಪ,ತಾಲ್ಲೂಕು ಸಂಚಾಲಕರು ಪೈಪಾಳ್ಯ ರವಿ, ಎನ್. ಎ. ವೆಂಕಟೇಶ್,ಇಸ್ಕೊಲಪ್ಪ,,ಶ್ರೀರಂಗಪ್ಪ, ಜಿ. ವಿ. ಗಂಗಪ್ಪ, ತಾಲೂಕು ಸಂಘಟನಾ ಸಂಚಾಲಕರಾದ ಎ. ಪ್ರಕಾಶ, ಸಿ. ವಿ. ಮಂಜುನಾಥ, ಹೆಚ್. ಸಿ. ಚೌಡಯ್ಯ ಸೂರಿನಾರಾಯಣ, ಎ. ವಿ. ಶ್ರೀನಿವಾಸ, ಭಾನುಪಕಾಶ್, ನಂಜುಂಡಪ್ಪ, ವಿ. ಶ್ರೀನಿವಾಸ್, ಬಾಬು ಗಂಗಾಧರ, ಅಂಜಿನಪ್ಪ, ಕೆ.ನರಸಿಂಹಯ್ಯ, ಚೊಕೊಂಪಲ್ಲಿ ನರಸಿಂಹಪ್ಪ, ಪಿ. ವೆಂಕಟರಾಯಪ್ಪ, ಇಂದ್ರ, ರಾಜು, ನರಸಿಂಹಯ್ಯ ಮುಂತಾದವರು ಹಾಜರಿದ್ದರು.































