Home ಜಿಲ್ಲೆ ಕಲಬುರಗಿ ಆರೋಗ್ಯವೇ ಭಾಗ್ಯವೆಂದ ಡಾ.ಅಪ್ಪ

ಆರೋಗ್ಯವೇ ಭಾಗ್ಯವೆಂದ ಡಾ.ಅಪ್ಪ

ಕಲಬುರಗಿ,ಸೆ.4: ಉತ್ತಮ ಆರೋಗ್ಯವೇ ಮನುಷ್ಯನ ಜೀವನದ ಅತ್ಯಂತ ಅಮೂಲ್ಯ ಸಂಪತ್ತು ಎಂದು ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ನಂಬಿದ್ದರು ಎಂದು ಶರಣಬಸವ ಆಯುರ್ವೇದಿಕ ಆಸ್ಪತ್ರೆಯ ವೈದ್ಯರಾದ ಡಾ.ವಿಜಯಲಕ್ಷ್ಮಿ ಸಂಗಾವಿ ಅವರು ಹೇಳಿದರು.
ಅಖಿಲ ಭಾರತ ಶಿವಾನುಭವ ಮಂಟಪ ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ 40 ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಗುರುವಾರ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ಮತ್ತು ಆರೋಗ್ಯದ ಅರಿವು ವಿಷಯ ಕುರಿತು ಮಾತನಾಡಿ, ಪೂಜ್ಯರು ಆರೋಗ್ಯದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಅವರು ತಮ್ಮ ಸಂಸ್ಥೆಯಲ್ಲಿ ಆಯುರ್ವೇದಿಕ ಆಸ್ಪತ್ರೆಯನ್ನು ತೆರೆದು ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಕೇರಳದ ನುರಿತ ಆಯುರ್ವೇದಿಕ ವೈದ್ಯರಿಂದ ತಮ್ಮ ವೈದ್ಯ ಸಿಬ್ಬಂದಿಯವರಿಗೆ ತರಬೇತಿ ಕೊಡಸಿದ್ದಾರೆ. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಸ್ವರ್ಣಬಿಂದು ಪ್ರಾಶನ ನೀಡುವ ವ್ಯವಸ್ಥೆ ಮಾಡಿಸಿದ್ದಾರೆ. ಸಿಬ್ಬಂದಿಗಳಿಗೆ ನಿರಂತರವಾಗಿ ಆರೋಗ್ಯ ಅರಿವು ಮೂಡಿಸುತ್ತಿದ್ದರು.
ಉತ್ತಮ ಆರೋಗ್ಯ ಉತ್ತಮ ಆಹಾರ, ನೀರು ಕುಡಿಯುವುದರ ಮಹತ್ವ, ಕಾಲಕ್ಕೆ ತಕ್ಕಂತೆ ಹಣ್ಣುಗಳ ಸೇವನೆ ಕುರಿತು ತಿಳಿಸುತ್ತಿದ್ದರು. ಅವರೊಬ್ಬ ಆಯುರ್ವೇದಿಕ ಬಗ್ಗೆ ತಿಳಿದುಕೊಂಡಿರುವ ವೈದ್ಯರಾಗಿದ್ದರು.
ಅವರ ಸೇವಾ ದೃಷ್ಟಿಯಲ್ಲಿ ಮನುಷ್ಯನ ಸಮಗ್ರ ಅಭಿವೃದ್ಧಿಗೆ ದೈಹಿಕ ಆರೋಗ್ಯ, ಮಾನಸಿಕ ನೆಮ್ಮದಿ ಮತ್ತು ಸಾಮಾಜಿಕ ಸ್ವಾಸ್ಥ್ಯ ಬಹಳ ಮುಖ್ಯವಾಗಿತ್ತು.
ಶರಣಬಸವೇಶ್ವರ ಸಂಸ್ಥಾನದ ದಾಸೋಹ ಪರಂಪರೆಯ ಮೂಲ ಆಶಯಗಳಲ್ಲಿ ಮಾನವ ಸೇವೆ ಪ್ರಮುಖವಾದುದು. ಆರೋಗ್ಯ ಸೇವೆ ಮತ್ತು ಆರೋಗ್ಯ ಜಾಗೃತಿಯೂ ಸಮಾಜಮುಖಿ ದಾಸೋಹದ ಒಂದು ರೂಪವಾಗಿದೆ.
ಪೂಜ್ಯ ಅಪ್ಪನವರ ಕಾಳಜಿ ಏನೆಂದರೆ ಆರೋಗ್ಯದ ಅರಿವು ಮೂಡಿಸುವುದು, ಅನಾರೋಗ್ಯದಲ್ಲಿರುವವರಿಗೆ ನೆರವಾಗುವುದು ಮತ್ತು ಆರೋಗ್ಯಕರ ಜೀವನಶೈಲಿಯ ಕುರಿತು ಜಾಗೃತಿ ಮೂಡಿಸುವುದಾಗಿತ್ತು. ಪೂಜ್ಯರು ತಮ್ಮ ಸಂಸ್ಥೆಯ ಕ್ಯಾಲೆಂಡರ್ ನಲ್ಲಿ ಆರೋಗ್ಯ ಕುರಿತು ಅನೇಕ ಮಾಹಿತಿಗಳನ್ನು ನೀಡುವುದರ ಮೂಲಕ ಜನರ ಆರೋಗ್ಯದ ಅರಿವು ಮೂಡಿಸುತ್ತಿದ್ದರು ಎಂದು ಹೇಳಿದರು.