Home ಜಿಲ್ಲೆ ತಹಶೀಲ್ದಾರ್ ಸಂಜಯ ಇಂಗಳೆ ಅವರಿಂದ ಮನೆ-ಮನೆಗೆ ಭೇಟಿ: ಮತದಾರರ ಗಣತಿ ಕಾರ್ಯ ಪರಿಶೀಲನೆ

ತಹಶೀಲ್ದಾರ್ ಸಂಜಯ ಇಂಗಳೆ ಅವರಿಂದ ಮನೆ-ಮನೆಗೆ ಭೇಟಿ: ಮತದಾರರ ಗಣತಿ ಕಾರ್ಯ ಪರಿಶೀಲನೆ

ಚಡಚಣ:ಜು.6: ತಾಲೂಕಿನಾದ್ಯಂತ ಸಾರ್ವಜನಿಕರಲ್ಲಿ ಮತದಾನದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರವಿವಾರ ತಹಶೀಲ್ದಾರ್ ಸಂಜಯ ಇಂಗಳೆ ಅವರು ವ್ಯಾಪಕ ಪ್ರವಾಸ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಗ್ರಾಮಗಳ ಮನೆ-ಮನೆಗೆ ಭೇಟಿ ನೀಡಿದ ಅವರು, ಸಾರ್ವಜನಿಕರಿಗೆ ಮತದಾರರ ವಿಶೇಷ ಪರಿಷ್ಕರಣೆ (SIಖ) ಕುರಿತು ಸುದೀರ್ಘ ಮಾಹಿತಿ ನೀಡಿದರು.

ಇದೇ ವೇಳೆ ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿ.ಎಲ್.ಒ (ಃಐಔ) ಗಳ ಕಾರ್ಯವೈಖರಿಯನ್ನು ತಹಶೀಲ್ದಾರರು ಪರಿಶೀಲಿಸಿದರು. “ಪ್ರತಿಯೊಬ್ಬ ಬಿ.ಎಲ್.ಒ ಕಡ್ಡಾಯವಾಗಿ ನಿಯಮದಂತೆ ಪ್ರತಿಯೊಂದು ಮನೆಗೂ ಭೇಟಿ ನೀಡಬೇಕು. ಮತದಾರರಿಗೆ ಸೂಕ್ತ ಮಾಹಿತಿ ಹಾಗೂ ತಿಳುವಳಿಕೆ ನೀಡಿ ಅವರಿಂದ ಅಗತ್ಯ ವಿವರಗಳನ್ನು ಪಡೆದುಕೊಳ್ಳಬೇಕು” ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಲ್ಲದೆ, ಬಿ.ಎಲ್.ಒ ಗಳಿಗೆ ಕ್ಷೇತ್ರ ಮಟ್ಟದಲ್ಲಿ ಕೆಲಸ ಮಾಡಲು ಯಾವುದೇ ಸಮಸ್ಯೆಗಳಿದ್ದರೆ, ತಕ್ಷಣ ಅದನ್ನು ತಮ್ಮ ಗಮನಕ್ಕೆ ತರಲು ತಿಳಿಸಿದರು.

ನಾಗಠಾಣ ಮತಕ್ಷೇತ್ರದಲ್ಲಿ ಶೇ. 63.02 ಪ್ರಗತಿ
ಪ್ರಗತಿ ಪರಿಶೀಲನೆಯ ಬಳಿಕ ಮಾಹಿತಿ ನೀಡಿದ ತಹಶೀಲ್ದಾರ್ ಸಂಜಯ ಇಂಗಳೆ, “ನಾಗಠಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 2,79,083 ಮತದಾರರಿದ್ದಾರೆ. ಇವರ ಪೈಕಿ ಈಗಾಗಲೇ 1,75,890 ಮತದಾರರಿಗೆ ಇ.ಎಫ್.ಎಸ್ (ಇಈS) ನಮೂನೆಗಳನ್ನು ಯಶಸ್ವಿಯಾಗಿ ವಿತರಿಸಲಾಗಿದೆ. ಈ ಮೂಲಕ ಪ್ರಸ್ತುತ ತಾಲೂಕಿನಲ್ಲಿ ಒಟ್ಟು ಶೇಕಡಾ 63.02 ರಷ್ಟು ಗಣನೀಯ ಪ್ರಗತಿ ಸಾಧಿಸಲಾಗಿದೆ,” ಎಂದು ತಿಳಿಸಿದರು.

ಬರಡೋಲ, ದೇ.ನಿಂಬರಗಿ ಹಾಗೂ ಇಂಚಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಗಣತಿ ಕಾರ್ಯವನ್ನು ಶೀಘ್ರದಲ್ಲೇ ಪೂರ್ಣಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದ್ದು, ಈ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಕೋರಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಧೋತ್ರೆ, ಸೋಮು ಬಡಿಗೇರ ಸೇರಿದಂತೆ ಪ್ರಮುಖರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.